
ಬೆಂಗಳೂರು: ರಾಜ್ಯದ ಪ್ರಮುಖ 14 ದೇವಾಲಯಗಳ ಪ್ರಸಾದವನ್ನು ಭಕ್ತರ ಮನೆ ಬಾಗಿಲಿಗೆ ತಲುಪಿಸುವ ಇ- ಪ್ರಸಾದ ಸೇವೆಗೆ ಧಾರ್ಮಿಕ ದತ್ತಿ ಇಲಾಖೆ ಗುರುವಾರದಿಂದ ಚಾಲನೆ ನೀಡಿದೆ.
ನಗರದ ಶಾಂತಿನಗರ ಸಾರಿಗೆ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಸೇವೆಗೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು.
‘ಇ ಪ್ರಸಾದ’ ಸೇವೆಗೆ ಚಾಲನೆ ನೀಡಿ ಮಾತನಾಡಿದ ಸಚಿವರು, ದೇವಾಲಯಗಳ ಕಲ್ಲು ಸಕ್ಕರೆ, ಬಾದಾಮಿ, ಗೋಡಂಬಿ, ದ್ರಾಕ್ಷಿ, ಭಂಡಾರ, ಕುಂಕುಮ, ಭಸ್ಮ, ಬಿಲ್ವಪತ್ರೆ, ತುಳಸಿ, ದೇವರ ಚಿತ್ರವಿರುವ ಪ್ಯಾಕೆಟ್ ಅಳತೆಯ ಲ್ಯಾಮಿನೇಟೆಡ್ ಭಾವಚಿತ್ರ, ದೇವರ ಸ್ಥಳ ಮಹಿಮೆ ಸ್ತೋತ್ರ ಮುದ್ರಣಗಳನ್ನು ಭಕ್ತರು ಈ ಪ್ರಸಾದ ಸೇವೆಯಿಂದ ತರಿಸಿಕೊಳ್ಳಬಹುದು. csc.devalayas.com ಆನ್ ಲೈನ್ ಮೂಲಕ ಪ್ರಸಾದ ತರಿಸಿ ಕೊಳ್ಳಬಹುದಾಗಿದ. ಸಿಎಸ್‌ಸಿ ಮೂಲಕ ಈಗಾಗಲೇ 241 ಪ್ರಸಾದ ಪ್ಯಾಕೆಟ್‌ಗಳನ್ನು ಭಕ್ತರ ಮನೆಗಳಿಗೆ ತಲುಪಿಸಲಾಗಿದೆ. ಪ್ರತಿ ಪ್ರಸಾದ ಪ್ಯಾಕೆಟ್‌ನ ಬೆಲೆ 100 ರಿಂದ 200 ರೂ.ಗಳವರೆಗೆ ಇರಲಿದೆ ಎಂದು ಮಾಹಿತಿ ನೀಡಿದರು.
ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ 35 ಸಾವಿರ ದೇವಾಲಯಗಳಿವೆ. ಈ ಪೈಕಿ ‘ಎ’ ಮತ್ತು ‘ಬಿ’ ದರ್ಜೆ ದೇವಾಲಯಗಳ ಸಂಖ್ಯೆ 398. ನಾನಾ ಕಾರಣಗಳಿಂದ ಭಕ್ತರಿಗೆ ದೇವಾಲಯಗಳಿಗೆ ತೆರಳಲು ಆಗುವುದಿಲ್ಲ. ಅಂತಹವರು ಬಯಸಿದರೆ ಆನ್‌ಲೈನ್ ಮೂಲಕ ದೇವಾಲಯಗಳ ಪ್ರಸಾದ ತರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಹೇಳಿದರು.
ಮೊದಲ ಹಂತದಲ್ಲಿ 14 ದೇವಾಲಯಗಳ ಪ್ರಸಾದವನ್ನು 3–4 ದಿನದಲ್ಲಿ ಭಕ್ತರಿಗೆ ಅಂಚೆ ಮೂಲಕ ತಲುಪಿಸಲು ವ್ಯವಸ್ಥೆ ಮಾಡಲಾಗಿದೆ. ಬೇಡಿಕೆ ಹೆಚ್ಚಾದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ದೇವಾಲಯಗಳ ಪ್ರಸಾದ ತಲುಪಿಸಲಾಗುವುದು ಎಂದು ತಿಳಿಸಿದರು.
ಹೊರ ರಾಜ್ಯದ ದೇವಾಲಯಗಳ ಪ್ರಸಾದಕ್ಕೆ ಅನುಮತಿ ದೊರೆತಿಲ್ಲ. ಆದರೆ, ಅನ್ಯ ರಾಜ್ಯದವರಿಗೆ ಕರ್ನಾಟಕ ದೇವಾಲಯಗಳ ಪ್ರಸಾದವನ್ನು ಅಂಚೆ ಮೂಲಕ ಕಳುಹಿಸಲಾಗುವುದು ಎಂದು ವಿವರಿಸಿದರು.
ಈ ದೇವಾಲಯಗಳ ಪ್ರಸಾದ ಲಭ್ಯ?
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯ, ದಕ್ಷಿಣ ಕನ್ನಡ ಜಿಲ್ಲೆ
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯ, ಉಡುಪಿ
ಶ್ರೀ ವಿನಾಯಕ ಸ್ವಾಮಿ ದೇವಾಲಯ ಜಯನಗರ, ಬೆಂಗಳೂರು
ಶ್ರೀ ಚಲುವನಾರಾಯಣ ಸ್ವಾಮಿ ದೇವಾಲಯ, ಮಂಡ್ಯ
ನಂಜನಗೂಡು ಶೀ ಶ್ರೀಕಂಠೇಶ್ವರ ಸ್ವಾಮಿ ದೇವಾಲಯ, ಮೈಸೂರು
ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಾಲಯ ಮಾಲೂರು, ಕೋಲಾರ
ಶ್ರೀ ಸೋಮೇಶ್ವರ ಸ್ವಾಮಿ ದೇವಾಲಯ, ಹಲಸೂರು ಬೆಂಗಳೂರು
ಶ್ರೀ ಗವಿಗಂಗಾಧರೇಶ್ವರ ಸ್ವಾಮಿ ದೇವಾಲಯ, ಗವೀಪುರಂ, ಬೆಂಗಳೂರು
ಶ್ರೀ ಕ್ಷೇತ್ರ ಝರಣಿ ನರಸಿಂಹ ದೇವಸ್ಥಾನ, ಬೀದರ್
ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಯಲ್ಲಮ್ಮನಗುಡ್ಡ, ಬೆಳಗಾವಿ
ಶ್ರೀ ಕನಕ ದುರ್ಗಮ್ಮ ದೇವಾಲಯ, ಬಳ್ಳಾರಿ
ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನ, ಹೂವಿನ ಹಡಗಲಿ, ವಿಜಯನಗರ
ಶ್ರೀ ಹುಲಿಗಮ್ಮ ದೇವಾಲಯ ಹುಲಿಗಿ, ಕೊಪ್ಪಳ
ಶ್ರೀ ಗುರುದತ್ತಾತ್ರೇಯ ಸ್ವಾಮಿ ದೇವಾಲಯ ಗಾಣಗಾಪುರ, ಗುಲ್ಬರ್ಗ
Advertisement