
ವಿಜಯಪುರ: ರಾಜ್ಯ ಸರ್ಕಾರವು ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಪೂರ್ಣಗೊಳಿಸಲು ಬದ್ಧವಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ್ ಅವರು ಪುನರುಚ್ಚರಿಸಿದ್ದಾರೆ.
ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಮೇ.20 ರಂದು ನಡೆಯಲಿರುವ ರಾಜ್ಯ ಸರಕಾರದ ಎರಡು ವರ್ಷಗಳ ಸಾಧನೆ ಸಮಾವೇಶ ಹಾಗೂ ಹಕ್ಕುಪತ್ರ ವಿತರಣೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಶುಕ್ರವಾರ ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಈ ವೇಳೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಆಲಮಟ್ಟಿ ಜಲಾಶಯ ಎತ್ತರ ಕುರಿತು ಕೃಷ್ಣಾ ನ್ಯಾಯಾಧೀಕರಣ ತೀರ್ಪು ನೀಡಿದರೂ ಕೇಂದ್ರ ಸರಕಾರ ಇನ್ನೂ ಗೆಜೆಟ್ ನೊಟಿಫಿಕೇಶನ್ ಹೊರಡಿಸಿಲ್ಲ. ಬಿಜೆಪಿಯ ಸಂಸದರು, ಸಚಿವರು ಸೇರಿದಂತೆ ಯಾವ ಜನಪ್ರತಿನಿಧಿಗಳೂ ಈ ಬಗ್ಗೆ ಧ್ವನಿ ಎತ್ತಿಲ್ಲ. ಆದರೆ, ಉತ್ತರ ಕರ್ನಾಟಕದ ನಾವೆಲ್ಲ ಸಚಿವರು ಸಿಎಂ ಅವರನ್ನು ಭೇಟಿ ಮಾಡಿ ಪ್ರಧಾನಿ ಮೇಲೆ ಈ ಕುರಿತು ಒತ್ತಡ ತರುವಂತೆ ಮನವಿ ಮಾಡಿದ್ದೇವೆ ಎಂದು ಹೇಳಿದರು.
ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಹಣಕಾಸು ಸಚಿವೆ 5,500 ಕೋಟಿ ಹಣವನ್ನು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು. ಆದರೆ, ಈವರೆಗೆ ಒಂದು ನೈಯ್ಯಾ ಪೈಸೆ ಬಿಡುಗಡೆ ಮಾಡಿಲ್ಲ. ಬರಗಾಲ ಸಮಯದಲ್ಲಿ ನಾವು ಸುಪ್ರೀಂ ಕೋರ್ಟಿನ ಮೊರೆ ಹೋಗಿ ನ್ಯಾಯ ಪಡೆಯಬೇಕಾಯಿತು. ಕೇಂದ್ರದ ಅಸಹಕಾರದ ನಡುವೆಯೂ ಸಿಎಂ ಸಿದ್ಧರಾಮಯ್ಯ ನೇತೃತ್ವದ ಸರಕಾರ ಅಭಿವೃದ್ಧಿ ಯೋಜನೆಗಳಿಗೆ ಆದ್ಯತೆ ನೀಡುತ್ತಿದೆ ಎಂದು ತಿಳಿಸಿದರು.
ರಾಜ್ಯದ ಪ್ರವಾಸೋದ್ಯಮ ಕುರಿತು ಮಾತನಾಡಿ, ರಾಜ್ಯದಲ್ಲಿ 25 ಸಾವಿರ ಸ್ಮಾರಕಗಳಿದ್ದು, ಇವುಗಳಲ್ಲಿ 2000 ರಕ್ಷಿತ ಸ್ಮಾರಕಗಳಿವೆ. ವಿಜಯಪುರ ಜಿಲ್ಲೆಯಲ್ಲಿರುವಷ್ಟು ಪ್ರವಾಸೋದ್ಯಮ ಸ್ಥಳಗಳು ರಾಜ್ಯದ ಬೇರಾವ ಜಿಲ್ಲೆಗಳಲ್ಲಿಯೂ ಇಲ್ಲ. ಪ್ರವಾಸೋದ್ಯಮ ಅಭಿವೃದ್ಧಿಗೆ ನಾವು ಒತ್ತು ನೀಡಿದ್ದೇವೆಂದು ಹೇಳಿದರು.
Advertisement