
ಬೆಂಗಳೂರು: ಮಾ. 22ರಂದು ಕನ್ನಡ ಪರ ಒಕ್ಕೂಟಗಳು ಕರೆ ಕೊಟ್ಟಿರುವ “ಕರ್ನಾಟಕ ಬಂದ್’ ಅನ್ನು ಯಾವುದೇ ಕಾರಣಕ್ಕೂ ಸರ್ಕಾರ ಬೆಂಬಲಿಸುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗುರುವಾರ ಸ್ಪಷ್ಟಪಡಿಸಿದರು.
ವಿಧಾನ ಪರಿಷತ್ತಿನ ಶೂನ್ಯ ವೇಳೆಯಲ್ಲಿ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾ.22 ರಂದು ನಡೆಯಲಿರುವ ಕರ್ನಾಟಕ ಬಂದ್ ನಿಂದ ವಿದ್ಯಾರ್ಥಿಗಳ ಪರೀಕ್ಷೆಗೆ ತೊಂದರೆಯಾಗುತ್ತದೆ ಎನ್ನುವ ವಿಚಾರವನ್ನು ಪ್ರಸ್ತಾಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅವರು, ಜನರು ಕಾನೂನು ಕೈಗೆತ್ತುಕೊಳ್ಳಬಾರದು. ಸರ್ಕಾರ ಅಥವಾ ನ್ಯಾಯಾಲಯ ಬಂದ್‌ಗಳನ್ನು ಪ್ರೋತ್ಸಾಹಿಸುವುದಿಲ್ಲ. ಬಂದ್ ಸರಿಯಾದ ವಿಧಾನವಲ್ಲ ಎಂದು ನಾವು ಪ್ರತಿಭಟನಾಕಾರರಿಗೆ ತಿಳಿಸುತ್ತೇವೆ. ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಹೇಳಿದರು.
ಬೆಳಗಾವಿಯಲ್ಲಿ ಸರ್ಕಾರಿ ಬಸ್ ಕಂಡಕ್ಟರ್ ಮೇಲೆ ಮರಾಠಿ ಮಾತನಾಡದ ಕಾರಣ ಹಲ್ಲೆ ಖಂಡಿಸಿ ಬಂದ್ ಕರೆ ನೀಡಲಾಗಿದ್ದರೂ, ಸಾರಿಗೆ ಸಂಘಗಳು ಬಂದ್'ಗೆ ಬೆಂಬಲ ವ್ಯಕ್ತಪಡಿಸಿಲ್ಲ.
ಮಾರ್ಚ್ 22 ರ ಕರ್ನಾಟಕ ಬಂದ್ ಬಗ್ಗೆ ನಮ್ಮೊಂದಿಗೆ ಮಾತುಕತೆ ನಡೆಸಿಲ್ಲ, ಹೀಗಾಗಿ ಬಂದ್'ಗೆ ಬೆಂಬಲ ನೀಡುವುದಿಲ್ಲ ಎಂದು ಕೆಎಸ್‌ಆರ್‌ಟಿಸಿ ಕಾರ್ಮಿಕ ಸಂಘಗಳು ತಿಳಿಸಿವೆ.
ನಮ್ಮಲ್ಲಿ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಬಂದ್‌ಗೆ ಕರೆ ನೀಡಿದ್ದಾರೆ. ನಮ್ಮ ಸಿಬ್ಬಂದಿ ಮೇಲಿನ ದಾಳಿಯ ಬಗ್ಗೆ ಸರ್ಕಾರ ತ್ವರಿತವಾಗಿ ಕ್ರಮ ಕೈಗೊಳ್ಳದಿದ್ದರೆ, ಬಂದ್‌ಗೆ ಸ್ವಲ್ಪ ಅರ್ಥವಿರುತ್ತಿತ್ತು. ಸರ್ಕಾರ ತಕ್ಷಣ ಪ್ರತಿಕ್ರಿಯಿಸಿದೆ. ಆದ್ದರಿಂದ ಬಂದ್ ಅಗತ್ಯವಿಲ್ಲ ಎಂದು ಒಕ್ಕೂಟದ ಪ್ರತಿನಿಧಿಯೊಬ್ಬರು ಹೇಳಿದ್ದಾರೆ.
ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು, ಕನ್ನಡ ಪರ ಸಂಘಟನೆಗಳ ಒಕ್ಕೂಟವು ಬಂದ್ ಕುರಿತು ಲಿಖಿತ ಮನವಿ ಸಲ್ಲಿಸಿಲ್ಲ. ಆದರೆ ಮೌಖಿಕವಾಗಿ ಮಾತ್ರ ಈ ಬಗ್ಗೆ ತಿಳಿಸಿದೆ. ಅವರು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯಕ್ಕೆ ಸಂಬಂಧಿಸಿದ ಸಮಸ್ಯೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ. ನಾವು ಅದನ್ನು ಪ್ರಶಂಸಿಸಬೇಕು ಎಂದು ಹೇಳಿದರು.
ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ. ನರಸಿಂಹಲು ಅವರು, ಮಂಡಳಿಯು ಬಂದ್‌ಗೆ ಬೆಂಬಲ ನೀಡುತ್ತದೆ. ಚಲನಚಿತ್ರ ಪ್ರದರ್ಶನಗಳು ಮತ್ತು ಚಿತ್ರೀಕರಣಗಳನ್ನು ಶನಿವಾರ ಮಧ್ಯಾಹ್ನದವರೆಗೆ ಸ್ಥಗಿತಗೊಳಿಸಲಾಗುತ್ತದೆ ಎಂದು ಹೇಳಿದರು.
ಏತನ್ಮಧ್ಯೆ, ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಅಸೋಸಿಯೇಟೆಡ್ ಮ್ಯಾನೇಜ್‌ಮೆಂಟ್ ಮತ್ತು ರಾಜ್ಯ ಪೋಷಕರ ಸಂಘಗಳು ಪರೀಕ್ಷೆಗಳು ನಡೆಯುತ್ತಿರುವುದನ್ನು ಉಲ್ಲೇಖಿಸಿ ಬಂದ್‌ಗೆ ಬೆಂಬಲ ನೀಡುವುದಿಲ್ಲ ಎಂದು ಹೇಳಿದೆ.
ಇನ್ನು ರಾಜ್ಯಾದ್ಯಂತ ಹೋಟೆಲ್ ಮಾಲೀಕರ ಸಂಘಗಳು ನೈತಿಕ ಬೆಂಬಲವನ್ನು ಮಾತ್ರ ನೀಡುತ್ತೇವೆಂದು ಹೇಳಿದ್ದು, ಹೋಟೆಲ್‌ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ಹೇಳಿಕೊಂಡಿದೆ. ಬೀದಿ ವ್ಯಾಪಾರಿಗಳ ಸಂಘ ಕೂಡ ನೈತಿಕ ಬೆಂಬಲ ನೀಡುವುದಾಗಿ ತಿಳಿಸಿದೆ.
ಆದರ್ಶ ಆಟೋ ಟ್ಯಾಕ್ಸಿ ಯೂನಿಯನ್, ಆಟೋ ರಿಕ್ಷಾ ಚಾಲಕರ ಒಕ್ಕೂಟ ಮತ್ತು ಓಲಾ-ಉಬರ್ ಚಾಲಕರು ಮತ್ತು ಮಾಲೀಕರ ಸಂಘಗಳು ಬಂದ್‌ಗೆ ಸಂಪೂರ್ಣ ಬೆಂಬಲ ನೀಡಿದ್ದು, ಇದು ಬೆಂಗಳೂರು ನಗರದಲ್ಲಿ ಸಾರಿಗೆ ಸೇವೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ.
Advertisement