ಅಮೆರಿಕಾ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಆಗಿದೆ ಎನ್ನುವುದು ತಪ್ಪು; ಮೋದಿ-ಸೇನಾಪಡೆ ಶಕ್ತಿ ಮುಂದೆ ಪಾಕ್ ಮಂಡಿಯೂರಿದೆ: HDK

ಮೋದಿ ಅವರ ಧೃಢ ನಾಯಕತ್ವ ಹಾಗೂ ನಮ್ಮ ಹೆಮ್ಮೆಯ ಸೇನಾಪಡೆಗಳ ಶಕ್ತಿಯ ಮುಂದೆ ಪಾಕಿಸ್ತಾನ ಮಂಡಿಯೂರಿದೆ. ಭಾರತದ ಎಲ್ಲ ಕಡೆ ಮೇಲುಗೈ ಸಾಧಿಸಿದೆ.
ಎಚ್‌ಡಿ ಕುಮಾರಸ್ವಾಮಿ
ಎಚ್‌ಡಿ ಕುಮಾರಸ್ವಾಮಿ
Updated on

ಬೆಂಗಳೂರು: ಅಮೆರಿಕಾ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಘೋಷಣೆ ಆಯಿತು ಎಂಬುದು ಸರಿಯಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಭಾರತೀಯ ಸೇನಾಪಡೆಯ ಶಕ್ತಿ ಮುಂದೆ ಪಾಕಿಸ್ತಾನ ಮಂಡಿಯೂರಿದೆ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ಸೋಮವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಹಲ್ಗಾಮ್ ನಲ್ಲಿ ಪಾಕಿಸ್ತಾನದ ಭಯೋತ್ಪಾದಕರು ನಮ್ಮ ದೇಶದ ಪ್ರವಾಸಿಗರ ಮೇಲೆ ಪೈಶಾಚಿಕ ದಾಳಿ ನಡೆಸಿದ್ದರು. ಅದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನಾಪಡೆಗಳು ಆ ದೇಶದಲ್ಲಿರುವ ಭಯೋತ್ಪಾದಕ ಶಿಬಿರಗಳನ್ನು ನಾಶ ಮಾಡಿವೆ. ನೆರೆ ದೇಶದ ಸೇನೆಯು ಉಗ್ರ ಪೋಷಣೆ ಮಾಡುತ್ತಾ ಭಾರತದ ಮೇಲೆ ದಾಳಿ ನಡೆಸಿತ್ತು. ಅದಕ್ಕೆ ಭಾರತ ಪ್ರಬಲ ತಿರುಗೇಟು ನೀಡಿದೆ ಎಂದು ಹೇಳಿದರು.

ಮೋದಿ ಅವರ ಧೃಢ ನಾಯಕತ್ವ ಹಾಗೂ ನಮ್ಮ ಹೆಮ್ಮೆಯ ಸೇನಾಪಡೆಗಳ ಶಕ್ತಿಯ ಮುಂದೆ ಪಾಕಿಸ್ತಾನ ಮಂಡಿಯೂರಿದೆ. ಭಾರತದ ಎಲ್ಲ ಕಡೆ ಮೇಲುಗೈ ಸಾಧಿಸಿದೆ. ಪಾಕಿಸ್ಥಾನಕ್ಕೆ ನಡುಕ ಉಂಟಾಗಿತ್ತು. ಉಗ್ರರ ಚಟುವಟಿಕೆಗಳಿಗೆ ಇತಿಶ್ರೀ ಹಾಡುವ ದೃಷ್ಟಿಯಿಂದ ದೇಶದ ಪ್ರಧಾನಿ ಅವರು ಅನೇಕ ಕ್ರಮಗಳನ್ನು ತೆಗೆದುಕೊಂಡಿದ್ದರು ಹಾಗೂ ಉಗ್ರರ ಶಿಬಿರಗಳ ಮೇಲೆ ನಮ್ಮ ಸೈನಿಕರು ದಾಳಿ ಮಾಡಿದ್ದರು.

ಅಮೆರಿಕದ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಅನ್ನುವುದು ಸರಿಯಲ್ಲ. ಜಾಗತಿಕ ಮಟ್ಟದಲ್ಲಿ ತನ್ನ ಮುಖ ಉಳಿಸಿಕೊಳ್ಳಲು ಪಾಕಿಸ್ತಾನ ನಾನಾ ಸರ್ಕಸ್ ಮಾಡಿದೆ. ಭಾರತ ಕಾಶ್ಮೀರ ವಿಷಯದಲ್ಲಿ ಮೂರನೇ ರಾಷ್ಟ್ರದ ಮಧ್ಯಸ್ಥಿಕೆಗೆ ಒಪ್ಪಿಲ್ಲ. ಅದಕ್ಕೆ ಅವಕಾಶವನ್ನು ಕೂಡ ಕೊಟ್ಟಿಲ್ಲ. ಪ್ರಧಾನಿ ಮೋದಿ ಕೂಡ ಇದೇ ಮಾತನ್ನು ಸ್ಪಷ್ಟವಾಗಿ ಹೇಳಿದ್ದಾರೆ. ರಾಷ್ಟ್ರದ ಹಿತಾಸಕ್ತಿ ವಿಷಯದಲ್ಲಿ ಮೋದಿ ಅವರು ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ.

ಎಚ್‌ಡಿ ಕುಮಾರಸ್ವಾಮಿ
ಯುದ್ಧಕ್ಕೆ ಹೋದಮೇಲೆ ತಾರ್ಕಿಕ ಅಂತ್ಯ ಹಾಡಬೇಕಿತ್ತು, ಹಿಂದೆ ಸರಿದಿದ್ದು ಸರಿಯಲ್ಲ: ಸಚಿವ ಕೃಷ್ಣ ಬೈರೇಗೌಡ

ಉಗ್ರ ಪೋಷಕ ಪಾಕಿಸ್ತಾನವನ್ನು ಮಟ್ಟ ಹಾಕುವ ದೃಷ್ಟಿಯಿಂದ ಪೂರ್ಣ ಪ್ರಮಾಣದ ಯುದ್ದ ಆಗಲೇಬೇಕಿತ್ತು ಎಂಬ ನಿಲುವು ಒಂದು ಕಡೆ ಇದೆ. ಮತ್ತೊಂದು ಕಡೆ ರಷ್ಯಾ, ಉಕ್ರೇನ್ ಯುದ್ಧದಿಂದ ಇವತ್ತು ಯಾವ ಸ್ಥಿತಿ ಉಂಟಾಗಿದೆ ಎನ್ನುವ ವಾದವೂ ಇನ್ನೊಂದೆಡೆ. ಈ ದೃಷ್ಟಿಯಲ್ಲಿ ಕೇಂದ್ರ ಸರ್ಕಾರ ಆಲೋಚನೆ ಮಾಡುತ್ತಿದೆ. ಆದರೆ, ಈಗಲಾದರೂ ಪಾಕಿಸ್ತಾನ ಎಚ್ಚೆತ್ತುಕೊಳ್ಳದಿದ್ದರೆ ಅದು ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ನಾಶವಾಗಲಿದೆ ಎಂದು ಎಚ್ಚರಿಕೆ ನೀಡಿದರು.

ರಾಷ್ಟ್ರೀಯ ಹಿತಾಸಕ್ತಿಯ ವಿಷಯಗಳ ಕುರಿತು ಪ್ರಧಾನಿಯವರ ನಿರ್ಧಾರಗಳನ್ನು ಎಲ್ಲರೂ ಬೆಂಬಲಿಸಬೇಕು. ಪಹಲ್ಗಾಮ್ ದಾಳಿಯ ನಂತರ, ಪ್ರಧಾನಿ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಿದ್ದಾರೆ ಎಂಬುದನ್ನು ಇಡೀ ದೇಶವೇ ಕಂಡಿದೆ. ಪ್ರಧಾನಮಂತ್ರಿಗಳು ರಕ್ಷಣಾ ಸಚಿವರೊಂದಿಗೆ ಹಲವಾರು ಉನ್ನತ ಮಟ್ಟದ ಸಭೆಗಳನ್ನು ನಡೆಸಿದ್ದಾರೆ. ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಸರ್ಕಾರವು ದಿಟ್ಟ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com