
ಬೆಂಗಳೂರು: ಕರ್ನಾಟಕದಲ್ಲಿ ಆರಂಭವಾಗಿರುವ ಪೂರ್ವ ಮುಂಗಾರು (Pre Monsoon) ಮಾರುತಗಳು ಚುರುಕು ಪಡೆದುಕೊಂಡಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸೋಮವಾರವೂ ಕೂಡ ಭಾರಿ ಮಳೆಯಾಗುತ್ತಿದೆ.
ಬಿರು ಬೇಸಿಗೆ ನಡುವೆಯೇ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ವಿಜಯಪುರ, ಬಾಗಲಕೋಟೆ, ಹಾಸನ, ಕೊಡಗು ಜಿಲ್ಲೆಯಲ್ಲಿ ಭಾರಿ ವರ್ಷಧಾರೆಯಾಗಿದೆ. ಪೂರ್ವ ಮುಂಗಾರು ಚುರುಕು ಪಡೆದುಕೊಂಡಿದ್ದು, ಬೇಸಿಗೆಯಲ್ಲಿಯೂ ಉತ್ತಮ ಮಳೆಯಾಗುತ್ತಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಕೊಡಗು ಜಿಲ್ಲೆಯ ಹಲವೆಡೆ ಇಂದು ಭಾರಿ ಮಳೆಯಾಗಿದ್ದು, ಮಡಿಕೇರಿ ನಗರ ಸೇರಿದಂತೆ ಹಲವೆಡೆ ಆಲಿಕಲ್ಲು ಮಳೆಯಾಗುತ್ತಿದ್ದು, ಕಾಫಿ ಬೆಳೆಗಾರರಲ್ಲಿ ಮಂದಹಾಸ ಮೂಡಿದೆ. ಗುಡುಗು ಸಿಡಿಲು ಆಲಿಕಲ್ಲು ಸಹಿತ ಮಳೆಯಾಗಿದೆ. ಹಾಸನದಲ್ಲೂ ಮಳೆಯಾಗುತ್ತಿದ್ದು, ಜಿಲ್ಲೆಯ ಸಕಲೇಶಪುರ, ಆಲೂರು ತಾಲ್ಲೂಕಿನಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ.
ಅತ್ತ ಬಿರು ಬಿಸಿಲಿನಿಂದ ಕಾದು ಕೆಂಡವಾಗಿದ್ದ ವಿಜಯಪುರ ಜಿಲ್ಲೆಯಲ್ಲೂ ಸಹ ವರುಣ ತಂಪೆರೆದಿದ್ದು, ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಂಗಾಪುರದಲ್ಲಿ ಕಳೆದ ಅರ್ಧ ಗಂಟೆಯಿಂದ ಗುಡುಗು, ಮಿಂಚು ಸಹಿತ ಆಲಿಕಲ್ಲು ಮಳೆಯಾಗುತ್ತಿದೆ. ಅತ್ತ ಗಾಳಿ ಮಳೆ ಹೊಡೆತಕ್ಕೆ ನಾಗನೂರು ಗ್ರಾಮದಲ್ಲಿ ಅಣ್ಣಪ್ಪ ಶಿರಹಟ್ಟಿ ಎಂಬುವರ ಗೋವಿನಜೋಳ ನೆಲಕ್ಕೆ ಉರುಳಿದೆ. ಬಾಗಲಕೋಟೆ ಜಿಲ್ಲೆಯಲ್ಲೂ ಗಾಳಿ ಸಹಿತ ಭಾರೀ ಮಳೆಯಾಗುತ್ತಿದ್ದು, ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ, ತೊದಲಬಾಗಿ ಗ್ರಾಮಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ.
ಇನ್ನೂ 3 ದಿನ ವರ್ಷಧಾರೆ
ಹವಾಮಾನ ಇಲಾಖೆ ಮಾಹಿತಿಯಂತೆ ಇನ್ನೂ ಮೂರು ದಿನಗಳ ಮಳೆಯಾಗಲಿದ್ದು, ಅಂದರೆ ಮಾರ್ಚ್ 24 ರಿಂದ 27 ವರೆಗೆ ನಾಲ್ಕು ದಿನ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ಚಿಕ್ಕಮಗಳೂರು, ಕೊಡಗು, ಹಾಸನ, ಮೈಸೂರು, ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳ ಒಂದೆರಡು ಸ್ಥಳಗಳಲ್ಲಿ ಗುಡುಗುಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.
Advertisement