ಕಾಮ ಎನ್ನುವುದು 'ಚಿವಿಂಗ್ ಗಮ್' ರೀತಿ; ಅತಿ ಕಾಮ ಮನುಷ್ಯನ ಶ್ರೇಯಸ್ಸಿಗೆ ಪೂರಕವಲ್ಲ: ಬಂಜಗೆರೆ ಜಯಪ್ರಕಾಶ್

ಎಲ್ಲಿ ಸಾಮರಸ್ಯದ ದಾಂಪತ್ಯ ಇರುವುದಿಲ್ಲವೋ ಅಲ್ಲಿ ಸಂಸಾರ ದೀರ್ಘಕಾಲ ನಡೆಯುವುದಿಲ್ಲ. ಹೆಣ್ಣು ಗಂಡು ನಡುವಿನ ಪ್ರೇಮ ಮೊದಲಿಗೆ ಆಕರ್ಷಣೆಯಾದರೂ ಕ್ರಮೇಣ ಗೌರವ, ಪರಸ್ಪರ ವಿಶ್ವಾಸ ಮೂಡುವಂತಾಗಬೇಕು.
ಬಂಜಗೆರೆ ಜಯಪ್ರಕಾಶ್ ಮತ್ತಿತರರು
ಬಂಜಗೆರೆ ಜಯಪ್ರಕಾಶ್ ಮತ್ತಿತರರು
Updated on

ಬೆಂಗಳೂರು: ಕಾಮ ಎನ್ನುವುದು ಚಿವಿಂಗ್ ಗಮ್ ರೀತಿ. ಮೊದಲು ಜಿಗಿಯುವಾಗ ಚೆನ್ನಾಗಿರುತ್ತದೆ. ಅದೇ ರೀತಿ ಅತಿ ಕಾಮ ಅತಿರೇಖವಾದದ್ದು, ಇದು ಮನಷ್ಯನ ಶ್ರೇಯಸ್ಸಿಗೆ ಪೂರಕವಲ್ಲ ಎಂದು ಲೇಖಕ, ಸಂಸ್ಕೃತಿ ಚಿಂತಕ ಬಂಜಗೆರೆ ಜಯಪ್ರಕಾಶ್ ಹೇಳಿದ್ದಾರೆ.

ಪುರುಷೋತ್ತಮ ದಾಸ್ ಹೆಗ್ಗಡೆ ರಚಿತ “ಯಯಾತಿ” ಕಾದಂಬರಿಯನ್ನು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಎಲ್ಲಿ ಸಾಮರಸ್ಯದ ದಾಂಪತ್ಯ ಇರುವುದಿಲ್ಲವೋ ಅಲ್ಲಿ ಸಂಸಾರ ದೀರ್ಘಕಾಲ ನಡೆಯುವುದಿಲ್ಲ. ಹೆಣ್ಣು ಗಂಡು ನಡುವಿನ ಪ್ರೇಮ ಮೊದಲಿಗೆ ಆಕರ್ಷಣೆಯಾದರೂ ಕ್ರಮೇಣ ಗೌರವ, ಪರಸ್ಪರ ವಿಶ್ವಾಸ ಮೂಡುವಂತಾಗಬೇಕು. ಆರೈಕೆಯ ಭಾವನೆಯ ಜೊತೆಗೆ ಸಂಬಂಧ ಮಾಗುತ್ತಾ ಮಾಗುತ್ತಾ ಪ್ರೌಢವಾಗುತ್ತಾ ಸಾಗಬೇಕು. ಇಲ್ಲವಾದಲ್ಲಿ ಒಲುಮೆಗಿಂತ ಸಂಘರ್ಷ ಜಾಸ್ತಿಯಾಗುತ್ತದೆ ಎಂದರು.

ಎಲ್ಲಾ ಕಾಲದಲ್ಲೂ ಮನುಷ್ಯನಿಗೆ ಮೂರು ಅಭೀಪ್ಸೆಗಳು ಇರುತ್ತವೆ. ನನಗೆ ಮುಪ್ಪು ಬರಬಾರದು ಎನ್ನುವುದು. ಯೋಗ ಶಾಸ್ತ್ರವೂ ಕೂಡ ದೇಹವನ್ನು ವಜ್ರಕಾಯ ಮಾಡಿಕೊಳ್ಳುವ ಸಿದ್ದಿ ವಿದ್ಯೆಯಾಗಿದೆ. ಚಿರ ಯುವಕನಾಗಿರಬೇಕು ಎಂದು ಬಯಸುವುದು ಸಹಜ. ಎರಡನೆಯದು ಕಾಮ. ಅತಿ ಕಾಮ ನಪುಂಸಕತ್ವಕ್ಕೂ ಕಾರಣವಾಗುತ್ತದೆ. ಆದರೆ ಮಾಂಸಹಾರಿಗಳು ಪ್ರಾಣಿಗಳ ವೃಷಣಗಳನ್ನೂ, ಸಸ್ಯಹಾರಿಗಳು ನುಗ್ಗೆ ಕಾಯಿಯನ್ನೂ ತಿಂದರೆ ಕಾಮ ಉತ್ತೇಜನವಾಗುತ್ತದೆ ಎನ್ನುವ ನಂಬಿಕೆ ಇದೆ. ಕಾಮ ಎನ್ನುವುದು ಸ್ಪರ್ಧೆಯಲ್ಲ. ದೇಹದ ಮೂಲಕ ಆಡುವ ಆಟವೂ ಅಲ್ಲ. ಪರಸ್ಪರ ಒಲಿದು, ನಿಲಿದು ನಡೆಸುವ ಅನುಭೂತಿ. ಸಾಂಸರಿಕ ಜೀವನದ ಹೊರಗಡೆ ನಡೆಯುವ ಇಂತಹ ಕ್ರಿಯೆಗಳಿಗೆ ಯಯಾತಿ ಕಥೆ ಪ್ರಸ್ತುತವಾಗುತ್ತದೆ ಎಂದರು.

ಕಾಮ ಮನುಷ್ಯನ ಹಂಬಲ ಹೆಚ್ಚಿಸುತ್ತದೆ. ನಾವು ಯೌವ್ವನವನ್ನು ಬೇಗ ಆಹ್ವಾನಿಸುತ್ತೇವೆ. ಆದರೆ ಮುಪ್ಪನ್ನು ಬೇಗ ಒಪ್ಪಿಕೊಳ್ಳುವುದಿಲ್ಲ. ಇದು ಮುನುಷ್ಯನ ಮನೋರೋಗ. ಯಯಾತಿಯನ್ನು ಲೇಖಕರು ಹೊಸದಾಗಿ ಕಟ್ಟಿಕೊಟ್ಟಿದ್ದಾರೆ. ಕಾಮವನ್ನೇ ಗೆದ್ದ ಯತಿ ಇದ್ದಾನೆ, ಕಾಮವನ್ನೇ ಸದಾ ಬಯಸುವ ಯಯಾತಿ ಇದ್ದಾನೆ ಎಂದು ತಿಳಿಸಿದರು.

ವಿಮರ್ಶಕ ಎಚ್. ದಂಡಪ್ಪ ಮಾತನಾಡಿ, ನಾವು ಸುಳ್ಳನ್ನೇ ಪದೇ ಪದೇ ಹೇಳಿ ಸತ್ಯ ಮಾಡುವ ಸತ್ಯೋತ್ತರ ಕಾಲದಲ್ಲಿದ್ದು, ಈಗಲೂ ನಮ್ಮ ಮುಂದೆ ಯಯಾತಿಗಳಿದ್ದಾರೆ. 20 ನೇ ಶತಮಾನದಲ್ಲಿ ಚೀನಾದ ನಾಯಕ ಮಾವೋ ಇದೇ ಗುಂಪಿಗೆ ಸೇರಿದವನು. 19 ನೇ ಶತಮಾನದಲ್ಲಿ ಮಹಾತ್ಮಾಗಾಂಧೀಜಿ ಹೆಣ್ಣು ಮಕ್ಕಳ ಜೊತೆ ಮಲಗಿ ಕಾಮ ನಿಯಂತ್ರಣದ ಬಗ್ಗೆ ಪ್ರಯೋಗ ಮಾಡಿ ಜಗತ್ತಿಗೆ ಮಾದರಿಯಾದರು. ಪ್ರಯೋಗಕ್ಕೆ ಒಳಗಾದ ಹೆಣ್ಣು ಮಕ್ಕಳು ಗಾಂಧೀಜಿಯನ್ನು ತಂದೆ ತಾಯಿಯಂತೆ ಅಕ್ಕರೆಯಿಂದ ಕಂಡರೆ, ಮಾವೋ ಜೊತೆ ಬೇರೆಯದೇ ಅನುಭವವಿತ್ತು. ಗಾಂಧೀಜಿ ಕೊಠಡಿ ಬಾಗಿಲು ಸದಾ ತೆರೆದಿರುತ್ತಿತ್ತು. ಆದರೆ ಮಾವೋ ಬಾಗಿಲು ಸದಾ ಮುಚ್ಚಿರುತ್ತಿತ್ತು. ಇಂತಹ ಹತ್ತು ಹಲವು ಪಾತ್ರಗಳು ನಮ್ಮ ಮುಂದೆ ಹಾದುಹೋಗುತ್ತವೆ. ಪೌರಾಣಿಕ ಕಥಾ ಹಂದರ ನಮಗೆ ನೈತಿಕ ಶಿಕ್ಷಣ ನೀಡುತ್ತದೆ ಎಂದು ಹೇಳಿದರು.

ಬಂಜಗೆರೆ ಜಯಪ್ರಕಾಶ್ ಮತ್ತಿತರರು
ಇಸ್ಲಾಂ ಹಾಗೂ ಬಸವ ತತ್ವಕ್ಕೂ ಸಾಮ್ಯತೆ ಇದೆ: ಬಂಜಗೆರೆ ಜಯಪ್ರಕಾಶ್

ನಿಮ್ಹಾನ್ಸ್ ನ ಮಾನಸಿಕ ಚಿಕಿತ್ಸಾ ವಿಭಾಗದ ಪ್ರಾಧ್ಯಾಪಕರಾದ ಡಾ. ಎಂ. ಮಂಜುಳಾ ಮಾತನಾಡಿ, ಮನೋವಿಜ್ಞಾನದ ಸಿದ್ಧಾಂತಗಳನ್ನು ಯಯಾತಿ ಕಥೆಯಲ್ಲಿ ಸೂಕ್ತ ರೀತಿಯಲ್ಲಿ ಅಡಕಗೊಳಿಸಲಾಗಿದೆ. ನಾನಾ ಆಯಾಮಗಳಲ್ಲಿ ಲೇಖಕರು ಮಾನಸಿಕ ಸ್ಥಿತಿಗತಿಗಳನ್ನು ವಿಶ್ಲೇಷಣೆ ಮಾಡಿದ್ದಾರೆ. ಕಥಾ ವಸ್ತುವಿನಲ್ಲಿ ಮಾನವೀಕರಣವನ್ನು ಕಾಣಬಹುದಾಗಿದೆ. ಇಷ್ಟವಾಗದ ವಿಷಯಗಳ ವಿಚಾರದಲ್ಲಿ ಸಿಗ್ಮಂಡ್ ಫ್ರಾಯ್ಡ್ ನ ಸಿದ್ಧಾಂತಗಳನ್ನು ಸಹ ಅನಾರಣಗೊಳಿಸಲಾಗಿದೆ. ನಮ್ಮನ್ನು ನಾವು ರಕ್ಷಿಸಿಕೊಳ್ಳುವ ರಕ್ಷಣಾ ವಿಧಾನಗಳಿಗೂ ಇಲ್ಲಿ ಒತ್ತು ನೀಡಲಾಗಿದೆ ಎಂದರು.

ಕಾಂದಬರಿಕಾರ ಪುರುಷೋತ್ತಮ ದಾಸ್ ಹೆಗ್ಗಡೆ ಮಾತನಾಡಿ, ಮನುಷ್ಯನಿಗೆ ಸಾವಿನ ಬಗ್ಗೆ ಅತಿ ಹೆಚ್ಚು ಭಯವಿದ್ದು, ಇತ್ತೀಚೆಗೆ ಈ ಕುರಿತು 3 ಲಕ್ಷಕ್ಕೂ ಅಧಿಕ ಲೇಖನಗಳು, ಸಂಶೋಧನಾ ಪ್ರಬಂಧಗಳು ಪ್ರಕಟವಾಗಿವೆ. ಮನುಷ್ಯನ ಚಿರ ಯೌವನ ಕಾಪಾಡಲು 700ಕ್ಕೂ ಅಧಿಕ ನವೋದ್ಯಮ ಕಂಪೆನಿಗಳು ಜಗತ್ತಿನಾದ್ಯಂತ ಕಾರ್ಯನಿರ್ವಹಿಸುತ್ತಿವೆ. ಪ್ರೋಟಿನ್ ಗಳ ಮೂಲಕ ಯೌವ್ವನವನ್ನು ಕಾಪಿಟ್ಟುಕೊಳ್ಳುವ, ಮಕ್ಕಳು, ಮೊಮ್ಮಕ್ಕಳ ರಕ್ತ, ಪ್ಲೇಟ್ಲೇಟ್ ಗಳನ್ನು ವರ್ಗಾಯಿಸಿಕೊಂಡು ಯೌವನ ಉಳಿಸಿಕೊಳ್ಳುವ ಕೆಲಸ ನಡೆಯುತ್ತಿದೆ. ಇಂತಹ ವ್ಯಕ್ತಿತ್ವದವರನ್ನು ಯಯಾತಿ ಸಿಂಡ್ರೋಮ್ ಗಳು ಎನ್ನಲಾಗುತ್ತದೆ. ಈ ವಲಯದಲ್ಲಿರುವವರನ್ನು ಅಮರತ್ವದ ವ್ಯಾಪಾರಿಗಳು ಎಂದು ಕರೆಯಲಾಗುತ್ತದೆ. ಹೀಗಾಗಿ ಯಯಾತಿಗಳು ನಮ್ಮ ಮುಂದೆ ಈಗಲೂ ಇದ್ದಾರೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com