
ಬೆಂಗಳೂರು: ಬೆಳಗಾವಿಯಲ್ಲಿ ಕರ್ನಾಟಕದ ಬಸ್ ಕಂಡಕ್ಟರ್ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಮಾರ್ಚ್ 22ರಂದು ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ ಎಂದು ವಾಟಾಳ್ ನಾಗರಾಜ್ ಘೋಷಿಸಿದ್ದಾರೆ.
ಹೌದು.. ಇತ್ತೀಚೆಗಷ್ಟೇ ಬೆಳಗಾವಿಯಲ್ಲಿ ಕರ್ನಾಟಕದ ಸಾರಿಗೆ ಇಲಾಖೆ KSRTC ಬಸ್ ನಲ್ಲಿ ಕಂಡಕ್ಟರ್ ಮತ್ತು ಪ್ರಯಾಣಿಕನೊಂದಿಗೆ ನಡೆದಿದ್ದ ಗಲಾಟೆ ಪ್ರಕರಣ ತಾರಕಕ್ಕೇರಿತ್ತು. ಅಂದು ಬಸ್ ನಿರ್ವಾಹಕನ ಮೇಲೆ ಮರಾಠಿ ಪುಂಡರು ದಾಳಿ ಮಾಡಿದ್ದರು. ಅಲ್ಲದೆ ಕರ್ನಾಟಕದ ಬಸ್ ಚಾಲಕರ ಮುಖಕ್ಕೆ ಮರಾಠಿ ಪುಂಡರು ಮಸಿ ಬಳಿದಿದ್ದರು.
ಇದೀಗ ಇಂತಹ ಪುಂಡಾಟಿಕೆ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಿವೆ. ಕನ್ನಡಿಗರ ವಿರುದ್ಧ ದೌರ್ಜನ್ಯ ವೆಸಗುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಗೂ ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ತಡೆಯಲು ಸರ್ಕಾರದ ಮೇಲೆ ಒತ್ತಡ ಹಾಕಲು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಕರ್ನಾಟಕ ಬಂದ್ ಗೆ ಕರೆ ನೀಡಿದ್ದಾರೆ.
ಮಾರ್ಚ್ 22ರಂದು ಅಖಂಡ ಕರ್ನಾಟಕ ಬಂದ್ ಘೋಷಣೆ ಮಾಡಲಾಗಿದ್ದು, ಈ ಕುರಿತು ಇಂದು ನಡೆದ ಕನ್ನಡಪರ ಸಂಘಟನೆಗಳ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಇಂದು ಕರ್ನಾಟಕ ಬಂದ್ ಬಗ್ಗೆ ತೀರ್ಮಾನ ಮಾಡಲು ವಾಟಾಳ್ ನಾಗರಾಜ್ ಸಭೆ ಕರೆದಿದ್ದರು. ಈ ವೇಳೆ ಹಲವು ಸಂಘಟನೆಗಳ ಮುಖಂಡರು ಸಭೆಯಲ್ಲಿ ಹಾಜರಿದ್ದರು. ಸಭೆ ಬಳಿಕ ಮಾತನಾಡಿದ ವಾಟಾಳ್ ನಾಗರಾಜ್ ಅವರು, "ಯಾವುದೇ ಕಾರಣಕ್ಕೂ ಬಂದ್ ವಾಪಸ್ ಪಡೆಯುವುದಿಲ್ಲ, ಬಂದ್ ಮಾಡಿಯೇ ಮಾಡುತ್ತೇವೆ," ಎಂದು ಘೋಷಣೆ ಮಾಡಿದ್ದಾರೆ.
'ಹೊರರಾಜ್ಯ, ಸಂಸತ್ ಗಮನ ಸೆಳೆಯಲು ಮಾರ್ಚ್ 22ರಂದು ಕರ್ನಾಟಕ ಬಂದ್ ಮಾಡುತ್ತಿದ್ದೇವೆ. ಕರ್ನಾಟಕದಲ್ಲಿ ಕನ್ನಡಿಗರಿಗೆ ಹೊಡೆಯುತ್ತಿದ್ದಾರೆ. ಮಹಾರಾಷ್ಟ್ರದವರು ಕನ್ನಡಿಗರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೇ ಮರಾಠಿ ಪುಂಡರು ಕೆಎಸ್‌ಆರ್‌ಟಿಸಿ ಚಾಲಕ, ನಿರ್ವಾಕರ ಮುಖಕ್ಕೆ ಮಸಿ ಬಳಿಯುವುದಲ್ಲದೆ ಹಲ್ಲೆ ಕೂಡ ಮಾಡಿದ್ದಾರೆ. ಹಲ್ಲೆ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗುತ್ತದೆ ಎಂದು ಹೇಳಿದ್ದಾರೆ.
ಮನೆಯಲ್ಲೇ ಕೂತ್ಕೊಳ್ಳಿ
ಇದೇ ವೇಳೆ ಬಂದ್ ಗೆ ನೈತಿಕ ಬೆಂಬಲ ಸೂಚಿರುವ ಸಂಘಟನೆಗಳ ವಿರುದ್ಧವೂ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ ವಾಟಾಳ್ ನಾಗರಾಜ್, 'ಬಂದ್‌ಗೆ ನೈತಿಕ ಬೆಂಬಲ ಅನ್ನೋರು ಮನೆಯಲ್ಲಿ ಕೂತುಕೊಳ್ಳಿ. ಸುಮ್ಮನೆ ಸಂಘಟನೆ ಯಾಕೆ ಇಟ್ಟುಕೊಳ್ತಿರಾ? ಅನೇಕ ಕನ್ನಡಪರ ಸಂಘಟನೆಗಳು ನಮಗೆ ಬೆಂಬಲ ಕೊಟ್ಟಿದೆ. ನಾವು ಮಾರ್ಚ್ 22ರಂದು ಬಂದ್ ಮಾಡುತ್ತೇವೆ. ಇನ್ನೂ 3 ದಿನಗಳ ಕಾಲಾವಕಾಶವಿದೆ. ಬಂದ್ ಸಂಪೂರ್ಣ ಯಶಸ್ವಿಯಾಗಲಿದೆ. ಮಾರ್ಚ್ 22ರಂದು ಬೆಳಗ್ಗೆ 6ರಿಂದ ಸಂಜೆ 6 ಗಂಟೆ ತನಕ ಬಂದ್ ನಡೆಯಲಿದೆ. ಬೆಳಗ್ಗೆ 10:30ಕ್ಕೆ ಟೌನ್ ಹಾಲ್‌ನಿಂದ ಫ್ರೀಡಂ ಪಾರ್ಕ್ ತನಕ ಪ್ರತಿಭಟನಾ ಮೆರವಣಿಗೆ ಮಾಡುತ್ತೇವೆ' ಎಂದರು.
ಮೆಟ್ರೋ, ಬಸ್, ಗಾಡಿ ಹತ್ತ ಬೇಡಿ
ಅಂತೆಯೇ ಮಾರ್ಚ್ 22ರಂದು ಯಾರು ಮೆಟ್ರೋ ಹತ್ತಬೇಡಿ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಜೊತೆ ಮಾತಾನಾಡಿದ್ದೇವೆ. ಅವತ್ತು ಬಸ್ ಓಡಿಸಬಾರದೆಂದು ಹೇಳಿದ್ದೇವೆ. ಇನ್ನೂ ಒಂದು ಸಲ ಹೇಳುತ್ತೇವೆ ಅವತ್ತು ಬಸ್ ಓಡಿಸಬಾರದು. ಮಂತ್ರಿ, ಸಿಎಂ ಕಾರಿನ ಚಾಲಕರೇ ಆಗಿರಲಿ, ಮಾನ ಮರ್ಯಾದೆ ಗೌರವ ಅಭಿಮಾನ ಸ್ವಾಭಿಮಾನಕ್ಕೆ ಅಂದು ಗಾಡಿ ಹತ್ತಬೇಡಿ ಎಂದರು. ಖಾಸಗಿ ಶಿಕ್ಷಣ ಸಂಸ್ಥೆಗಳು, ದರೋಡೆಕೋರರು, ಕನ್ನಡ ಕಲಿಸಲ್ಲ ಅಂತ ನ್ಯಾಯಾಲಯಕ್ಕೆ ಹೋಗ್ತಾರೆ. ಚಾಲಕರು ಯಾರೇ ಇರಲಿ, ಬಸ್ ಆಟೋ, ಕಾರು ಚಾಲಕರಿಗೆ ಇದು ಸ್ವಾಭಿಮಾನ, ಮರ್ಯಾದೆ ಪ್ರಶ್ನೆಯಾಗಿದೆ ಎಂದು ವಾಟಾಳ್ ನಾಗರಾಜ್ ಹೇಳಿದರು.
Advertisement