
ಬೆಂಗಳೂರು: ಪತ್ನಿಯ ಕತ್ತು ಸೀಳಿ, ಆಕೆಯ ಮೃತ ದೇಹವನ್ನು ಸೂಟ್‌ಕೇಸ್‌ನಲ್ಲಿ ತುಂಬಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಟೆಕ್ಕಿಯನ್ನು ವಶಕ್ಕೆ ಪಡೆಯಲು ಬೆಂಗಳೂರು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಆರೋಪಿ 36 ವರ್ಷದ ರಾಕೇಶ್ ರಾಜೇಂದ್ರ ಖೇಡ್ಕರ್ ಸದ್ಯ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿದ್ದಾನೆ.
ಪುಣೆ ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಕರ್ನಾಟಕ ಪೊಲೀಸರು ಶನಿವಾರ ಟೆಕ್ಕಿಯನ್ನು ವಶಕ್ಕೆ ಪಡೆದರು. ಶನಿವಾರ ರಾತ್ರಿ ಅವರನ್ನು ಮ್ಯಾಜಿಸ್ಟ್ರೇಟ್ ನಿವಾಸದಲ್ಲಿ ಅವರ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಧೀಶರು ಆತನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಹುಳಿಮಾವು ಪೊಲೀಸರು ಮಂಗಳವಾರ (ಏಪ್ರಿಲ್ 1) ಬಾಡಿ ವಾರಂಟ್ ಮೇಲೆ ಆರೋಪಿಯನ್ನು ವಶಕ್ಕೆ ಪಡೆಯಲು ವ್ಯವಸ್ಥೆ ಮಾಡಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಆರೋಪಿಯು ಕೋಪದ ಭರದಲ್ಲಿ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ. ಆದರೆ, ತನ್ನ 32 ವರ್ಷದ ಪತ್ನಿ ಗೌರಿ ರಾಜೇಂದ್ರ ಖೇಡ್ಕರ್ ಅವರ ಕೊಲೆಗೆ ನಿಖರವಾದ ಕಾರಣ ಏನೆಂಬುದನ್ನು ಇನ್ನೂ ಬಹಿರಂಗಪಡಿಸಿಲ್ಲ. ಗೌರಿ ಆರೋಪಿಯ ಹತ್ತಿರದ ಸಂಬಂಧಿಯೂ ಆಗಿದ್ದಾರೆ.
ಆರೋಪಿ ರಾಕೇಶ್ ತಂದೆ ರಾಜೇಂದ್ರ ಖೇಡ್ಕರ್ ಮಾತನಾಡಿ, ಮೃತ ಗೌರಿ ತನ್ನ ಸಹೋದರಿಯ ಮಗಳು. ರಾಕೇಶ್ ಮತ್ತು ಗೌರಿ ಮದುವೆಗೆ ತಮ್ಮ ಕುಟುಂಬವು ಅಸಮ್ಮತಿ ವ್ಯಕ್ತಪಡಿಸಿತ್ತು. ಗೌರಿ ತಮ್ಮ ಮದುವೆ ವಿಚಾರವಾಗಿ ಎರಡೂ ಕುಟುಂಬಗಳೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದರು ಮತ್ತು ವಿವಾದಗಳು ಪೊಲೀಸ್ ಠಾಣೆ ಮೆಟ್ಟಿಲೇರಿದ್ದವು. ಮದುವೆಯ ನಂತರವೂ ಜಗಳ ಮುಂದುವರೆದಿದ್ದವು ಎಂದಿದ್ದಾರೆ.
ಆರೋಪಿಯು ಪಶ್ಚಾತ್ತಾಪ ಪಡುತ್ತಿರುವಂತೆ ತೋರುತ್ತಿದ್ದು, ಹೆಚ್ಚಾಗಿ ಮೌನವಾಗಿದ್ದಾನೆ. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ನಂತರವೇ, ಅಪರಾಧ ಏಕೆ ನಡೆಯಿತು ಮತ್ತು ಹೇಗೆ ನಡೆಯಿತು ಎಂಬುದರ ನಿಖರ ಮಾಹಿತಿ ತಿಳಿಯುವ ನಿರೀಕ್ಷೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೋಪದ ಭರದಲ್ಲಿ ಪತ್ನಿಯನ್ನು ಕೊಂದಿದ್ದ ರಾಕೇಶ್, ಮೃತದೇಹವನ್ನು ಸೂಟ್‌ಕೇಸ್‌ನಲ್ಲಿ ತುಂಬಿಟ್ಟು. ಪುಣೆಗೆ ಪರಾರಿಯಾಗಿದ್ದ. ಪಶ್ಚಾತಾಪದಿಂದಾಗಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಪತಿ ಜತೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ಮಹಾರಾಷ್ಟ್ರ ಮೂಲದ ಗೌರಿ ಖೇಡ್ಕರ್ ಮೃತದೇಹ ಗುರುವಾರ ಸೂಟ್‌ಕೇಸ್‌ನಲ್ಲಿ ಪತ್ತೆಯಾಗಿತ್ತು. ಕರ್ನಾಟಕ ಪೊಲೀಸರು ಆರೋಪಿಯನ್ನು ಯಶಸ್ವಿಯಾಗಿ ಪತ್ತೆಹಚ್ಚಿದ್ದರು. ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಪುಣೆಯಿಂದ ಬೆಂಗಳೂರಿಗೆ ಕರೆತಂದಿದ್ದರು.
Advertisement