
ಬೆಂಗಳೂರು: 'ನ್ಯಾಯಯುತ ಮತ್ತು ನಿಷ್ಪಕ್ಷಪಾತ' ತನಿಖೆ ನಡೆಯಲು ಸಚಿವರ ವಿರುದ್ಧದ ಹನಿಟ್ರ್ಯಾಪ್ ಪ್ರಕರಣವನ್ನು ಕೇಂದ್ರ ತನಿಖಾ ದಳಕ್ಕೆ ಹಸ್ತಾಂತರಿಸುವಂತೆ ಗೃಹ ಸಚಿವ ಡಾ. ಜಿ ಪರಮೇಶ್ವರ ಅವರನ್ನು ಒತ್ತಾಯಿಸಿರುವುದಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಶುಕ್ರವಾರ ಹೇಳಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, 'ನ್ಯಾಯಯುತ ಮತ್ತು ನಿಷ್ಪಕ್ಷಪಾತ ತನಿಖೆಗಾಗಿ ಚುನಾಯಿತ ಪ್ರತಿನಿಧಿಗಳು ಆರೋಪಿಸಿರುವ ಹನಿಟ್ರ್ಯಾಪ್ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವಂತೆ ನಾನು ಗೃಹ ಸಚಿವ ಜಿ ಪರಮೇಶ್ವರ ಅವರಿಗೆ ಪತ್ರ ಬರೆದಿದ್ದೇನೆ' ಎಂದು ಹೇಳಿದ್ದಾರೆ.
ಸಹಕಾರ ಸಚಿವ ಕೆಎನ್ ರಾಜಣ್ಣ ಅವರು ತಮ್ಮ ಮೇಲೆ ಹನಿ ಟ್ರ್ಯಾಪ್ ಯತ್ನ ನಡೆದಿದೆ ಎಂದು ಆರೋಪಿಸಿದಾಗ ಶುಕ್ರವಾರ ವಿಧಾನಸಭೆಯಲ್ಲಿ ಗದ್ದಲ ಉಂಟಾಯಿತು.
ಕೆಲವು ಸದಸ್ಯರು ತಮ್ಮ ಕೈಯಲ್ಲಿ ಸಿಡಿಗಳನ್ನು ಹಿಡಿದುಕೊಂಡು ಹನಿ ಟ್ರ್ಯಾಪ್ ಬಗ್ಗೆ ಪುರಾವೆಗಳಿವೆ ಎಂದು ಹೇಳಿದಾಗ ಬಿಜೆಪಿ ಶಾಸಕರು 'ಡೌನ್, ಡೌನ್' ಎಂದು ಜೋರಾಗಿ ಘೋಷಣೆಗಳನ್ನು ಕೂಗಿದರು. ನಂತರ ಸಿಎಂ ಸಿದ್ದರಾಮಯ್ಯ ಮಾತನಾಡುತ್ತಿರುವಾಗಲೇ ಅವರು ಸದನದ ಬಾವಿಗೆ ನುಗ್ಗಿದರು.
ತನಿಖೆಯನ್ನು ಸಿಬಿಐಗೆ ಒಪ್ಪಿಸಿ: ಬಿವೈ ವಿಜಯೇಂದ್ರ
ಸಚಿವರಿಗೆ ಹನಿಟ್ರ್ಯಾಪ್ ಯತ್ನ ಪ್ರಕರಣವನ್ನು ಸಿಬಿಐ ಅಥವಾ ಹಾಲಿ ಹೈಕೋರ್ಟ್ ನ್ಯಾಯಾಧೀಶರಿಗೆ ವಹಿಸಬೇಕು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆಗೆ ಆದೇಶಿಸುವುದು ಸಿಎಂ ಜವಾಬ್ದಾರಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಶುಕ್ರವಾರ ತಿಳಿಸಿದ್ದಾರೆ.
'ಹನಿ ಟ್ರ್ಯಾಪಿಂಗ್ ವಿಷಯವನ್ನು ಕಾಂಗ್ರೆಸ್‌ನ ಹಿರಿಯ ಶಾಸಕ ಹಾಗೂ ಸಚಿವರೊಬ್ಬರು ನಿನ್ನೆ ಸದನದಲ್ಲಿ ಪ್ರಸ್ತಾಪಿಸಿ, ಹನಿ ಟ್ರ್ಯಾಪಿಂಗ್ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು. ನಿನ್ನೆ ಗೃಹ ಸಚಿವರು ಈ ವಿಷಯದ ಬಗ್ಗೆ ತನಿಖೆ ನಡೆಸುವುದಾಗಿ ಘೋಷಿಸಿದರು. ಆದರೆ, ಸಂಜೆ ಗೃಹ ಸಚಿವ ಜಿ ಪರಮೇಶ್ವರ್ ಅವರು ಹನಿ ಟ್ರ್ಯಾಪಿಂಗ್ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ತಮಗೆ ಬಂದಿಲ್ಲ ಎಂದು ಹೇಳಿದರು. ಇದರರ್ಥ ಕಾಂಗ್ರೆಸ್ ಈ ವಿಷಯವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆಗೆ ಆದೇಶಿಸುವುದು ಮುಖ್ಯಮಂತ್ರಿಗಳ ಜವಾಬ್ದಾರಿಯಾಗಿದೆ' ಎಂದು ಹೇಳಿದರು.
'ಇದು ಒಂದು ಪಕ್ಷದ ವಿಷಯವಲ್ಲ, ಜನರಿಗಾಗಿ ಕೆಲಸ ಮಾಡುತ್ತಿರುವ ಶಾಸಕರ ವಿರುದ್ಧದ ದೊಡ್ಡ ಪಿತೂರಿ. ಕೆಲವರು ಸ್ಪಷ್ಟ ಗುಪ್ತ ಕಾರ್ಯಸೂಚಿಯೊಂದಿಗೆ ಇದನ್ನು ಮಾಡುತ್ತಿದ್ದಾರೆ' ಎಂದು ಬಿಜೆಪಿ ಶಾಸಕ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ ಹೇಳಿದರು.
Advertisement