
ಬೆಂಗಳೂರು: ದಕ್ಷಿಣ ವಲಯದ ಇಂದಿರಾ ಕ್ಯಾಂಟೀನ್‌ನಲ್ಲಿ ಸುಮಾರು 7 ಕೋಟಿ ರೂ.ಗಳ ಅವ್ಯವಹಾರ ನಡೆಸಿದ್ದಕ್ಕಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಲಯದ ಉಪ ಆರೋಗ್ಯಾಧಿಕಾರಿ ಡಾ.ಕಲ್ಪನಾ ಪಿ. ಅವರನ್ನು ಅಮಾನತುಗೊಳಿಸಲಾಗಿದೆ.
ಪಾಲಿಕೆಯ ದಕ್ಷಿಣ ವಲಯಕ್ಕೆ ಆಹಾರ ಪೂರೈಕ ಮಾಡಿದ ಚೆಫ್ಟಾಕ್ ಫುಡ್ ಅಂಡ್ ಹಾಸ್ಪಿಟಾಲಿಟಿ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ನ ಬಿಲ್ ಪಾವತಿಯಲ್ಲಿ 7 ಕೋಟಿ ರೂಪಾಯಿಗೂ ಹೆಚ್ಚು ವಂಚನೆ ನಡೆದಿದೆ ಎಂದು ಬಿಬಿಎಂಪಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಆರೋಗ್ಯಾಧಿಕಾರಿಯಾಗಿದ್ದ ಡಾ.ಕಲ್ಪನಾ ಪಿ ಅವರು ಆರ್ಡರ್ ಗಳನ್ನು ಪರಿಶೀಲಿಸದೆ ಅಂದಾಜು ರೂ. 9.72 ಕೋಟಿ ಪಾವತಿಸಿದ್ದಾರೆ. ಆದರೆ ಅದಕ್ಕೆ ವಾಸ್ತವವಾಗಿ ಪಾವತಿಸಬೇಕಾದದ್ದು ಕೇವಲ ರೂ. 2.27 ಕೋಟಿ ಮಾತ್ರ,. ಇದರಿಂದ ಹೆಚ್ಚುವರಿಯಾಗಿ ಸುಮಾರು 7 ಕೋಟಿ ರೂ. ಪಾವತಿಸಿದ್ದಕ್ಕಾಗಿ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಇದೀಗ ಮೊತ್ತದ ವಸೂಲಾತಿಗೆ ನೋಟಿಸ್ ನೀಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪಾಲಿಕೆ ಆಡಳಿತ ಈ ಪ್ರಕರಣದ ಕೂಲಂಕಷ ತನಿಖೆ ನಡೆಸುತ್ತಿದೆ. ಹೆಚ್ಚುವರಿ ಜವಾಬ್ದಾರಿಯನ್ನು ಮತ್ತೊಬ್ಬ ಅಧಿಕಾರಿಗೆ ವಹಿಸಲಾಗಿದೆ.
ಜೊತೆಗೆ ಡಾ.ಸುರೇಶ್ ಜಿ.ಕೆ. ಅವರಿಗೆ ದಕ್ಷಿಣ ವಲಯದ ಹೆಚ್ಚುವರಿ ಆರೋಗ್ಯಾಧಿಕಾರಿ ಜವಾಬ್ದಾರಿ ನೀಡಲಾಗಿದೆ. ಅವರು ಪ್ರಸ್ತುತ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದ ಉಪ ಆರೋಗ್ಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
Advertisement