News Headlines 12-03-25 | ಗ್ಯಾರಂಟಿ ಅನುಷ್ಠಾನ ಸಮಿತಿ ರದ್ದತಿಗೆ BJP ಆಗ್ರಹ; KGF ಗಲಾಟೆ ಪ್ರಕರಣ: ಮುನಿಯಪ್ಪಗೆ ಜಾಮೀನು; ಆಟೋ ದರ ಏರಿಕೆ ಶಾಕ್!

News Headlines 12-03-25 | ಗ್ಯಾರಂಟಿ ಅನುಷ್ಠಾನ ಸಮಿತಿ ರದ್ದತಿಗೆ BJP ಆಗ್ರಹ; KGF ಗಲಾಟೆ ಪ್ರಕರಣ: ಮುನಿಯಪ್ಪಗೆ ಜಾಮೀನು; ಆಟೋ ದರ ಏರಿಕೆ ಶಾಕ್!

1. ಗ್ಯಾರಂಟಿ ಅನುಷ್ಠಾನ ಸಮಿತಿ ರದ್ದತಿಗೆ BJP ಆಗ್ರಹ

ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮೇಲ್ವಿಚಾರಣೆಗಾಗಿ ರಾಜ್ಯ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಕಾಂಗ್ರೆಸ್ ನಾಯಕರು, ಕಾರ್ಯಕರ್ತರನ್ನು ನೇಮಕ ಮಾಡಿರುವುದನ್ನು ವಿರೋಧಿಸಿ ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್‌ ಸದಸ್ಯರು ಪ್ರತಿಭಟನೆ ನಡೆಸಿದ್ದು ಇಂದು ಸಹ ವಿಧಾನಸಭೆ ಕಲಾಪಕ್ಕೆ ಅಡ್ಡಿಪಡಿಸಿದರು. ಹೀಗಾಗಿ ಸ್ಪೀಕರ್ ಯುಟಿ ಖಾದರ್ ಸದನವನ್ನು ಮುಂದೂಡಿದರು. ಅಧಿವೇಶನ ಪುನರಾರಂಭವಾದ ಬಳಿಕ ಪ್ರತಿಪಕ್ಷಗಳು ಸದನದ ಬಾವಿಗಿಳಿದು ಗ್ಯಾರಂಟಿ ಅನುಷ್ಠಾನದ ಮೇಲ್ವಿಚಾರಣೆಗೆ ಕಾಂಗ್ರೆಸ್ ಕಾರ್ಯಕರ್ತರನ್ನು ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರನ್ನಾಗಿ ನೇಮಿಸುವ ಮೂಲಕ ಸರ್ಕಾರ ಶಾಸಕರ ಅಧಿಕಾರವನ್ನು ಮೊಟಕುಗೊಳಿಸಿದೆ. ಗ್ಯಾರಂಟಿ ಅನುಷ್ಠಾನ ಸಮಿತಿಗಳನ್ನು ರದ್ದು ಮಾಡಬೇಕು ಎಂದು ಪ್ರತಿಭಟಿಸಿದವು. ಇದರಿಂದಾಗಿ ಸ್ಪೀಕರ್ ಸದನವನ್ನು ದಿನದ ಮಟ್ಟಿಗೆ ಮುಂದೂಡಿದರು. ಕಾಂಗ್ರೆಸ್ ಸರ್ಕಾರದ ನಡೆಯನ್ನು ವಿರೋಧಿಸಿ ವಿಧೌನಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ಜೆಡಿಎಸ್ ಮತ್ತು ಬಿಜೆಪಿ ಶಾಸಕರು ಪ್ರತಿಭಟನೆ ಮುಂದುವರೆಸಿದರು. ನಂತರ ವಿಪಕ್ಷ ನಾಯಕರು ರಾಜಭವನಕ್ಕೆ ತೆರಳಿದ್ದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಗ್ಯಾರಂಟಿ ಅನುಷ್ಠಾನ ಸಮಿತಿಯನ್ನು ರದ್ದು ಮಾಡುವಂತೆ ಸರ್ಕಾರಕ್ಕೆ ಸೂಚಿಸಲು ಮನವಿ ಸಲ್ಲಿಸಿದರು.

2. ಕೆಜಿಎಫ್ ಗಲಾಟೆ ಪ್ರಕರಣ: ಸಚಿವ ಮುನಿಯಪ್ಪಗೆ ಜಾಮೀನು

2013ರ ವಿಧಾನಸಭಾ ಚುನಾವಣೆ ವೇಳೆ ನಡೆದಿದ್ದ ಕೆಜಿಎಫ್ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎ1 ಆರೋಪಿಯಾಗಿರುವ ಸಚಿವ ಕೆ.ಹೆಚ್ ಮುನಿಯಪ್ಪಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಅಂದು ಕೆಜಿಎಫ್ನಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ವಿ.ಶಂಕರ್ ಮೇಲೆ ಅಂದು ಸಂಸದರಾಗಿದ್ದ ಮುನಿಯಪ್ಪ ಹಾಗೂ ಬೆಂಬಲಿಗರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಮುನಿಯಪ್ಪ ಗೈರಾಗುತ್ತಿದ್ದರು. ವಿಚಾರಣೆಗೆ ಹಾಜರಾಗದಿದ್ದರೆ ಬಂಧನ ವಾರೆಂಟ್ ಹೊರಡಿಸುವುದಾಗಿ ನ್ಯಾಯಮೂರ್ತಿ ಗಜಾನನ ಭಟ್ ಎಚ್ಚರಿಕೆ ನೀಡಿದರು. ಹೀಗಾಗಿ ಇಂದು ಲಕ್ಷ್ಮೀ ನಾರಾಯಣ್ ಮತ್ತು ಮುನಿಯಪ್ಪ ಇಬ್ಬರೂ ನ್ಯಾಯಾಧೀಶರ ಮುಂದೆ ಹಾಜರಾಗಿದ್ದು, ವಿಚಾರಣೆ ನಡೆಸಿದ ನ್ಯಾಯಾಧೀಶರು 50 ಸಾವಿರ ರೂಪಾಯಿ ಶ್ಯೂರಿಟಿಯೊಂದಿಗೆ ಜಾಮೀನು ಮಂಜೂರು ಮಾಡಿದ್ದಾರೆ.

3. ಕೊಡಗಿನಲ್ಲಿ ಭೂಕಂಪನ: ರಿಕ್ಟರ್ ಮಾಪಕದಲ್ಲಿ 1.6ರಷ್ಟು ತೀವ್ರತೆ ದಾಖಲು

ಕೊಡಗು ಜಿಲ್ಲೆಯ ಹಲವೆಡೆ ಬುಧವಾರ ಬೆಳಗ್ಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಮಡಿಕೇರಿಯ ಮದೆನಾಡು, 2ನೇ ಮೊಣ್ಣಂಗೇರಿ ವ್ಯಾಪ್ತಿಯಲ್ಲಿ ಭೂಕಂಪನ ಅನುಭವವಾಗಿದೆ. ಬೆಳಗ್ಗೆ 10.50ರ ಸುಮಾರಿಗೆ ಸಣ್ಣ ಪ್ರಮಾಣದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಭೂ ಕಂಪನದಿಂದ ಯಾವುದೇ ಹಾನಿಯಾಗಿಲ್ಲ ಎಂದು ಕೊಡಗು ಜಿಲ್ಲಾಧಿಕಾರಿ ವೆಂಕಟರಾಜ ತಿಳಿಸಿದ್ದಾರೆ. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 1.6ರಷ್ಟು ದಾಖಲಾಗಿದೆ. ಮದೆ ಗ್ರಾಮ ಪಂಚಾತಿಯ 2.5 ಕಿ.ಮೀ ದೂರದಲ್ಲಿ ಭೂಕಂಪನ ಕೇಂದ್ರ ಬಿಂದು ಪತ್ತೆ ಆಗಿದೆ. 15ರಿಂದ 20 ಕಿ.ಮೀ. ವ್ಯಾಪ್ತಿಯಲ್ಲಿ ಕಂಪನ ಹರಡಿದೆ ಎಂದು ಮಾಹಿತಿ ನೀಡಿದ್ದಾರೆ.

4. ಸಂಸದೀಯ ಕ್ಷೇತ್ರಗಳ ವಿಂಗಡನೆ ವಿರುದ್ಧ ಹೋರಾಟ

ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಸದೀಯ ಕ್ಷೇತ್ರಗಳ ಪ್ರಸ್ತಾವಿತ ಕ್ಷೇತ್ರ ವಿಂಗಡಣೆಯ ವಿರುದ್ಧ ಹೋರಾಡುತ್ತಿರುವ ಡಿಎಂಕೆ ನೇತೃತ್ವದ ನಿಯೋಗಕ್ಕೆ ಬೆಂಬಲ ನೀಡಿದ್ದಾರೆ. ಡಿಎಂಕೆ ನಾಯಕರ ನಿಯೋಗದೊಂದಿಗೆ ನಡೆದ ಸಭೆಯಲ್ಲಿ, ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆಯನ್ನು "ದುರ್ಬಲಗೊಳಿಸಲು" ಕೇಂದ್ರದ ಪ್ರಯತ್ನವನ್ನು ಸಿಎಂ ಖಂಡಿಸಿದರು. "ಕೇಂದ್ರ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ಮತ್ತು ದಕ್ಷಿಣ ವಿರೋಧಿ ನಿಲುವಿನ" ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳ ಕುರಿತು ಚರ್ಚಿಸಲು ತಮಿಳುನಾಡು ಅರಣ್ಯ ಸಚಿವ ಕೆ. ಪೊನ್ನುಮುಡಿ ಮತ್ತು ರಾಜ್ಯಸಭಾ ಸಂಸದ ಮೊಹಮ್ಮದ್ ಅಬ್ದುಲ್ಲಾ ಇಸ್ಮಾಯಿಲ್ ಅವರು ಸಿದ್ದರಾಮಯ್ಯ ಅವರನ್ನು ಅವರ ನಿವಾಸ ಕಾವೇರಿಯಲ್ಲಿ ಬುಧವಾರ ಭೇಟಿಯಾದರು.

5. ಬೆಂಗಳೂರು: ಗ್ರಾಹಕರಿಗೆ ಆಟೋರಿಕ್ಷಾ ದರ ಏರಿಕೆ ಶಾಕ್

ಮೆಟ್ರೋ ರೈಲು ಮತ್ತು ಸರ್ಕಾರಿ ಬಸ್ ಟಿಕೆಟ್ ದರ ಏರಿಕೆ ಬಳಿಕ ಇದೀಗ ಬೆಂಗಳೂರಿನಲ್ಲಿ ಆಟೋರಿಕ್ಷಾ ದರಗಳು ಸಹ ಏರಿಕೆಯಾಗುವ ಸಾಧ್ಯತೆಯಿದೆ. ನಗರದಲ್ಲಿನ ಆಟೋರಿಕ್ಷಾ ಚಾಲಕರ ಸಂಘಗಳ ಬೇಡಿಕೆಗಳಿಗೆ ಸ್ಪಂದಿಸಿ, ಬೆಂಗಳೂರು ನಗರ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಸಭೆ ಕರೆದು ಸಂಭಾವ್ಯ ದರ ಪರಿಷ್ಕರಣೆ ಕುರಿತು ಚರ್ಚಿಸಿದೆ. ಪ್ರಸ್ತುತ ಕನಿಷ್ಠ ದರ 30 ರೂ. ಮತ್ತು 2 ಕಿಲೋಮೀಟರ್‌ಗಿಂತ ಹೆಚ್ಚಿನ ದೂರಕ್ಕೆ ಪ್ರತೀ ಕಿಲೋಮೀಟರ್‌ಗೆ 15 ರೂ. ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತಿದೆ. ಆಟೋರಿಕ್ಷಾ ಚಾಲಕರು ಕನಿಷ್ಠ ದರವನ್ನು 50 ರೂ.ಗೆ ಏರಿಸಿ, 2 ಕಿಲೋಮೀಟರ್‌ಗಿಂತ ಹೆಚ್ಚಿನ ದೂರಕ್ಕೆ ಪ್ರತಿ ಕಿಲೋಮೀಟರ್‌ಗೆ 25 ರೂ. ಗೆ ದರ ಏರಿಕೆ ಮಾಡಲು ಪ್ರಸ್ತಾಪಿಸಿವೆ. ಆದಾಗ್ಯೂ, ಸಾರಿಗೆ ಇಲಾಖೆಯು ಕನಿಷ್ಠ ಪ್ರಯಾಣ ದರವನ್ನು 40 ರೂ.ಗೆ ಮಿತಿಗೊಳಿಸಲು ಪ್ರತಿ ಕಿ.ಮೀ.ಗೆ 15 ರೂನಿಂದ 20 ರೂಪಾಯಿಗೇರಿಸಲು ಮಾತುಕತೆ ನಡೆಯುತ್ತಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com