
ಬೆಂಗಳೂರು: ಉತ್ತರ ಪ್ರದೇಶ ಮೂಲದ ರಾಜಶ್ರೀ ಎಲೆಕ್ಟ್ರಿಕಲ್ಸ್ ರಾಜ್ಯದಲ್ಲಿ ಜಾರಿಗೆ ತರುತ್ತಿರುವ ಸ್ಮಾರ್ಟ್ ಮೀಟರ್ ಯೋಜನೆಯಲ್ಲಿ ಯಾವುದೇ ಹಗರಣ ನಡೆದಿಲ್ಲ, ಯಾವುದೇ ಅಕ್ರಮ ಮತ್ತು ಅದರ ಬಗ್ಗೆ ವಿವರಗಳನ್ನು ಸಲ್ಲಿಸಿದರೆ ಯೋಜನೆಯನ್ನು ನಿಲ್ಲಿಸಲಾಗುವುದು ಎಂದು ಸಚಿವ ಕೆ,ಜೆ,ಜಾರ್ಜ್ ಅವರು ಬುಧವಾರ ಹೇಳಿದರು.
ವಿಧಾನಸೌಧದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕೇಂದ್ರದ ಆರ್‌ಡಿಎಸ್‌ಎಸ್ ಯೋಜನೆ ರಾಜ್ಯದಲ್ಲಿ ಅಳವಡಿಸಿಕೊಳ್ಳದ ಕಾರಣ ಬೇರೆ ರಾಜ್ಯಗಳಿಗಿಂತ ಸ್ಮಾರ್ಟ್ ಮೀಟರ್ ದರ ರಾಜ್ಯದಲ್ಲಿ ಹೆಚ್ಚಿದೆ. ವಿದ್ಯುತ್ ಸ್ಮಾರ್ಟ್ ಮೀಟರ್ ಟೆಂಡರ್‌ನಲ್ಲಿ ಅಕ್ರಮವಾಗಿಲ್ಲ. ಒಂದೊಮ್ಮೆ ಕೆಟಿಪಿಪಿ ನಿಯಮ ಉಲ್ಲಂಘನೆಯಾಗಿರುವುದು ಸಾಬೀತು ಮಾಡಿದರೆ ಟೆಂಡರ್‌ಗೆ ತಡೆ ನೀಡಿ, ತನಿಖೆಗೆ ಆದೇಶಿಸಲು ಸರ್ಕಾರಕ್ಕೆ ಆಯ್ಕೆಯಿದೆ ಎಂದು ಹೇಳಿದರು.
ಕೆಟಿಪಿಪಿ ಕಾಯ್ದೆಯ ಕೆಡಬ್ಲ್ಯು-4 ನಿಯಮಗಳಿಗೆ ತಿದ್ದುಪಡಿ ತರಲಾಗಿದೆ. 10 ಕೋಟಿ ರು. ಮೇಲ್ಪಟ್ಟ ಕಾಮಗಾರಿಗಳನ್ನೂ ಟೆಂಡರ್ ಕರೆಯಲು ಹಣಕಾಸು ಇಲಾಖೆಅವಕಾಶ ಮಾಡಿಕೊಟ್ಟಿದೆ. ಹೀಗಾಗಿಯೇ ಈ ನಿಯಮದಡಿ ಟೆಂಡರ್ ಕರೆದಿದ್ದೇವೆ. ಇದರಲ್ಲಿ ಯಾವುದೇ ಲೋಪ ಆಗಿಲ್ಲ ಎಂದು ಸಮರ್ಥನೆ ನೀಡಿದರು.
ಸ್ಮಾರ್ಟ್ ಮೀಟರ್ ಹೊಸ ಸಂಪರ್ಕ ಮತ್ತು ತಾತ್ಕಾಲಿಕ ಸಂಪರ್ಕಗಳಿಗೆ ಮಾತ್ರ ಕಡ್ಡಾಯ ಮಾಡಲಾಗಿದೆ. ಈಗಾಗಲೇ ಇರುವ ಗ್ರಾಹಕರಿಗೆ ಅಳವಡಿಸುತ್ತಿಲ್ಲ. ಇತರ ರಾಜ್ಯಗಳಲ್ಲಿ ಎಲ್ಲ ಗ್ರಾಹಕರಿಗೂ ಕಡ್ಡಾಯ ಮಾಡಲಾಗಿದೆ. ಸ್ಮಾರ್ಟ್ ಮೀಟರ್ ದರ ಕೂಡ ಇತರ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಕಡಿಮೆಯೇ ಇದೆ ಎಂದ ಅವರು, ರಾಜಶ್ರೀ ಕಂಪನಿಯನ್ನು ಎಲ್ಲೂ ಕಪ್ಪು ಪಟ್ಟಿಗೆ ಸೇರಿಸಿಲ್ಲ. ಉತ್ತರಾಂಚಲದಲ್ಲಿ ಎರಡು ವರ್ಷಗಳಿಗೆ ಪ್ರತಿಬಂಧ ವಿಧಿಸಲಾಗಿತ್ತು. ಅದನ್ನು ತೆರವು ಮಾಡಲಾಗಿದೆ. ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲೂ ರಾಜಶ್ರೀಗೆ ಗುತ್ತಿಗೆ ನೀಡಲಾಗಿದೆ ಎಂದು ಹೇಳಿದರು.
ಸ್ಮಾರ್ಟ್ ಮೀಟರ್‌ಗಳಿಗೆ ಸಿಂಗಲ್ ಫೇಸ್‌ಗೆ ರೂ.4,998, ತ್ರೀಫೇಸ್‌ಗೆ ರೂ.8,922 ನಿಗದಿ ಮಾಡಲಾಗಿದೆ. ಇದು ಇತರ ರಾಜ್ಯಗಳಿಗಿಂತಲೂ ಕಡಿಮೆ ಬೆಲೆ ಎಂದು ಅವರು ಸಮರ್ಥಿಸಿಕೊಂಡರು.
ಬಿಜೆಪಿ ಮತ್ತು ಜೆಡಿಎಸ್‌ನವರು ನನ್ನ ವಿರುದ್ಧ ಡಿ.ಕೆ.ರವಿ ಮತ್ತು ಗಣಪತಿ ಆತ್ಮಹತ್ಯೆ ಪ್ರಕರಣಗಳಲ್ಲಿ ಆರೋಪಗಳನ್ನು ಮಾಡಿದರು. ಸಿಬಿಐ ಮತ್ತು ಸಿಒಡಿ ತನಿಖೆಗಳ ಬಳಿಕ ಆರೋಪ ಸುಳ್ಳು ಎಂಬುದು ಸಾಬೀತಾಯಿತು. ಆ ಬಳಿಕ ಅವರು ವಿಷಾದದ ಒಂದು ಮಾತನ್ನೂ ಆಡಿಲ್ಲ. ಈಗ ಮತ್ತೊಂದು ಆರೋಪ ಹೊರಿಸಲು ಮುಂದಾಗಿದ್ದಾರೆಂದು ಕಿಡಿಕಾರಿದರು.
ಬಹುತೇಕ ರಾಜ್ಯಗಳು ಆರ್‌ಡಿಎಸ್‌ಸ್ ಅಳವಡಿಸಿಕೊ೦ಡಿದ್ದು, ಅದರ ಮಾರ್ಗಸೂಚಿಯನ್ವಯ ಸ್ಮಾರ್ಟ್ ಮೀಟರ್ ಮತ್ತು ಸಾಫ್ಟ್‌ವೇರ್ ವೆಚ್ಚವೂ ಸೇರಿಸಿ ಟೆಂಡರ್ ಕರೆದಿದ್ದವು. ಹೀಗಾಗಿ ಸ್ಮಾರ್ಟ್ ಮೀಟರ್‌ದರ ಹಾಗೂ ನಿರ್ವಹಣಾ ವೆಚ್ಚವನ್ನು ವಿದ್ಯುತ್ ದರದಲ್ಲೇ ಸಂಗ್ರಹಿಸುತ್ತಿವೆ. ಆದರೆ, ಆರ್‌ಡಿಎಸ್‌ಎಸ್ ಅಳವಡಿಸಿಕೊಂಡರೆ ಎಲ್ಲಾ ಗ್ರಾಹಕರ ಮೀಟರ್ ಸ್ಮಾರ್ಟ್ ಮೀಟರ್ ಆಗಿ ಬದಲಿಸಬೇಕು ಎಂಬ ಕಾರಣಕ್ಕೆ ರಾಜ್ಯ ಒಪ್ಪಿಲ್ಲ, ಹೀಗಾಗಿ ಸ್ಮಾರ್ಟ್ ಮೀಟರ್ ಗ್ರಾಹಕರು ಒಂದೇ ಬಾರಿಗೆ ಹಣ ನೀಡಿ ಖರೀದಿಸಬೇಕು, ನಿರ್ವಹಣಾ ವೆಚ್ಚವನ್ನು ಮಾತ್ರ ಮಾಸಿಕ ಪಾವತಿಸಬೇಕು ಎಂದು ಹೇಳಿದರು.
ಆರ್ ಡಿಎಸ್‌ಎಸ್ ಅಡಿಸೇರಿರಾಜ್ಯದಲ್ಲಿ ಎಸ್ಕಾಂಗಳಿಗೆ ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳಿಂದ ಪಾವತಿಯಾಗಬೇಕಿರುವ ಬಾಕಿ ಹಣ ಪಾವತಿಸಬೇಕು ಎಂಬ ಷರತ್ತು ಇತ್ತು. ಎಸ್ಕಾಂಗಳಿಗೆ ಸರ್ಕಾರ ದಿಂದ 10,000 ಕೋಟಿಗಿಂತಲೂ ಹೆಚ್ಚು ಶುಲ್ಕ ಬಾಕಿಯಿದೆ. ಸರ್ಕಾರದಲ್ಲೇ ಹಣದ ಕೊರತೆ ಇದೆ.
ಕೇಂದ್ರವು ರಾಜ್ಯದಿದಿಂದ 4.30 ಲಕ್ಷ ಕೋಟಿ ರು. ತೆರಿಗೆ ಸಂಗ್ರಹಿ ಸಿದರೂ ನೀಡುವುದು 50,000 ಕೋಟಿ ರು.ಮಾತ್ರ. ಹೀಗಿರುವಾಗಿ ಹಿಂದಿನ ಸರ್ಕಾರಗಳೆಲ್ಲವೂ ಬಾಕಿ ಉಳಿಸಿಕೊಂಡಿರುವ ಹಣ ಹೇಗೆ ಪಾವತಿಸಬೇಕು? ಹೀಗಾಗಿ ಆರ್ ಡಿಎಸ್‌ಎಸ್ ಅಳವಡಿಸಿಕೊಂಡಿಲ್ಲ ಎಂದು ಕೆ.ಜೆ. ಜಾರ್ಜ್ ಸಮರ್ಥನೆ ನೀಡಿದರು.
ರಾಜಶ್ರೀ ಎಲೆಕ್ಟಿಕಲ್ಸ್ ಉಪಗುತ್ತಿಗೆ ನೀಡಿರುವ ಬಿಸಿಐಟಿಮೇಲೆ ಬೇರೆರಾಜ್ಯದಲ್ಲಿದ್ದ ನಿರ್ಬಂಧದ ಅವಧಿ ಮುಗಿದಿದೆ. ಬಳಿಕವಷ್ಟೇ ನಾವು ಟೆಂಡರ್ ನೀಡಿದ್ದೇವೆ. ಇಲ್ಲಿ ಅವರು ಸಿಸ್ಟಂ ಇಂಟಿಗ್ರೇಟ್ ಮಾಡುವ ಪ್ರಮುಖ ಕಂಪೆನಿಯಲ್ಲ. ರಾಜಶ್ರೀ ಕಂಪೆನಿಗೆ ಸೇವೆ ನೀಡುವವರಷ್ಟೇ. ಕಪ್ಪು ಪಟ್ಟಿಗೆ ಸೇರಿಸಲಾಗಿದೆ ಎನ್ನುವ ಇದೇ ಕಂಪೆನಿ 16 ರಾಜ್ಯಗಳಲ್ಲಿ ಸೇವೆ ನೀಡುತ್ತಿದೆ ಎಂದು ಜಾರ್ಜ್ ಹೇಳಿದರು.
Advertisement