
ಬೆಂಗಳೂರು: ಮುಖ್ಯಮಂತ್ರಿ, ಸಚಿವರು, ವಿಧಾನಸಭಾ ಸ್ಪೀಕರ್, ಪರಿಷತ್ತಿನ ಸಭಾಧ್ಯಕ್ಷರು, ಶಾಸಕರು ಮತ್ತು ವಿಧಾನ ಪರಿಷತ್ತಿನ ಸದಸ್ಯರ ವೇತನ ಮತ್ತು ಇತರ ಭತ್ಯೆ ಹೆಚ್ಚಳಕ್ಕೆ ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದೆ.
ವೇತನ ಮತ್ತು ವಿವಿಧ ಭತ್ಯೆಗಳನ್ನು ಹೆಚ್ಚಿಸಲು ಅವಕಾಶ ಕಲ್ಪಿಸುವ ‘ಕರ್ನಾಟಕ ಮಂತ್ರಿಗಳ ಸಂಬಳಗಳು ಮತ್ತು ಭತ್ಯೆಗಳ (ತಿದ್ದುಪಡಿ) ಮಸೂದೆ 2025’ ಮತ್ತು ‘ಕರ್ನಾಟಕ ವಿಧಾನಮಂಡಲದವರ ಸಂಬಳಗಳು, ಪಿಂಚಣಿಗಳು ಮತ್ತು ಭತ್ಯೆಗಳ (ತಿದ್ದುಪಡಿ) ಮಸೂದೆ 2025’ರ ಸಿದ್ಧವಾಗಿದ್ದುು, 2 ಪ್ರತ್ಯೇಕ ಮಸೂದೆಗಳನ್ನು ಅನಮೋದನೆಗಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರ ಇಲಾಖೆಯು ರಾಜ್ಯಪಾಲರಿಗೆ ರವಾನಿಸಿದೆ. ರಾಜ್ಯಪಾಲರ ಅನುಮೋದನೆ ಬಳಿಕ ಮಸೂದೆಗಳನ್ನು ಸದನಗಳಲ್ಲಿ ಮಂಡಿಸಲಿದೆ ಎಂದು ಮೂಲಗಳು ತಿಳಿಸಿವೆ.
ಶೇ.100 ರಷ್ಟು ಸಂಬಳ ಹೆಚ್ಚಳ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ಮೂಲಕ ಸಿಎಂ, ಸಚಿವರು, ಶಾಸಕರ ಸಂಬಳ ಶೇ. 100 ರಷ್ಟು ಹೆಚ್ಚಳವಾಗಲಿದೆ. ಸದ್ಯ ಭಾರೀ ಪ್ರಮಾಣದಲ್ಲಿ ಜನಪ್ರತಿನಿಧಿಗಳ ಸಂಬಳ ಏರಿಕೆಯಾಗಲಿದೆ.
ರಾಜ್ಯಪಾಲರ ಕಚೇರಿಯಿಂದ ನಮಗೆ ಇನ್ನೂ ಯಾವುದೇ ಮಾಹಿತಿ ಬಂದಿಲ್ಲ. ಈ ಅಧಿವೇಶನದಲ್ಲಿಯೇ ಮಸೂದೆಯನ್ನು ಮಂಡಿಸಲಾಗುತ್ತದೆಯೇ ಎಂಬುದೂ ಖಚಿತವಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬಂದ ನಂತರ ಮೈಸೂರು ಸಚಿವರ ವೇತನ ಮತ್ತು ಭತ್ಯೆ ಕಾಯ್ದೆ, 1956 ಅನ್ನು ಹಲವಾರು ಬಾರಿ ತಿದ್ದುಪಡಿ ಮಾಡಲಾಗಿದೆ. 2022 ರಲ್ಲಿಯೂ ಕಾಯ್ದೆ ತಿದ್ದುಪಡಿ ಮಾಡಲಾಗಿತ್ತು. ಈ ಕಾಯ್ದೆಯ ಪ್ರಕಾರ, ಮುಖ್ಯಮಂತ್ರಿಗಳ ವೇತನ 75,000 ರೂ. ಮತ್ತು ಸಚಿವರ ಮಾಸಿಕ 60,000 ರೂ. ಜೊತೆಗೆ 4.5 ಲಕ್ಷ ರೂ. ಭತ್ಯೆ ನೀಡಲಾಗುತ್ತದೆ.
ಮಸೂದೆ ಅಂಗೀಕಾರ ದೊರೆತಿದ್ದೇ ಆದರೆ, ಶಾಸಕರು ಮತ್ತು ಸಚಿವರ ಪ್ರಯೋಜನಗಳು ದ್ವಿಗುಣಗೊಳ್ಳಲಿವೆ. ಪ್ರಸ್ತುತ ಮುಖ್ಯಮಂತ್ರಿಗಳ ವೇತನ 75,000 ರೂಪಾಯಿ ಇದೆ. 1.5 ಲಕ್ಷ ರೂಪಾಯಿ ಆಗಲಿದೆ. ಮುಖ್ಯಮಂತ್ರಿ ಅತಿಥಿ ಭತ್ಯೆ 4.5 ಲಕ್ಷ ರೂಪಾಯಿ ಇದ್ದು, ಅದು 5 ಲಕ್ಷ ರೂಪಾಯಿ ಆಗಲಿದೆ.
ಸಭಾಧ್ಯಕ್ಷ, ಸಭಾಪತಿ ವೇತನ ಈಗ 75000 ರೂಪಾಯಿ ಇದ್ದು, ಪ್ರಸ್ತಾವಿತ ಹೆಚ್ಚಳದ ಪ್ರಕಾರ 1.25 ಲಕ್ಷ ರೂಪಾಯಿ ಆಗಿಲಿದೆ. ಇದೇ ರಿತಿ ಸಭಾಧ್ಯಕ್ಷ, ಸಭಾಪತಿ ಅತಿಥಿ ಭತ್ಯೆ 4 ಲಕ್ಷ ರೂಪಾಯಿ ಇರೋದು 5 ಲಕ್ಷ ರೂಪಾಯಿ ಆಗಲಿದೆ.
ಉಪ ಸಭಾಧ್ಯಕ್ಷ, ಉಪ ಸಭಾಪತಿಗಳ ವೇತನ 60,000 ರೂಪಾಯಿ ಇದ್ದು, 80,000 ರೂಪಾಯಿ ಆಗಲಿದೆ. ಉಪ ಸಭಾಧ್ಯಕ್ಷ, ಉಪ ಸಭಾಪತಿಗಳ ಅತಿಥಿ ಭತ್ಯೆ 2.5 ಲಕ್ಷ ರೂಪಾಯ ಇದ್ದು, 3 ಲಕ್ಷ ರೂಪಾಯಿ ಆಗಲಿದೆ.
ವಿಧಾನ ಪರಿಷತ್ ಮತ್ತು ವಿಧಾನ ಸಭೆ ವಿಪಕ್ಷ ನಾಯಕರ ವೇತನ 60,000 ರೂಪಾಯಿ ಇದ್ದು, ಅದು 80,000 ರೂಪಾಯಿ ಆಗಲಿದೆ.
ಮುಖ್ಯ ಸಚೇತಕರ ವೇತನ 50,000 ರೂಪಾಯಿ ಇದ್ದು, 70,000 ರೂಪಾಯಿ ಆಗಲಿದೆ. ಮುಖ್ಯ ಸಚೇತಕರ ಅತಿಥಿ ಭತ್ಯೆ 2.5 ಲಕ್ಷ ರೂಪಾಯ ಇದ್ದು, 3 ಲಕ್ಷ ರೂಪಾಯಿ ಅಗಲಿದೆ. ವಿಪಕ್ಷ ಮುಖ್ಯ ಸಚೇತಕರ ಅತಿಥಿ ಭತ್ಯೆ 2.5 ಲಕ್ಷ ರೂಪಾಯ ಇದ್ದು, 3 ಲಕ್ಷ ರೂಪಾಯಿ ಅಗಲಿದೆ.
ಅದೇ ರೀತಿ. ಸಚಿವರ ವೇತನ 60,000 ರೂಪಾಯಿ ಇದ್ದು, ಇದು 1.25 ಲಕ್ಷ ರೂಪಾಯಿ ಆಗಲಿದೆ. ಸಚಿವರ ಅತಿಥಿ ಭತ್ಯೆ 4.5 ಲಕ್ಷ ರೂಪಾಯಿ ಇರುವುದು 5 ಲಕ್ಷ ರೂಪಾಯಿ ಆಗಲಿದೆ.
ಸಚಿವರಿಗೆ ಮನೆ ಬಾಡಿಗೆ ಭತ್ಯೆ 1.2 ಲಕ್ಷ ರೂಪಾಯಿ ಇದ್ದು, 2.5 ಲಕ್ಷ ರೂಪಾಯಿ ಆಗಲಿದೆ. ರಾಜ್ಯ ಸಚಿವರ ವೇತನ 50,000 ರೂಪಾಯಿ ಇದ್ದು, 75,000 ರೂಪಾಯಿ ಆಗಲಿದೆ. ರಾಜ್ಯ ಸಚಿವರ ಮನೆ ಬಾಡಿಗೆ ಭತ್ಯೆ 1.2 ಲಕ್ಷ ರೂ ಇದ್ದು 2 ಲಕ್ಷ ರೂಪಾಯಿ ಆಗಲಿದೆ ಎಂದು ಮೂಲಗಳು ತಿಳಿಸಿವೆ.
Advertisement