
ಬೆಂಗಳೂರು: ಕುಂಭಮೇಳದ ಪ್ರವಾಸದ ಹೆಸರಿನಲ್ಲಿ 100 ಕ್ಕೂ ಹೆಚ್ಚು ಜನರಿಂದ ಹಣ ಪಡೆದು ಲಕ್ಷಾಂತರ ರೂ ವಂಚನೆ ಮಾಡಿದ್ದ ಆರೋಪಿಯನ್ನು ಗೋವಿಂದರಾಜನಗರ ಪೊಲೀಸರು ಬಂಧಿಸಿದ್ದಾರೆ.
ಬಳ್ಳಾರಿ ಮೂಲದ ರಾಘವೇಂದ್ರ ರಾವ್ ಬಂಧಿತ ಆರೋಪಿ. ಕುಂಭಮೇಳಕ್ಕೆ ಕರೆದುಕೊಂಡು ಹೋಗುವುದಾಗಿ ಜಾಹಿರಾತು ನೀಡಿ 100 ಕ್ಕೂ ಹೆಚ್ಚು ಮಂದಿಯಿಂದ ಹಣ ವಸೂಲಿ ಮಾಡಿದ್ದಾನೆ. ಸುಮಾರು 70 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹ ಮಾಡಿದ್ದಾನೆ. ಈತನ ವಿರುದ್ಧ 21 ಮಂದಿ ದೂರು ದಾಖಲಿಸಿದ್ದಾರೆ.
ವಿಕೆಡಬ್ಲ್ಯು ಲೇಔಟ್ ನಿವಾಸಿಯಾಗಿರುವ ರಾಘವೇಂದ್ರ ರಾವ್ ಈ ಹಿಂದೆ ಪ್ರಾದೇಶಿಕ ಸುದ್ದಿ ವಾಹಿನಿಯೊಂದರಲ್ಲಿ ವರದಿಗಾರರಾಗಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗಿದೆ. ಪಾಂಚಜನ್ಯ ಟೂರ್ಸ್ ಮತ್ತು ಟ್ರಾವೆಲ್ಸ್ ಹೆಸರಿನಲ್ಲಿ ಪ್ರವಾಸ ಪ್ಯಾಕೇಜ್ ರಚಿಸಿದ್ದ. ಕುಂಭಮೇಳ ಪ್ರವಾಸದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರ ಮಾಡಿದ್ದನು.
ಅಯೋಧ್ಯೆ, ಕಾಶಿ, ಪ್ರಯಾಗ್ರಾಜ್, ವಾರಣಾಸಿ ಸೇರಿದಂತೆ ವಿವಿಧ ತೀರ್ಥ ಕ್ಷೇತ್ರಗಳಿಗೆ 14 ದಿನದ ಪ್ರವಾಸಕ್ಕೆ ಕರೆದುಕೊಂಡು ಹೋಗುವುದಾಗಿ ಜಾಹೀರಾತು ನೀಡಿದ್ದಾನೆ. 7 ದಿನಗಳ ಪ್ಯಾಕೇಜ್‌ಗೆ ತಲಾ 49,000 ರೂ. ಪಡೆದು ಜನರಿಗೆ ಮೋಸ ಮಾಡಿದ್ದಾನೆ. ಯಾತ್ರಾರ್ಥಿಗಳು ಇವನ ಜಾಹಿರಾತು ನಂಬಿ ಹಣ ನೀಡಿದ್ದಾರೆ.
ಜನರ ನಂಬಿಕೆ ಗಳಿಸಲು ಆರಂಭದಲ್ಲಿ ಒಂದು ಸಣ್ಣ ಗುಂಪನ್ನು ಪ್ರವಾಸಕ್ಕೆ ಕರೆದೊಯ್ದು, ಅವರ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ್ದ. ಎರಡನೇ ಮತ್ತು ಮೂರನೇ ಬ್ಯಾಚ್‌ನ ಜನರಿಗೆ ತಮ್ಮ ವಿಮಾನ ಟಿಕೆಟ್‌ಗಳನ್ನು ರದ್ದುಪಡಿಸಿ ವಂಚಿಸಿದ್ದಾನೆ ಎಂಬುದಾಗಿ ತಿಳಿದುಬಂದಿದೆ. ಇದಾದಾ ನಂತರ, ಅವರು ಪೊಲೀಸರಿಗೆ ದೂರು ದಾಖಲಿಸಿದ್ದಾರೆ.
Advertisement