
ಬೆಂಗಳೂರು: ಮೇಕೆದಾಟು ಯೋಜನೆ ಜಾರಿಗೆ ರಾಜ್ಯ ಸರ್ಕಾರ ಬದ್ಧವಾಗಿದ್ದು, ನ್ಯಾಯಾಲಯದಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಂಗಳವಾರ ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮಿಳುನಾಡು ರಾಜಕೀಯ ನಿರ್ಧಾರ ತೆಗೆದುಕೊಂಡಿದೆ. ನಮ್ಮ ನೀರು ನಮ್ಮ ಹಕ್ಕು. ಅವರು ಅವರದೇ ಆದ ರಾಜಕೀಯ ನಿಲುವು ತೆಗೆದುಕೊಂಡಿದ್ದಾರೆ. ಈ ಹಿಂದೆ ಅನೇಕ ಬಾರಿ ಜೆ.ಎಚ್. ಪಟೇಲ್ ಅವರು ಮುಖ್ಯಮಂತ್ರಿಯಾಗಿದ್ದಾಗ ಹೋಗಿ ಮಾತುಕತೆ ಮಾಡಲಾಗಿತ್ತು. ನಾವು ಈ ವಿಚಾರದಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದು, ಅಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ. ನ್ಯಾಯಾಲಯದ ತೀರ್ಪಿಗೆ ಯಾರೂ ಅಡ್ಡಿ ಮಾಡಲು ಸಾಧ್ಯವಿಲ್ಲ. ಅವರು ತಮ್ಮ ವಾದ ಮಾಡಲಿ, ನಾವು ನಮ್ಮ ವಾದ ಮಂಡಿಸುತ್ತೇವೆ, ಯಾರೂ ನ್ಯಾಯಾಲಯಗಳಿಗಿಂತ ಮೇಲಲ್ಲ ಎಂದು ಹೇಳಿದರು.
ಮೇಕೆದಾಟು ಯೋಜನೆ ಡಿಪಿಆರ್ ಸಲ್ಲಿಕೆ ಮಾಡಿಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯಿ, ಕೇಂದ್ರ ಸರ್ಕಾರಕ್ಕೆ ಡಿಪಿಆರ್ (ವಿವರವಾದ ಯೋಜನಾ ವರದಿ) ಸಲ್ಲಿಕೆ ಮಾಡಲಾಗಿದೆ. ಈ ಯೋಜನೆ ಜಾರಿಗೆ ನಾವು ಬದ್ಧವಾಗಿದ್ದೇವೆ. ಕೇಂದ್ರ ಸರ್ಕಾರಕ್ಕೂ ಪ್ರಸ್ತಾವನೆ ಸಲ್ಲಿಸಿದ್ದು, ನ್ಯಾಯಾಲಯದಲ್ಲಿಯೂ ಹೋರಾಟ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ದೇವೇಗೌಡ ಹಾಗೂ ಕುಮಾರಸ್ವಾಮಿ ಅವರು ಕೈ ಹಿಡಿದು ಒಪ್ಪಿಗೆ ಕೊಡಿಸುವುದಾಗಿ ಹೇಳಿದ್ದರು. ಅವರು ಯಾಕೆ ಕೊಡಿಸುತ್ತಿಲ್ಲ. ರಾಜಕೀಯದಲ್ಲಿ ಅನೇಕ ಒತ್ತಡಗಳಿರುತ್ತವೆ. ಈ ಯೋಜನೆಯಿಂದ ಕರ್ನಾಟಕಕ್ಕಿಂತ ತಮಿಳುನಾಡಿಗೆ ಹೆಚ್ಚು ಅನುಕೂಲವಾಗಲಿದೆ. ಸಮುದ್ರಕ್ಕೆ ವ್ಯರ್ಥವಾಗಿ ಹೋಗುತ್ತಿರುವ ನೀರನ್ನು ಸಂಗ್ರಹಿಸಲು ನೆರವಾಗಲಿದೆ. ಹೀಗಾಗಿ ಈ ಯೋಜನೆಗೆ ಸಹಕಾರ ನೀಡಿ ಎಂದು ತಮಿಳುನಾಡಿನವರಿಗೆ ಮನವಿ ಮಾಡುತ್ತೇನೆ. ಕೃಷ್ಣಾ ನೀರು ಸಂಬಂಧ ಆಂಧ್ರ ಪ್ರದೇಶ ಸಿಎಂ ಜತೆ ಚರ್ಚೆಗೆ ದಿನಾಂಕ ಕೇಳಿದ್ದು, ಅವರು ದಿನಾಂಕ ನಿಗದಿ ಮಾಡಿದ ಬಳಿಕ ಹೋಗಿ ಭೇಟಿ ಮಾಡುವೆ ಎಂದು ಹೇಳಿದರು.
ರಾಜಣ್ಣ ಅವರು ಹನಿಟ್ರ್ಯಾಪ್ ವಿಚಾರವಾಗಿ ಪ್ರತಿಕ್ರಿಯಿಸಿ, ಗೃಹ ಸಚಿವರು ಬಹಳ ಹಿರಿಯರು. ಅವರಿಗೆ ಪಕ್ಷ ನಡೆಸಿ, ಜೊತೆಗೆ ಸರ್ಕಾರದಲ್ಲೂ ಅನುಭವವಿದೆ. ಅವರು ಹಾಗೂ ಮುಖ್ಯಮಂತ್ರಿಗಳು ಎಲ್ಲಾ ರೀತಿಯ ತನಿಖೆ ನಡೆಸುವುದಾಗಿ ಸದನದಲ್ಲಿ ಹೇಳಿದ್ದು, ರಾಜಣ್ಣ ಅವರಿಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಯಾವ ರೀತಿ ನ್ಯಾಯ ಒದಗಿಸಬೇಕೋ ಒದಗಿಸುತ್ತಾರೆ ಎಂದು ತಿಳಿಸಿದರು.
Advertisement