
ಬೆಳಗಾವಿ: ಪಾಕಿಸ್ಥಾನ ನಾಶವಾಗಬೇಕಿತ್ತು. ಶತ್ರು ರಾಷ್ಟ್ರಕ್ಕೆ ಒಂದು ಗತಿ ಕಾಣಿಸಲು ಇದೊಂದು ಒಳ್ಳೆಯ ಅವಕಾಶವಿತ್ತು, ಟ್ರಂಪ್ ಮಾತಿನಿಂದ ಪ್ರಧಾನಮಂತ್ರಿ ನರೇಂದ್ರ ಕದನ ವಿರಾಮಕ್ಕೆ ಒಪ್ಪಿರುವುದು ಸರಿಯಲ್ಲ ಎಂದು ವಿಧಾನ ಪರಿಷತ್ತಿನ ಅಧ್ಯಕ್ಷ ಬಸವರಾಜ ಹೊರಟ್ಟಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕದನ ವಿರಾಮ ಘೋಷಣೆಯಾದ ಕೆಲವೇ ನಿಮಿಷಗಳಲ್ಲಿ ಪಾಕಿಸ್ತಾನ ತನ್ನ ದುರ್ವರ್ತನೆಯನ್ನು ಮತ್ತೆ ಪ್ರದರ್ಶಿಸಿದೆ. ಯುದ್ಧ ನಿಲ್ಲಿಸಿದ್ದು ತಪ್ಪು ಎಂಬುದನ್ನು ಇದೇ ತೋರಿಸುತ್ತದೆ ಎಂದು ಹೇಳಿದರು.
ಭಾರತ ಮತ್ತು ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆ ವಹಿಸಲು ಟ್ರಂಪ್ ಯಾರು? ನಾವು ಅದರ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸಿದರೆ ಅಮೆರಿಕ ನಮ್ಮ ಮಾತನ್ನು ಕೇಳುತ್ತದೆಯೇ ಎಂದು ಪ್ರಶ್ನಿಸಿದರು.
ಪಾಕಿಸ್ತಾನ ಎಂದಿಗೂ ಭಾರತದ ಹಿತಾಸಕ್ತಿಯಲ್ಲಿ ಕಾರ್ಯನಿರ್ವಹಿಸುವುದಿಲ್ಲ ಮತ್ತು ಯಾವಾಗಲೂ ಎದುರಾಳಿ ಎಂದು ಪರಿಗಣಿಸಬೇಕು. ಭಾರತ ಸರ್ಕಾರವು ಹೆಚ್ಚು ರಾಜಿಯಾಗದ ನಿಲುವನ್ನು ತೆಗೆದುಕೊಳ್ಳಬೇಕು, ಮೋದಿ ವಿದೇಶಿ ಪ್ರಭಾವಕ್ಕೆ ಮಣಿಯುವ ಬದಲು ದೃಢ ನಿರ್ಧಾರ ತೆಗೆದುಕೊಳ್ಳಬೇಕಾಗಿತ್ತು ಎಂದು ತಿಳಿಸಿದರು.
ಭಯೋತ್ಪಾದನೆಯ ಕುರಿತು ಮಾತನಾಡಿ, ಪಾಕಿಸ್ಥಾನಕ್ಕೆ ಒಂದು ಗತಿ ಕಾಣಿಸಲು ಇದೊಂದು ಒಳ್ಳೆಯ ಅವಕಾಶವಾಗಿತ್ತು. ಎಲ್ಲ ದೇಶಗಳು ಶೃಂಗ ಸಭೆ ನಡೆಸಿ ಭಯೋತ್ಪಾದಕರನ್ನು ನಾಶ ಮಾಡಿ ಸ್ವತ್ಛಗೊಳಿಸಬೇಕು. ರಾಜಕೀಯ ಪಕ್ಷಗಳಿಗೆ ದೇಶ ಮೊದಲು ಎಂಬ ಭಾವನೆ ಇರಬೇಕು ಎಂದು ಒತ್ತಿ ಹೇಳಿದರು
Advertisement