
ಬೆಂಗಳೂರು: ಕಟ್ಟಡ ನಿರ್ಮಾಣ ಕಾರ್ಯಕ್ಕಾಗಿ ಅನಧಿಕೃತವಾಗಿ ರಸ್ತೆ ತಡೆ ನಡೆಸಿದ್ದನ್ನು ಪ್ರಶ್ನಿಸಿದ ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆಯೊಂದಿ ವಿಲ್ಸನ್ ಗಾರ್ಡನ್'ನಲ್ಲಿ ಭಾನುವಾರ ನಡೆದಿದೆ.
ವಕೀಲ ಹಾಗೂ ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್‌ನ ಅಧ್ಯಕ್ಷರೂ ಎಸ್. ಉಮೇಶ್ ಕುಮಾರ್ (61) ಹಲ್ಲೆಗೊಳಗಾಗಿರುವ ವ್ಯಕ್ತಿಯಾಗಿದ್ದಾರೆ. ಇದೀಗ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ತಿಳಿದುಬಂದಿದೆ.
ಕುಮಾರ್ ಅವರು ಡೈರಿ ಸರ್ಕಲ್ ಬಳಿಯ ಎಸ್.ಆರ್. ನಗರದಲ್ಲಿ ಮದುವೆ ಸಮಾರಂಭಕ್ಕೆ ತೆರಳಿ, ಮನೆಗೆ ಮರಳುತ್ತಿದ್ದರು. ವಿಲ್ಸನ್ ಗಾರ್ಡನ್'ನ 20ನೇ ಕ್ರಾಸ್‌ನಲ್ಲಿ ವಾಹನ ಚಾಲನೆ ಮಾಡುವಾಗ, ರಸ್ತೆ ತಡೆ ಉಂಟಾಗಿರುವುದನ್ನು ಗಮನಿಸಿದ್ದಾರೆ. ಈ ವೇಳೆ ವಾಹನದಿಂದ ಇಳಿದು ವಿಚಾರಿಸಿದಾಗ ಕಟ್ಟಡ ನಿರ್ಮಾಣ ಕಾರ್ಯದ ಕಾರಣ ರಸ್ತೆ ತಡೆ ಉಂಟಾಗಿದೆ ಎಂಬುದು ಅರಿವಿಗೆ ಬಂದಿದೆ. ಬಳಿಕ ಕಟ್ಟಡದ ಬಳಿ ನಿಂತಿದ್ದ ಜನರೊಂದಿಗೆ ಮಾತನಾಡಿ, ದಾರಿ ತೆರವುಗೊಳಿಸುವಂತೆ ಹೇಳಿದ್ದಾರೆ, ಈ ವೇಳೆ ರಾತ್ರಿ 10 ಗಂಟೆಯವರೆಗೆ ಕಾಯುವಂತೆ ಹೇಳಿದ್ದಾರೆ. ಈ ವೇಳೆ ಯಾವುದೇ ಖಾಸಗಿ ನಿರ್ಮಾಣ ಕಾರ್ಯಕ್ಕಾಗಿ ರಸ್ತೆ ತಡೆ ನಡೆಸಬಾರದು ಎಂದು ಕುಮಾರ್ ಹೇಳಿದು, ಒಂದು ಗುಂಪು ಅವರ ಮೇಲೆ ಹಲ್ಲೆ ನಡೆಸಿತು ಎಂದು ಕುಮಾರ್ ಅವರು ಹೇಳಿದ್ದಾರೆ.
ಗುಂಪಿನಲ್ಲಿದ್ದ ಒಬ್ಬ ಆರೋಪಿ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿದ, 6 ಮಂದಿ ಆರೋಪಿಗಳ ಪೈಕಿ ಓರ್ವ ವ್ಯಕ್ತಿಯ ಪರಿಚಯ ನನಗಿದೆ. ಏಕೆಂದರೆ ಆತ ಅದೇ ಪ್ರದೇಶದ ನಿವಾಸಿಯಾಗಿದ್ದಾನೆ. ಕಟ್ಟಡ ನಿರ್ಮಾಣದ ಗುತ್ತಿಗೆಯನ್ನು ಆತ ಪಡೆದುಕೊಂಡಿದ್ದಾನೆ. ಘಟನೆ ವೇಳೆ ಸ್ಥಳದಲ್ಲಿ ಸಾಕಷ್ಟು ಜನರಿದ್ದರೂ ಮೂಕ ಪ್ರೇಕ್ಷಕರಂತೆ ಇದ್ದರು. ಯಾರೊಬ್ಬರೂ ನೆರವಿಗೆ ಬರಲಿಲ್ಲ, ಬಳಿಕ ನಾನೇ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದೆ. ಗಸ್ತು ವಾಹನ ಸ್ಥಳಕ್ಕೆ ಬಂದಿತು. ಆಡುಗೋಡಿ ಪೊಲೀಸ್ ಠಾಣೆಗೆ ದೂರು ನೀಡುವಂತೆ ತಿಳಿಸಿದರು. ಬಳಿಕ ನನಗೆ ತಲೆ ಸುತ್ತಲು ಆರಂಭವಾಯಿತು. ಕೂಡಲೇ ಬೌರಿಂಗ್ ಆಸ್ಪತ್ರೆಗೆ ತೆರಳಿದ್ದೆ ಎಂದು ತಿಳಿಸಿದ್ದಾರೆ.
ಘಟನೆ ಬಳಿಕ ಸೋಮವಾರ ಮಧ್ಯಾಹ್ನ ಆಸ್ಪತ್ರೆಯಲ್ಲಿ ಕುಮಾರ್ ಅವರ ಹೇಳಿಕೆಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.
ಪ್ರಕರಣ ತನಿಖೆಯಲ್ಲಿದೆ. ಕುಮಾರ್ ಇಬ್ಬರು ಆರೋಪಿಗಳ ಫೋಟೋ ಹಂಚಿಕೊಂಡಿದ್ದಾರೆ. ಘಟನೆಯ ಸಮಯದಲ್ಲಿ ಅವರು ಒಬ್ಬಂಟಿಯಾಗಿದ್ದರು. ಯಾವುದೇ ಪ್ರಚೋದನೆಯಿಲ್ಲದೆ ದಾಳಿ ಮಾಡಿದ್ದಾರೆ. ಎಲ್ಲಾ ಆರೋಪಿಗಳು 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
Advertisement