
ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನ ಕೆಲವು ಪ್ರಮುಖ ಸ್ಟ್ರೀಟ್‌ಗಳಲ್ಲಿ ಈಗ ರಂಜಾನ್ ಮಾಸದ ಬಗೆ ಬಗೆಯ ಖಾದ್ಯಗಳದ್ದೇ ದರ್ಬಾರ್. ಸಂಜೆಯಾಗುತ್ತಿದ್ದಂತೆ ಬಾಯಿ ನೀರೂರಿಸುವ ತಿಂಡಿಗಳಿಂದ ಗರಿಗೆದರಿರುತ್ತವೆ. ಆದರೆ, ರಂಜಾನ್ ಫುಡ್ ಸ್ಟ್ರೀಟ್ ಗಳಲ್ಲಿ ಒಂದಾಗಿರುವ ಫ್ರೇಜರ್ ಟೌನ್‌ನ ಮಸೀದಿ ರಸ್ತೆಯಲ್ಲಿ ಮಾತ್ರ ವ್ಯಾಪಾರ ಕಳೆದುಗುಂದಿದೆ.
ಇದಕ್ಕೆ ಕಾರಣ ಮುಂದುವರೆದಿರುವ ಕಾಮಗಾರಿ ಕಾರ್ಯಗಳು. ರಂಜಾನ್ ವೇಳೆ ಈ ಪ್ರದೇಶದಲ್ಲಿ ಸಾಮಾನ್ಯವಾಗಿ ಸುಮಾರು 150-200 ಮಳಿಗೆಗಳು ವ್ಯಾಪಾರ ನಡೆಸುತ್ತವೆ. ಆದರೆ, ಈ ಬಾರಿ ಚರಂಡಿ ಹಾಗೂ ನಿರ್ಮಾಣ ಕಾರ್ಯಗಳು ನಡೆಯುತ್ತಿದ್ದು, ಇದರಿಂದ ಜನರು ಈ ಪ್ರದೇಶಕ್ಕೆ ಭೇಟಿ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಈ ಬಾರಿ ಶೇ.80ರಷ್ಟು ಜನಸಂದಣಿ ಕುಸಿದಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಹೋಟೆಲ್ ಮಾಲೀಕರು ಬೇಸರ ವ್ಯಕ್ತಪಡಿಸಿದ್ದಾರೆ. ರಂಜಾನ್ ವೇಳೆ ಜನಸಂದಣಿ ಹೆಚ್ಚಾಗಿರುತ್ತಿತ್ತು. ಆದರೆ, ಈ ಬಾರಿ ಕಡಿಮೆಯಾಗಿದೆ. ಕಾಮಗಾರಿ ಕಾರ್ಯಗಳು ಇದಕ್ಕೆ ಕಾರಣವಾಗಿದೆ. ರಸ್ತೆಗಳು ಹದಗೆಟ್ಟಿದ್ದು, ಪಾರ್ಕಿಂಗ್ ಕೊರತೆಗಳಿವೆ ಎಂದು ಹೇಳಿದ್ದಾರೆ.
ಚಾರ್ಮಿನಾರ್ ಕಬಾಬ್ ಪ್ಯಾರಡೈಸ್‌ನ ಫೈಸಲ್ ಎಂಬುವವರು ಮಾತನಾಡಿ, ಕಾಮಗಾರಿ ಕಾರ್ಯಗಳನ್ನು ವೇಗಗೊಳಿಸುವಂತೆ ಅಧಿಕಾರಿಗಳಿಗೆ ಹೋಟೆಲ್ ಗಳ ಎಲ್ಲಾ ಮಾಲೀಕರು, ಫ್ರೇಜರ್ ಟೌನ್ ನಿವಾಸಿಗಳ ಕಲ್ಯಾಣ ಸಂಘವು ಪದೇ ಪದೇ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ರಂಜಾನ್‌ಗೂ ಮುನ್ನ ಕೆಲಸ ಪೂರ್ಣಗೊಳ್ಳಲಿದೆ ಎಂದು ಭರವಸೆ ನೀಡಿದ್ದರು. ಆದರೆ, ಕಾಮಗಾರಿ ಕಾರ್ಯಗಳು ಆಮೆಗತಿಯಲ್ಲಿ ಸಾಗಿವೆ. ಪ್ರಸ್ತುತ ಪರಿಸ್ಥಿತಿಯನ್ನು ನೋಡಿದರೆ ಕಾಮಗಾರಿ ಪೂರ್ಣಗೊಳ್ಳುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಈದ್‌ಗೂ ಮುನ್ನ ಪೂರ್ಣಗೊಳ್ಳುತ್ತದೆ ಎಂಬ ಭರವಸೆಯನ್ನು ಕಳೆದುಕೊಂಡಿದ್ದೇವೆಂದು ಹೇಳಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಾರದ ಹಿನ್ನೆಲೆಯಲ್ಲಿ ಕೆಲ ಹೋಟೆಲ್ ಮಾಲೀಕರು ಮೆನುಗಳನ್ನು ಕಡಿತಗೊಳಿಸಿದ್ದಾರೆ. ಇನ್ನೂ ಕೆಲವರು ಕಾಮಗಾರಿ ಕಾರ್ಯಗಳು ಪ್ರಗತಿಯಲ್ಲಿರುವ ಕಾರಣ ಅಂಗಡಿಗಳನ್ನು ಆರ್‌ಟಿ ನಗರ, ನಾಗವಾರ ಮತ್ತು ಕಮ್ಮನಹಳ್ಳಿಯಂತಹ ಪ್ರದೇಶಗಳಿಗೆ ಸ್ಥಳಾಂತರಿಸಲು ನಿರ್ಧರಿಸಿದ್ದೇವೆಂದು ತಿಳಿಸಿದ್ದಾರೆ.
ಕಳೆದ ವರ್ಷ ಕೂಡ ಸಂಚಾರ ದಟ್ಟಣೆ ಹಿನ್ನೆಲೆಯಲ್ಲಿ ಆಹಾರ ಮೇಳ ನಿಲ್ಲಿಸುವಂತೆ ಫ್ರೇಜರ್ ಟೌನ್‌ನಲ್ಲಿರುವ ನೆರೆಯ ಸಂಘಗಳು ಮತ್ತು ವಿವಿಧ ಸಂಸ್ಥೆಗಳು ಆಗ್ರಹಿಸಿದ್ದವು. ಈ ವರ್ಷ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ತಮ್ಮ ಅಂಗಡಿಗಳ ಹೊರಗಿಕುವ ಪ್ರದೇಶಗಳಲ್ಲಿ ಮಳಿಗೆಗಳ ಸ್ಥಾಪಿಸಲು ಅನುಮತಿ ನೀಡಲಾಗಿದೆ.
ಆದಾಗ್ಯೂ ಸಂಚಾರ ಪೊಲೀಸರು ಅಂಗಡಿಗಳ ಹೊರಗೆ ಮಳಿಗೆ ಹಾಕಲು ಪೊಲೀಸರು ತಡೆ ಹೇರುತ್ತಿದ್ದಾರೆಂದು ಕೆಲ ಹೋಟೆಲ್ ಮಾಲೀಕರು ಬೇಸರ ವ್ಯಕ್ತಪಡಿಸಿದ್ದಾರೆ.
ನಿರ್ಮಾಣ ಕಾರ್ಯಗಳಿಂದ ಈಗಾಗಲೇ ಸ್ಥಳದಲ್ಲಿ ಸಂಚಾರ ದಟ್ಟಣೆ ಎದುರಾಗಿದೆ. ಮಳಿಗೆಗಳ ಸ್ಥಾಪನೆಯಿಂದ ಸಮಸ್ಯೆ ಮತ್ತಷ್ಟು ಉಲ್ಭಣಿಸುತ್ತವೆ ಎಂದು ಪೊಲೀಸರು ಹೇಳಿದ್ದಾರೆ.
ರಂಜಾನ್ ವೇಳೆ ಬೆಳಿಗ್ಗೆ ವ್ಯಾಪಾರ ಸಾಮಾನ್ಯವಾಗಿರುತ್ತದೆ. ಹೀಗಾಗಿ ಸಂಜೆಯ ವ್ಯಾಪಾರವನ್ನೇ ಅವಲಂಬಿಸಿದ್ದೇವೆಂದು ವೇರಾ ರೆಸ್ಟೋರೆಂಟ್‌ನ ಮೊಹ್ಮೀನ್ ಎಂಬುವವರು ಹೇಳಿದ್ದಾರೆ.
ಕೆಲ ಆಹಾರಗಳನ್ನು ಜನರು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಲು ಇಷ್ಟಪಡುವುದಿಲ್ಲ. ಏಕೆಂದರೆ ಅವುಗಳು ಬಿಸಿ ಮತ್ತು ತಾಜಾವಾಗಿ ಇರುವಾಗಲೇ ಸೇವಿಸಿದರೆ ಉತ್ತಮ ಎಂದು ಭಾವಿಸುತ್ತಾರೆ ಎಂದು ತಿಳಿಸಿದ್ದಾರೆ.
Advertisement