
ಬೆಂಗಳೂರು: ನಗರದಲ್ಲಿ ಕಸದ ಸಮಸ್ಯೆ ಮತ್ತೆ ಉಲ್ಬಣಗೊಂಡಿದ್ದು, ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಬಿಜೆಪಿ ಆಗ್ರಹಿಸಿದೆ.
ವಿಧಾನಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಮಲ್ಲೇಶ್ವರಂ ಶಾಸಕ ಸಿ.ಎನ್. ಅಶ್ವತ್ಥ್ ನಾರಾಯಣ್ ಅವರು, ಕಣ್ಣೂರು ಗ್ರಾಮ ಪಂಚಾಯತ್‌ನ ಮಿಟಗಾನಹಳ್ಳಿಯಲ್ಲಿರುವ ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಬೆಂಗಳೂರಿನಿಂದ ತ್ಯಾಜ್ಯ ಕಳುಹಿಸುವುದನ್ನು ನಿಲ್ಲಿಸಲಾಗಿದೆ ಎಂದು ಹೇಳಿದರು.
ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡುತ್ತಿಲ್ಲ ಎಂದು ಆರೋಪಿಸಿ ಮಿಟಗಾನಹಳ್ಳಿ ಮತ್ತು ಹತ್ತಿರದ ಪ್ರದೇಶಗಳ ಜನರು 500 ಟ್ರಕ್‌ಗಳನ್ನು ಸಂಸ್ಕರಣಾ ಘಟಕಗಳಿಗೆ ಪ್ರವೇಶಿಸದಂತೆ ತಡೆದಿದ್ದಾರೆಂದು ತಿಳಿಸಿದರು.
ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ ಅವರು ಮಾತನಾಡಿ, ತ್ಯಾಜ್ಯವನ್ನು ವಿಂಗಡಿಸದೆ ಕಸವನ್ನು ಸುರಿಯಲಾಗುತ್ತಿದೆ. ಇದು ಬೋರ್‌ವೆಲ್‌ಗಳು ಮತ್ತು ಸರೋವರಗಳಲ್ಲಿನ ನೀರು ಕಲುಷಿತಗೊಳ್ಳಲು ಕಾರಣವಾಗಿದೆ. ಎಂದು ಮಿಟಗಾನಹಳ್ಳಿಯ ಜನರು ಆರೋಪಿಸಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತ್ಯಾಜ್ಯವನ್ನು ರವಾನೆಗೂ ಮೊದಲು ಅದನ್ನು ಸರಿಯಾಗಿ ಬೇರ್ಪಡಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದರು.
ಮಂಡೂರು ಮತ್ತು ಮಾವಳ್ಳಿಪುರದ ಜನರು ಇದೇ ಕಾರಣಕ್ಕೆ ಕಸ ತ್ಯಾಜ್ಯ ಸುರಿಯಲು ಅವಕಾಶ ನೀಡಿರಲಿಲ್ಲ. ಇದೀಗ ಮತ್ತೆ ಸಮಸ್ಯೆ ಉಲ್ಬಣಿಸಿದೆ. ಹೀಗಾಗಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕು ಎಂದು ಆಗ್ರಹಿಸಿದರು.
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬ್ರ್ಯಾಂಡ್ ಬೆಂಗಳೂರು ಪರವಾಗಿದ್ದಾರೆ, ಆದರೆ ನಗರದ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.
ತ್ಯಾಜ್ಯ ವಿಲೇವಾರಿಗಾಗಿ ಬೆಂಗಳೂರಿನ ಹೊರಗೆ ನಾಲ್ಕು ಸ್ಥಳಗಳಲ್ಲಿ 100 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಆದರೆ, ಈ ನಿಟ್ಟಿನಲ್ಲಿ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಹೇಳಿದರು.
Advertisement