
ಮೈಸೂರು: 2021ರ ಮೇ 2ರ ಮಧ್ಯರಾತ್ರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೆ ಕೋವಿಡ್ ಸೋಂಕಿತರು ಮೃತಪಟ್ಟ ಪ್ರಕರಣವನ್ನು ಮರು ತನಿಖೆ ನಡೆಸುವಂತೆ ಸಂತ್ರಸ್ತರ ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಕೋವಿಡ್ -19 ಉಪಕರಣ ಖರೀದಿ ಮತ್ತು ನಿರ್ವಹಣೆಯಲ್ಲಿನ ಅಕ್ರಮಗಳ ಕುರಿತು ತನಿಖೆ ನಡೆಸುತ್ತಿರುವ ಜಾನ್ ಮೈಕೆಲ್ ಡಿ ಕುನ್ಹಾ ಆಯೋಗಕ್ಕೆ ಸಂತ್ರಸ್ತರ ಕುಟುಂಬಗಳು ಅಫಿಡವಿಟ್ ಸಲ್ಲಿಸಿದ್ದು, ಮರು ತನಿಖೆಗೆ ಒತ್ತಾಯಿಸಿದ್ದಾರೆ.
ನಗರಸಭೆ ಸದಸ್ಯರಾದ ಮಹೇಶ್ ಮತ್ತು ಕಲೀಮುಲ್ಲಾ ನೇತೃತ್ವದಲ್ಲಿ ಸಂತ್ರಸ್ತ ಕುಟುಂಬಗಳ ಸದಸ್ಯರು ಅಫಿಡವಿಟ್ ಸಲ್ಲಿಸಿದ್ದು, ಸಮಯಕ್ಕೆ ಸರಿಯಾಗಿ ಆಮ್ಲಜನಕವನ್ನು ಪೂರೈಸದಿರುವುದು ಸಾವಿಗೆ ಕಾರಣವಾಗಿದೆ ಆರೋಪಿಸಿದರು. ಅಲ್ಲದೆ, ದುರಂತಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ನಿವೃತ್ತ ನ್ಯಾಯಾಧೀಶ ಬಿ.ಎ. ಪಾಟೀಲ್ ಅವರ ವರದಿಯನ್ನು ಸರ್ಕಾರ ತಿರಸ್ಕರಿಸಿರುವುದರಿಂದ ಮರು ಸಮೀಕ್ಷೆ ನಡೆಯುವ ವಿಶ್ವಾಸವಿದೆ ಎಂದು ಸಂತ್ರಸ್ತ ಕುಟುಂಬಸ್ಥರು ಹೇಳಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆಕ್ಸಿಜನ್ ದುರಂತದ ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಭರವಸೆ ಕೊಟ್ಟಿತ್ತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ನಡೆಸಿದ್ದಾಗ ಸಂತ್ರಸ್ತರೊಂದಿಗೆ ಸಂವಾದ ನಡೆಸಿದ್ದರು. ಈ ಸಂದರ್ಭದಲ್ಲಿ ಸರ್ಕಾರಿ ಉದ್ಯೋಗದ ಭರವಸೆ ದೊರೆತಿತ್ತು. ಅಂದು ಸಂತ್ರಸ್ತರ ಕಷ್ಟ ಕೇಳಿ ಗದ್ಗದಿತರಾಗಿ ಕಣ್ಣೀರಾಗಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಧಿಕಾರ ಹಿಡಿದ ಬಳಿಕ ಸಂತ್ರಸ್ತರ ಕುಟುಂಬಗಳಿಗೆ ತಲಾ 1 ಲಕ್ಷ ರೂ. ಪರಿಹಾರವನ್ನು ನೀಡಿದ್ದರು. ಆದರೆ, ಇಂದಿಗೂ ಉದ್ಯೋಗದ ಭರವಸೆ ಈಡೇರಲೇ ಇಲ್ಲ.
ಮನೆಗೆ ಆಧಾರವಾಗಿದ್ದವರನ್ನು ಕಳೆದುಕೊಂಡು ಬದುಕಿನ ಜಂಜಾಟಗಳಲ್ಲಿ ಸಿಲುಕಿರುವ ಸಂತ್ರಸ್ತರು ನ್ಯಾಯಕ್ಕಾಗಿ ಇಂದಿಗೂ ಅಲೆದಾಟ ನಡೆಸುತ್ತಲೇ ಇದ್ದಾರೆ. ಈ ನಡುವೆ ಮಲೆ ಮಹದೇಶ್ವರ ಬೆಟ್ಟದ ಸಚಿವ ಸಂಪುಟ ಸಭೆ ಬೆಳಕಂತೆ ಬಂದಿತು. ಆದರೆ ಕ್ಯಾಬಿನೆಟ್‌ನಲ್ಲೂ ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗ ಕೊಡುವ ವಿಚಾರ ಚರ್ಚೆಯಾಗಲೇ ಇಲ್ಲ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದರು.
ಇದರಿಂದ ಬೇಸರಗೊಂಡ ಸಂತ್ರಸ್ತರು ಕಾಂಗ್ರೆಸ್ ಕೊಟ್ಟಿದ್ದ 1 ಲಕ್ಷ ರೂ. ಪರಿಹಾರವನ್ನು ವಾಪಸ್ ಕೊಡಲು ನಿರ್ಧರಿಸಿದರು. ಆದರೆ, ಶಾಸಕ ಸಿ.ಪುಟ್ಟರಂಗಶೆಟ್ಟಿ ಮತ್ತು ಸಂಸದ ಸುನೀಲ್‌ಬೋಸ್ ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿ ಮುಂದಿನ ಕ್ಯಾಬಿನೆಟ್‌ನಲ್ಲಿ ಸರ್ಕಾರಿ ಉದ್ಯೋಗದ ಭರವಸೆಯನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿ ಸಮಾಧಾನ ಪಡಿಸಿದರು. ಈ ಹಿನ್ನೆಲೆಯಲ್ಲಿ ಸಂತ್ರಸ್ತರು ಮುಂದಿನ ಸಂಪುಟದ ಮೇಲೆ ನಿರೀಕ್ಷೆಗಳನ್ನಿಟ್ಟುಕೊಂಡು ಕಾದು ಕುಳಿತಿದ್ದಾರೆ.
Advertisement