
ಹೊಸಪೇಟೆ: ಉಗ್ರರ ದಾಳಿ ಮೂಲಕ ಭಾರತದತ್ತ ಕೆಂಗಣ್ಣು ಹೊರಳಿಸಿದ್ದ ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ಮೂಲಕ ದಿಟ್ಟ ಉತ್ತರ ನೀಡಿದ ಭಾರತೀಯ ಸೇನೆಗೆ ಎಲ್ಲೆಡೆ ಮೆಚ್ಚುಗೆಗಳು ವ್ಯಕ್ತವಾಗುತ್ತಿದ್ದು, ಈ ನಡುವಲ್ಲೇ ಸಿಂಧೂರ್ ಹಚ್ಚೆ ಟ್ರೆಂಡ್ ಆಗುತ್ತಿದೆ. ಹಲವಾರು ಯುವಕರು ತಮ್ಮ ತೋಳುಗಳ ಮೇಲೆ 'ಆಪರೇಷನ್ ಸಿಂಧೂರ್' ಹಚ್ಚೆ ಹಾಕಿಸಿಕೊಂಡು ದೇಶ ಪ್ರೇಮ ಮೆರೆಯುತ್ತಿದ್ದಾರೆ.
ಹೊಸಪೇಟೆಯಲ್ಲಿ ಆಪರೇಷನ್ ಸಿಂಧೂರ್ ಹಚ್ಚೆ ಟ್ರೆಂಡ್ ಆಗಿದ್ದು, ಪಟ್ಟಣದ ಅನೇಕ ಕಾಲೇಜು ವಿದ್ಯಾರ್ಥಿಗಳು ತೋಳುಗಳ ಮೇಲೆ ಹಚ್ಚೆ ಹಾಕಿಸಿಕೊಳ್ಳುತ್ತಿದ್ದಾರೆ. ಕೇವಲ ಸ್ಥಳೀಯರಷ್ಟೇ ಅಲ್ಲದೆ, ಪಾಕಿಸ್ತಾನವನ್ನು ಮಂಡಿಯೂರಿಸಿದ ಭಾರತೀಯ ಸೈನಿಕರಿಗೆ ಗೌರವವಾಗಿ ಇಸ್ರೇಲಿಗಳು ಸೇರಿದಂತೆ ಅನೇಕ ವಿದೇಶಿ ಪ್ರವಾಸಿಗರು ಕೂಡ ತಮ್ಮ ತೋಳುಗಳ ಮೇಲೆ ‘ಸಿಂದೂರ್’ ಹಚ್ಚೆ ಹಾಕಿಸಿಕೊಳ್ಳುತ್ತಿದ್ದಾರೆ.
Operation Sindoor ಹಚ್ಚೆ ಟ್ರೆಂಡ್ ಆಗುತ್ತಿರುವ ಹಿನ್ನೆಲೆಯಲ್ಲಿ ಹಚ್ಚೆ ಅಂಗಡಿಗಳ ವ್ಯಾುಪಾರ ಚುರುಕುಗೊಂಡಿದೆ. ಹಚ್ಚೆಯ ಗಾತ್ರವನ್ನು ಅವಲಂಬಿಸಿ ಕಲಾವಿದರು 600 ರೂ.ಗಳಿಂದ 1,500 ರೂ.ಗಳವರೆಗೆ ಹಣ ಪಡೆಯುತ್ತಿದ್ದಾರೆ.
ಹಚ್ಚೆಯ ಬಣ್ಣವು ಚರ್ಮದ ಬಣ್ಣವನ್ನು ಅವಲಂಬಿಸಿರುತ್ತದೆ. ಕೆಲವರು ತಾತ್ಕಾಲಿಕ ಹಚ್ಚೆಗಳನ್ನು ಹಾಕಿಸಿಕೊಳ್ಳುತ್ತಿದ್ದರೆ, ಕೆಲವರು ಶಾಶ್ವತವಾಗಿ ಬೇಕೆಂದು ಹಾಕಿಸಿಕೊಳ್ಳುತ್ತಿದ್ದಾರೆ. ಇದು ನಮ್ಮ ದೇಶಕ್ಕಾಗಿ ಹಾಗೂ ಶಾಶ್ವತವಾಗಿರಬೇಕೆಂದು ಹೇಳುತ್ತಿದ್ದಾರೆಂದು ಹಚ್ಚೆ ಹಾಕುವ ವ್ಯಕ್ತಿ (tattooists) ಗಣೇಶ್ ಎನ್ ಎಂಬುವವರು ಹೇಳಿದ್ದಾರೆ.
ಆಪರೇಷನ್ ಸಿಂಧೂರ್ ಭಾರತೀಯ ಸೇನೆಯ ಶಕ್ತಿಯನ್ನು ಇಡೀ ವಿಶ್ವಕ್ಕೆ ತೋರಿಸಿದೆ. ನಾನು ಸೈನ್ಯಕ್ಕೆ ಸೇರಲು ಬಯಸಿದ್ದೆ, ಆದರೆ, ಆಯ್ಕೆಯಾಗಲು ಸಾಧ್ಯವಾಗಲಿಲ್ಲ. ಈಗ ದೇಶದೊಂದಿಗೆ ನಿಲ್ಲುವ ಸಮಯ ಬಂದಿದೆ. ಎರಡು ದಿನಗಳ ಹಿಂದೆ ಶಾಶ್ವತ ಹಚ್ಚೆ ಹಾಕಿಸಿಕೊಳ್ಳಬೇಕೆಂದು ನಿರ್ಧರಿಸಿದ್ದೆ. ಇದೀಗ ಹಾಕಿಸಿಕೊಂಡಿದ್ದೇನಂದು ಆಕಾಶ್ ನಾಯಕ್ (17) ಅವರು ಹೇಳಿದ್ದಾರೆ.
ಒಬ್ಬ ಭಾರತೀಯನಾಗಿ, ನನಗೆ ಸೈನ್ಯದ ಬಗ್ಗೆ ಹೆಮ್ಮೆ ಇದೆ ಎಂದು ಹಂಪಿಯ ಮತ್ತೊಬ್ಬ ಯುವಕ ರವಿ ಎಂಬುವವರು ಹೇಳಿದ್ದಾರೆ.
ಸಿಂಧೂರ್ ಹಚ್ಚೆ ಹಾಕಿಸಿಕೊಂಡಾಗ ನನಗ ಮೈಯೆಲ್ಲಾ ರೋಮಾಂಚನವೆನಿಸಿತು. ಈ ಹಚ್ಚೆ ಭಾರತಕ್ಕಾಗಿ ಹಾಗೂ ಶಾಶ್ವತವಾಗಿರುತ್ತದೆ. ಇಸ್ರೇಲ್‌ನ ನನ್ನ ಸ್ನೇಹಿತನಿಗೆ 'ಸಿಂಧೂರ್' ಪದದ ಮಹತ್ವ ಮತ್ತು ಸಾಂಸ್ಕೃತಿಕ ಅರ್ಥವನ್ನು ವಿವರಿಸಿದಾಗ ಆತ ಕೂಡ ಪ್ರಭಾವಿತನಾದ. ಅವನೂ ಕೂಡ ಹಚ್ಚೆ ಹಾಕಿಸಿಕೊಂಡಿದ್ದಾನೆಂದು ರವಿ ತಿಳಿಸಿದ್ದಾರೆ.
ಕಳೆದ ಒಂದು ವಾರದಿಂದ ಆಪರೇಷನ್ ಸಿಂಧೂರ್ ಹಚ್ಚೆ ಟ್ರೆಂಡ್ ಆಗಿದೆ. ಸಾಕಷ್ಟು ಯುವಕರು ಅಂಗಡಿಗೆ ಬಂದು ಹಚ್ಚೆ ಹಾಕಿಸಿಕೊಳ್ಳುತ್ತಿದ್ದಾರೆಂದು ಹಚ್ಚೆ ಕಲಾವಿದ ಗಣೇಶ್ ಅವರು ಹೇಳಿದ್ದಾರೆ.
Advertisement