ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಜನೌಷಧಿ ಕೇಂದ್ರಗಳನ್ನು ಬಂದ್ ಮಾಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಶ್ರೀಪತಿ ಅವರು ಆದೇಶ ಹೊರಡಿಸಿದ್ದು ಸರ್ಕಾರಿ ಆಸ್ಪತ್ರೆಗಳ ಹೊರಗೆ ಜನೌಷಧಿ ಕೇಂದ್ರಗಳ ಸ್ಥಾಪನೆಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬಾರದ ಕಾರಣ ಅವು ಮುಂದುವರೆಯಬಹುದಾಗಿದೆ. ರೋಗಿಗಳು ಯಾವುದೇ ಔಷಧವನ್ನು ಆಸ್ಪತ್ರೆಯ ಹೊರಗೆ ಖರೀದಿಸದಂತೆ ನೋಡಿಕೊಳ್ಳುವುದು ಸರ್ಕಾರದ ಆದ್ಯತೆಯಾಗಿದೆ. ಆದ್ದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಜನೌಷಧ ಕೇಂದ್ರಗಳನ್ನು ಸ್ಥಗಿತಗೊಳಿಸಲು, ಅನುಮೋದನೆಗೆ ಬಾಕಿ ಇರುವ ಅರ್ಜಿಗಳನ್ನು ತಿರಸ್ಕರಿಸಲು ಆದೇಶದಲ್ಲಿ ತಿಳಿಸಲಾಗಿದೆ. ಭಾರತೀಯ ಔಷಧ ಮಂಡಳಿಯು ಜನೌಷಧ ಕೇಂದ್ರಗಳಿಗೆ ನೋಡಲ್ ಸಂಸ್ಥೆಯಾಗಿದೆ. ಹೀಗಾಗಿ ಜನೌಷಧ ಕೇಂದ್ರಗಳನ್ನು ಮುಚ್ಚಿ ಬಿಪಿಪಿಐ ಇಂದ ಔಷಧಗಳನ್ನು ನೇರವಾಗಿ ಖರೀದಿಸಿ ರೋಗಿಗಳಿಗೆ ಉಚಿತವಾಗಿ ವಿತರಿಸಲು ಇಲಾಖೆ ನಿರ್ಧರಿಸಿದೆ.
ಧರ್ಮಸ್ಥಳ ಮೂಲದ ಯುವತಿ ಏರೋಸ್ಪೇಸ್ ಉದ್ಯೋಗಿ ಪಂಜಾಬ್ ನಲ್ಲಿ ನಿಗೂಢವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಮೃತಳನ್ನು 22 ವರ್ಷದ ಆಕಾಂಕ್ಷ ಎಸ್ ನಾಯರ್ ಎಂದು ಗುರುತಿಸಲಾಗಿದೆ. ಧರ್ಮಸ್ಥಳದ ಬೊಳಿಯಾರ್ ಗ್ರಾಮದ ಸುರೇಂದ್ರ ಮತ್ತು ಸಿಂಧೂದೇವಿ ದಂಪತಿಯ ಪುತ್ರಿಯಾಗಿರುವ ಆಕಾಂಕ್ಷ ಆರು ತಿಂಗಳ ಹಿಂದೆ ಏರೋಸ್ಪೇಸ್ ಇಂಜಿನಿಯರ್ ಆಗಿ ದೆಹಲಿಯಲ್ಲಿ ಉದ್ಯೋಗಕ್ಕೆ ಸೇರಿದ್ದರು. ಪಂಜಾಬಿನ LPU ಪಗ್ವಾಡ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದಿದುಕೊಂಡಿದ್ದ ಆಕಾಂಕ್ಷ ಕಾಲೇಜಿನಿಂದ ಸರ್ಟಿಫಿಕೇಟ್ ಪಡೆಯಲು ನಿನ್ನೆ ಪಂಜಾಬ್ಗೆ ತೆರಳಿದ್ದರು. ಬೆಳಗ್ಗೆ ಆಕಾಂಕ್ಷ ಪ್ರಮಾಣಪತ್ರ ಪಡೆದು ಪೋಷಕರ ಜೊತೆ ಮಾತನಾಡಿದ್ದಳು. ಅದಾದ ಕೆಲವೇ ಕ್ಷಣಗಳ ಬಳಿಕ ಆಕೆ ಕಾಲೇಜಿನ ಮೂರನೇ ಮಹಡಿಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾಳೆ. ಆಕಾಂಕ್ಷಳನ್ನು ಕೊಲೆ ಮಾಡಲಾಗಿದ್ದು ಎಂದು ಆಕಾಂಕ್ಷ ಪೋಷಕರು ಶಂಕೆ ವ್ಯಕ್ತಪಡಿಸಿದ್ದು ತನಿಖೆ ನಡೆಯಲಿ ಎಂದು ಒತ್ತಾಯಿಸಿದ್ದಾರೆ.
ಆಂಧ್ರ ಪ್ರದೇಶದ ಅನ್ನಮಯ್ಯ ಜಿಲ್ಲೆಯ ಕುರಪ್ಪಲ್ಲಿ ಗ್ರಾಮದ ಬಳಿ ಕಾರು ಚಾಲಕನ ನಿಯಂತ್ರಣ ತಪ್ಪಿ ಬಾವಿಗೆ ಉರುಳಿಬಿದ್ದಿದ್ದು ಕರ್ನಾಟಕದ ಮೂವರು ಸಾವನ್ನಪ್ಪಿದ್ದಾರೆ. ಮೃತರನ್ನು ಚಿಂತಾಮಣಿಯ ಲೊಕೇಶ್, ಶಿವಾನಂದ ಮತ್ತು ಚಲಪತಿ ಎಂದು ಗುರುತಿಸಲಾಗಿದೆ. ಇನ್ನು ಅಪಘಾತದಲ್ಲಿ ಇಬ್ಬರು ಪ್ರಾಣಾಪಾದಿಂದ ಪಾರಾಗಿದ್ದಾರೆ. ಅಡುಗೆ ಕೆಲಸಕ್ಕಾಗಿ ಕಾರಿನಲ್ಲಿ ಒಟ್ಟು ಐವರು ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಸ್ಥಳೀಯರು, ಪೊಲೀಸರು ಸೇರಿ ಬಾವಿಯಲ್ಲಿ ಬಿದ್ದಿದ್ದ ಕಾರನ್ನು ಕ್ರೇನ್ ಮೂಲಕ ಮೇಲಕ್ಕೆತ್ತಿದ್ದಾರೆ. ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.
2005ರಲ್ಲಿ ಬೆಂಗಳೂರಿನ Indian Institute of Science ಮೇಲಿನ ದಾಳಿ ಸೇರಿದಂತೆ ಭಾರತದಲ್ಲಿ ಮೂರು ಪ್ರಮುಖ ದಾಳಿಗಳ ಹಿಂದಿನ ಲಷ್ಕರ್ ಉಗ್ರ ಸಂಘಟನೆಯ ಪ್ರಮುಖ ಭಯೋತ್ಪಾದಕ ಸೈಫುಲ್ಲಾ ಖಾಲಿದ್‌ನನ್ನು ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಹತ್ಯೆ ಮಾಡಲಾಗಿದೆ. ಕೆಲವು ಅಪರಿಚಿತ ಬಂಧೂಕುದಾರಿಗಳು ಆತನ ಮನೆ ಮುಂದೆಯೇ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದರು. ನೇಪಾಳದಲ್ಲಿ ವಿನೋದ್ ಕುಮಾರ್ ಎಂಬ ಹೆಸರಿನಲ್ಲಿ ನಕಲಿ ಗುರುತಿನ ಕಾರ್ಡ್ ಪಡೆದು ವಾಸಿಸುತ್ತಿದ್ದನು. ಅಲ್ಲಿ ನಗ್ಮಾ ಬಾನು ಎಂಬಾಕೆಯನ್ನು ವಿವಾಹವಾಗಿದ್ದು ಎಲ್ಇಟಿ ಚಟುವಟಿಕೆಗಳನ್ನು ಮುಂದುವರೆಸಿದ್ದನು. ಇತ್ತೀಚೆಗೆ, ಖಾಲಿದ್ ತನ್ನ ನೆಲೆಯನ್ನು ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಬದಿನ್ ಜಿಲ್ಲೆಯ ಮಟ್ಲಿಗೆ ಸ್ಥಳಾಂತರಿಸಿದ್ದನು. ಇದೀಗ ಅಪರಿಚಿತರ ಗುಂಡೇಟಿಗೆ ಬಲಿಯಾಗಿದ್ದಾನೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ ಸಿಬಿ ಮತ್ತು ಕೋಲ್ಕತ್ತಾ ನಡುವೆ ನಡೆಯಬೇಕಿದ್ದ ಪಂದ್ಯ ನಿನ್ನೆ ಮಳೆಯಿಂದಾಗಿ ರದ್ದಾಯಿತು. ಆದರೆ ಪಂದ್ಯದ ಸಮಯದಲ್ಲಿ ವಿರಾಟ್ ಕೊಹ್ಲಿಯನ್ನು ತಬ್ಬಿಕೊಳ್ಳುವುದಾಗಿ ಸವಾಲು ಹಾಕಿದ್ದ ಇಬ್ಬರು ರೀಲ್ಸ್ ಸ್ಟಾರ್ಸ್ ಗಳನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ. ಚಂದ್ರಲೇಔಟ್'ನ ಶರಣಬಸವ ಹಾಗೂ ಜೆಪಿ.ನಗರದ ಬಾಲಾಜಿ ಬಂಧಿತರಾಗಿದ್ದು, ಇನ್ ಸ್ಟಾ ಗ್ರಾಮ್ ನಲ್ಲಿ ಕೆಕೆಆರ್ ಮತ್ತು ಆರ್'ಸಿಬಿ ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿ ವಿರಾಟ್ ಕೊಹ್ಲಿ ಅಪ್ಪಿಕೊಳ್ಳುವುದಾಗಿ ಸವಾಲು ಹಾಕಿ ವಿಡಿಯೋ ಅಪ್ಲೋಡ್ ಮಾಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಕಬ್ಬನ್ ಪಾರ್ಕ್ ಪೊಲೀಸರು ಇಬ್ಬರನ್ನು ಬಂಧಿಸಿ ಠಾಣೆಗೆ ಕರೆತಂದಿದ್ದರು. ನಂತರ ಇಬ್ಬರೂ ಕ್ಷಮೆ ಕೋರಿದ್ದಾರೆ. ಆದರೆ ಮುನ್ನೆಚ್ಚರಿಕ ಕ್ರಮವಾಗಿ ಇಬ್ಬರನ್ನು ಠಾಣೆಯಲ್ಲೇ ಇರಿಸಿಕೊಂಡಿದ್ದು ನಂತರ ಬಿಟ್ಟು ಕಳುಹಿಸಿದ್ದಾರೆ.
Advertisement