ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ 2024 ಮೇಲ್ಮನೆಯಲ್ಲೂ ಅಂಗೀಕಾರ

ವಿಧಾನಸಭೆಯಲ್ಲಿ ಅಂಗೀಕೃತವಾದ ರೂಪದಲ್ಲಿರುವ ʼಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ 2024ʼ ಅನ್ನು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಿಧಾನ ಪರಿಷತ್ತಿನಲ್ಲಿ ಮಂಡಿಸಿ, ವಿಧೇಯಕದ ಉದ್ದೇಶವನ್ನು ವಿವರಿಸಿದರು.
DK Shivakumar in Assembly
ವಿಧಾನಸಭೆಯಲ್ಲಿ ಡಿಕೆ ಶಿವಕುಮಾರ್ ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಸೋಮವಾರ ವಿಧಾನಸಭೆಯಲ್ಲಿ ಅಂಗೀಕಾರಗೊಂಡ ಗ್ರೇಟರ್ ಬೆಂಗಳೂರು ಆಡಳಿತ ಮಸೂದೆಗೆ ಬುಧವಾರ ವಿಧಾನ ಪರಿಷತ್ತಿನಲ್ಲಿಯೂ ಅಂಗೀಕಾರ ದೊರೆಯಿತು.

ವಿಧಾನಸಭೆಯಲ್ಲಿ ಅಂಗೀಕೃತವಾದ ರೂಪದಲ್ಲಿರುವ ʼಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ 2024ʼ ಅನ್ನು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಿಧಾನ ಪರಿಷತ್ತಿನಲ್ಲಿ ಮಂಡಿಸಿ, ವಿಧೇಯಕದ ಉದ್ದೇಶವನ್ನು ವಿವರಿಸಿದರು.

ನಂತರ ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರು ವಿಧೇಯಕ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯ, ಆಕ್ಷೇಪಗಳನ್ನು ವ್ಯಕ್ತಪಡಿಸಿದರು.

ಜೆಡಿಎಸ್ ಎಂಎಲ್‌ಸಿ ಶರವಣ ಟಿಎ ಅವರು ಮಾತನಾಡಿ, ಒಬ್ಬ ಪ್ರಧಾನಿ ದೇಶವನ್ನು ಆಳಬಹುದು ಮತ್ತು ಒಬ್ಬ ಮುಖ್ಯಮಂತ್ರಿ ರಾಜ್ಯವನ್ನು ಆಳಬಹುದು, ನಗರವನ್ನು ಒಬ್ಬ ಮೇಯರ್‌ ನಿಭಾಯಿಸಲು ಸಾಧ್ಯವಿಲ್ಲವೇ? ಬಹು ಮೇಯರ್ ಗಳ ಆಗತ್ಯವೇನಿದೆ ಎಂದು ಪ್ರಶ್ನಿಸಿದ್ದರು.

ಒಂದು ನಿಗಮದಿಂದ ತಮ್ಮ ಕೆಲಸಗಳನ್ನು ಪೂರ್ಣಗೊಳಿಸುವಲ್ಲಿ ಜನರು ಈಗಾಗಲೇ ತೊಂದರೆಗಳನ್ನು ಎದುರಿಸುತ್ತಿದ್ದಾರೆ ಮತ್ತು ಏಳು ನಿಗಮಗಳನ್ನು ರಚಿಸುವುದರಿಂದ ಸಮನ್ವಯದ ಕೊರತೆಯಿಂದ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ. ಹೊಸ ವ್ಯವಸ್ಥೆಯಿಂದ ಭಾಷೆಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಬಹುದು ಎಂದು ಕಳವಳ ವ್ಯಕ್ತಪಡಿಸಿದರು.

ವಿರೋಧ ಪಕ್ಷದ ಮುಖ್ಯ ಸಚೇತಕ ಎನ್ ರವಿ ಕುಮಾರ್ ಅವರು ಮಾತನಾಡಿ, ಸರ್ಕಾರವು ಬಹು ನಿಗಮಗಳನ್ನು ಹೊಂದುವ ಬದಲು, ಸಂಚಾರ, ಕೆಟ್ಟ ರಸ್ತೆಗಳು, ಕಸ, ನೀರು ಮುಂತಾದ ಪ್ರಮುಖ ಸಮಸ್ಯೆಗಳಿಗೆ ಸಮಿತಿಗಳನ್ನು ಸ್ಥಾಪಿಸುವ ಮೂಲಕ ಸಮಸ್ಯೆ ಪರಿಹರಿಸುವತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು.

DK Shivakumar in Assembly
'ಗ್ರೇಟರ್ ಬೆಂಗಳೂರು ವಿಧೇಯಕ' ನಗರವನ್ನು ಸಿಎಂ-ಡಿಸಿಎಂ ಅಡಿಯಲ್ಲಿ ತರುವ ಗುರಿ ಹೊಂದಿದೆ: ಆರ್.ಅಶೋಕ್ ಆರೋಪ

ವಲಯ ಆಯುಕ್ತರಿಗೆ ಹೆಚ್ಚಿನ ಅಧಿಕಾರ ನೀಡುವ ಬಗ್ಗೆಯೂ ಪರಿಗಣಿಸಬಹುದು. ಸರ್ಕಾರವು ಮೊದಲು ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗಳನ್ನು ನಡೆಸಬೇಕು. ನಂತರ ನಾವು ಮಸೂದೆಯ ಬಗ್ಗೆ ಚರ್ಚಿಸಬಹುದು ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, “ವಿರೋಧ ಪಕ್ಷಗಳ ಸದಸ್ಯರು ಅನೇಕ ಉತ್ತಮ ಸಲಹೆಗಳನ್ನು ನೀಡಿದ್ದಾರೆ. ಅಂದು ಕೆಂಪೇಗೌಡರು ಬೆಂಗಳೂರಿಗೆ ಹೇಗೆ ಅಡಿಪಾಯ ಹಾಕಿದರೋ ಅದೇ ರೀತಿ ನಾವು ಕೂಡ ಕಾಲಮಾನಕ್ಕೆ ತಕ್ಕಂತೆ ಸುಭದ್ರ ಅಡಿಪಾಯ ಹಾಕಲು ಮುಂದಾಗಿದ್ದೇವೆ. ಕಲ್ಲು ಪ್ರಕೃತಿ, ಕಡೆದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ಈ ದೃಷ್ಟಿಯಿಂದ ನಿಮ್ಮೆಲ್ಲರ ಸಲಹೆ ಪಡೆದು ಈ ವಿಧೇಯಕವನ್ನು ಉತ್ತಮ ಮೂರ್ತಿ ಮಾಡಲು ಮುಂದಾಗಿದ್ದೇವೆ ಎಂದು ಹೇಳಿದರು.

ಬೆಂಗಳೂರನ್ನು ನಾವು ಛಿದ್ರಗೊಳಿಸುತ್ತಿಲ್ಲ, ಗಟ್ಟಿಗೊಳಿಸಲು ಮುಂದಾಗಿದ್ದೇವೆ. ಉತ್ತರಾಖಂಡ, ಜಾರ್ಖಂಡ್, ತೆಲಂಗಾಣಾದಲ್ಲಿ ಇಂತಹ ಪ್ರಯತ್ನ ಮಾಡಿದ್ದಾರೆ. ಮೈಸೂರು ಜಿಲ್ಲೆ ನಂತರ ಚಾಮರಾಜನಗರವಾಗಿ ವಿಭಜನೆಯಾಯಿತು. ಬೆಂಗಳೂರು ಜಿಲ್ಲೆ ನಗರ, ಗ್ರಾಮಾಂತರ ಹಾಗೂ ರಾಮನಗರವಾಗಿ ಮೂರು ಜಿಲ್ಲೆಯಾದವು. ಗದಗ ಜಿಲ್ಲೆ ಹಾವೇರಿಯಾಗಿ ವಿಭಜನೆಯಾಯಿತು. ಇದೆಲ್ಲವೂ ಆಗಿದ್ದು ಜನಸಂಖ್ಯೆ ಹೆಚ್ಚಳಕ್ಕೆ ಅನುಗುಣವಾಗಿ ಹಾಗೂ ಆಡಳಿತಾತ್ಮಕ ಉದ್ದೇಶದಿಂದ. ಹೀಗಾಗಿ ಇಲ್ಲಿ ಯಾರೂ ಆತಂಕಪಡುವ ಅಗತ್ಯವಿಲ್ಲ. ಅಧಿಕಾರ ವಿಕೇಂದ್ರೀಕರಣ, ಆರ್ಥಿಕ ಸ್ವಾಯತ್ತತೆ, ತೆರಿಗೆ ಸಂಗ್ರಹ ಉದ್ದೇಶದಿಂದ ಈ ವಿಧೇಯಕ ಮಾಡಲು ಹೊರಟಿದ್ದೇವೆ. ಜಿಬಿಎ ಇದ್ದರೆ ಒಂದು ಪಾಲಿಕೆಯಲ್ಲಿ ತೆರಿಗೆ ಪ್ರಮಾಣ ಹೆಚ್ಚಳ, ಮತ್ತೊಂದು ಪಾಲಿಕೆಯಲ್ಲಿ ತೆರಿಗೆ ಕಡಿಮೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು.

DK Shivakumar in Assembly
7 ಪಾಲಿಕೆಗಳಾಗಿ ಬಿಬಿಎಂಪಿ ವಿಭಜನೆ; ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚಿಸಲು ಸಮಿತಿ ಶಿಫಾರಸು!

ವಿಶ್ವದ ನಾಯಕರು ಮೊದಲಿಗೆ ಬೆಂಗಳೂರಿಗೆ ಬಂದು ನಂತರ ದೇಶದ ಇತರ ನಗರಗಳಿಗೆ ಹೋಗುವ ಕಾಲ ಬಂದಿದೆ ಎಂದು ವಾಜಪೇಯಿ ಅವರು ತಿಳಿಸಿದ್ದರು. ಈ ಸಾಧನೆ ಕೇವಲ ಎಸ್.ಎಂ ಕೃಷ್ಣ ಅವರ ಸರ್ಕಾರದಿಂದ ಮಾತ್ರ ಆಗಿದೆ ಎಂದು ನಾನು ಹೇಳುವುದಿಲ್ಲ. ಮಹಾರಾಜರ ಕಾಲದಿಂದ ಬಂದ ಪರಂಪರೆ, ಸಂಸ್ಕೃತಿ, ಹವಾಮಾನ, ಶಿಕ್ಷಣ, ಪ್ರಕೃತಿ ಕಾರಣಗಳಿಂದಾಗಿ ಬೆಂಗಳೂರು ಅತಿ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ.

ಬೆಂಗಳೂರು ಅನೇಕ ಕ್ಷೇತ್ರಗಳಲ್ಲಿ ತನ್ನದೆ ಆದ ಹೆಸರು ಗಳಿಸಿದೆ. ಐಟಿ ಸಿಟಿ, ಗಾರ್ಡನ್ ಸಿಟಿ, ನಿವೃತ್ತರ ಸ್ವರ್ಗ ಎಂದು ಹೆಸರು ಪಡೆದಿದೆ. ಇಲ್ಲಿ ಓದಿರುವ ಅನೇಕರು ವಿಶ್ವದ ಅನೇಕ ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇಲ್ಲಿ ಪ್ರತಿಭಾವಂತ ಮಾನವ ಸಂಪನ್ಮೂಲ ಹೊಂದಿದೆ. ಹೀಗಾಗಿ ಈ ನಗರಕ್ಕೆ ಹೊಸ ರೂಪ ನೀಡುವ ಉದ್ದೇಶದಿಂದ ಸುದೀರ್ಘ ಚರ್ಚೆ ಮಾಡಿ ನಾವು ಈ ಮಸೂದೆ ರೂಪಿಸಿದ್ದೇವೆ ಎಂದು ಹೇಳಿದರು.

ಉಪ ಮುಖ್ಯಮಂತ್ರಿಗಳ ಸ್ಪಷ್ಟನೆ ಬಳಿಕವೂ ಇದಕ್ಕೆ ಒಪ್ಪದ ವಿಪಕ್ಷಗಳ ನಾಯಕರು ಮಸೂದೆಯಲ್ಲಿ ಸ್ಪಷ್ಟತೆಯ ಕೊರತೆ ಇದೆ ಎಂದು ಹೇಳಿ ಸಭಾತ್ಯಾಗ ಮಾಡಿದರು. ಬಳಿಕ ಮಸೂದೆಯನ್ನು ಅಂಗೀಕರಿಸಲಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com