
ಕಲಬುರಗಿ: ಸಚಿವ ಪ್ರಿಯಾಂಕ್ ಖರ್ಗೆ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿತ್ತಾಪೂರ ಪಟ್ಟಣದ ಪ್ರವಾಸಿ ಮಂದಿರದ ಎದುರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಛಲವಾದಿ ನಾರಾಯಣಸ್ವಾಮಿ ಅವರ ವಾಹನದ ಮೇಲೆ ಬಣ್ಣ ಎರಿಚಿ, ಅವರ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಷಾದ ವ್ಯಕ್ತಪಡಿಸುವುದಲ್ಲ, ನಮ್ಮ ಬಳಿ ಬಂದು ಪ್ರಿಯಾಂಕ್ ಖರ್ಗೆ ಅವರಿಗೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರ ಈ ವರ್ತನೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಪ್ರಿಯಾಂಕ್ ಖರ್ಗೆಯವರ ಉಸ್ತುವಾರಿಯಲ್ಲಿ ಕಲ್ಬುರ್ಗಿ ರಿಪಬ್ಲಿಕ್ ಆಫ್ ಕಲ್ಬುರ್ಗಿಯಾಗಿದೆ.ವಿಧಾನ ಪರಿಷತ್ ವಿಪಕ್ಷ ನಾಯಕರಾದ ಛಲವಾದಿ ನಾರಾಯಣ ಸ್ವಾಮಿ ಅವರ ಮೇಲೆ ಪ್ರಿಯಾಂಕ್ ಖರ್ಗೆ ಅವರ ಗೂಂಡಾ ಪಟಾಲಂ ಹಲ್ಲೆ ಯತ್ನ ನಡೆಸಿರುವುದು ಅತ್ಯಂತ ಖಂಡನೀಯ. ಪ್ರಿಯಾಂಕ್ ಖರ್ಗೆ ಅವರೆ, ನಿಮಗೆ ಹೊಡಿ-ಬಡಿ-ಕಡಿ ಆದರ್ಶವಾಗಿದ್ದರೆ, ನಮಗೆ ಬಾಬಾ ಸಾಹೇಬರು ನೀಡಿದ ಸಂವಿಧಾನ ಆದರ್ಶವಾಗಿದೆ. ನಿಮ್ಮ ಗೊಡ್ಡು ಬೆದರಿಕೆ ಹಾಗೂ ರೌಡಿಸಂಗೆ ನಾವು ಸಂವಿಧಾನದ ಮೂಲಕ ಉತ್ತರ ನೀಡುತ್ತೇವೆಂದು ಹೇಳಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪ್ರತಿಕ್ರಿಯಿಸಿ, ಸಾಂವಿಧಾನಿಕ ಹುದ್ದೆ ವಿಪಕ್ಷದ ನಾಯಕ ಸ್ಥಾನದಲ್ಲಿರುವ ಶೋಷಿತ ಸಮುದಾಯಗಳ ನಾಯಕರೂ ಆದ ಛಲವಾದಿ ನಾರಾಯಣಸ್ವಾಮಿ ಅವರನ್ನು ಚಿತ್ತಾಪುರದ ಅತಿಥಿ ಗೃಹದಲ್ಲಿ ದಿಗ್ಬಂಧನದಲ್ಲಿರಿಸಿದ್ದ ಘಟನೆ ಅತ್ಯಂತ ಖಂಡನೀಯ. ನಾರಾಯಣಸ್ವಾಮಿಯವರು ಕಾಂಗ್ರೆಸ್ ಗೂಂಡಾ ಬೆಂಬಲಿಗರ ದಿಗ್ಭಂದನ ಅನುಭವಿಸಿದ್ದು, ಕರ್ನಾಟಕದಲ್ಲಿ ಪಾಳೆಗಾರಿಕೆ ಸಂಸ್ಕೃತಿಯ ಜೀವಂತಿಕೆಯನ್ನು ಪ್ರತಿಬಿಂಬಿಸಿದೆ ಎಂದು ಕಿಡಿಕಾರಿದ್ದಾರೆ.
ಪೊಲೀಸರು ವಿಪಕ್ಷದ ನಾಯಕರೊಬ್ಬರಿಗೆ ರಕ್ಷಣೆ ನೀಡಲಾರದ ಪರಿಸ್ಥಿತಿ ತುರ್ತು ಪರಿಸ್ಥಿತಿಯನ್ನು ನೆನಪಿಸುತ್ತಿದೆ. ಟೀಕೆ- ಟಿಪ್ಪಣಿಗಳನ್ನು ಆರೋಗ್ಯಕರ ಮನಸ್ಸಿನಿಂದ ಸ್ವೀಕರಿಸಬೇಕು, ಅದಕ್ಕೆ ಸಮರ್ಥವಾಗಿ ಪ್ರತ್ಯುತ್ತರ ನೀಡಬೇಕು ಇದು ಪ್ರಜಾಪ್ರಭುತ್ವದ ಸುಂದರತೆ ಹಾಗೂ ರಾಜಕಾರಣ ಸಂಸ್ಕೃತಿಯ ಧ್ಯೋತಕವಾಗುತ್ತದೆ. ಕಲಬುರ್ಗಿ ಜಿಲ್ಲೆ ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿಯ ಸರ್ವಾಧಿಕಾರಿ ನೆರಳಿನಲ್ಲಿ ಬಂದವರ ಕಪಿಮುಷ್ಠಿಯಲ್ಲಿದೆ. ಇಲ್ಲಿ ಪ್ರಜಾಪ್ರಭುತ್ವವೂ ಇಲ್ಲ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯದ ಸಂವಿಧಾನಕ್ಕೆ ಗೌರವವೂ ಇಲ್ಲ ಎನ್ನುವುದು ನಾರಾಯಣಸ್ವಾಮಿಯವರ ದಿಗ್ಬಂಧನ ಸಾಕ್ಷಿ ಹೇಳುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದ್ದರೆ ಸಾಂವಿಧಾನಿಕ ಹುದ್ದೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಗೌರವವಿದ್ದರೆ ಈ ಕೂಡಲೇ ವಿಧಾನ ಪರಿಷತ್ ವಿರೋಧ ಪಕ್ಷ ನಾಯಕರಾದ ಛಲವಾದಿ ನಾರಾಯಣ ಸ್ವಾಮಿ ಅವರಿಗೆ ಸೂಕ್ತ ಭದ್ರತೆ ಒದಗಿಸಿ ದಿಬ್ಬಂದನ ವಿಧಿಸಿದ ಗೂಂಡಾಗಳ ಮೇಲೆ ಕ್ರಮ ಜರುಗಿಸಲಿ. ಅವರು ನಿರ್ಲಿಪ್ತರಾದರೆ ತಾವೂ ಪಾಳೇಗಾರಿಕೆ ಸಂಸ್ಕೃತಿಯ ಭಾಗ ಎಂದು ನಿರೂಪಿಸಿಕೊಂಡಂತಾಗುತ್ತದೆ.
ಭಾರತೀಯ ಜನತಾ ಪಾರ್ಟಿ ಪ್ರಜಾಪ್ರಭುತ್ವದ ಮೌಲ್ಯ ಎತ್ತಿ ಹಿಡಿಯಲು ಶೋಷಿತ ಸಮುದಾಯದಿಂದ ಮೇಲೇರಿ ಬಂದ ಛಲವಾದಿ ನಾರಾಯಣಸ್ವಾಮಿ ಅವರಂತಹ ನಾಯಕನ ರಕ್ಷಣೆಗೆ ಬೆನ್ನಿಗೆ ನಿಲ್ಲುವುದು ಆದ್ಯತೆಯಾಗಿ ಪರಿಗಣಿಸಿದೆ ಎಂದು ತಿಳಿಸಿದ್ದಾರೆ.
ಸಿಟಿ ರವಿಯವರು ಪ್ರತಿಕ್ರಿಯಿಸಿ ಕಾಂಗ್ರೇಸ್ ಸರ್ಕಾರದ ಮಂತ್ರಿಗಳ ಮತ್ತವರ ಛೇಲಾಗಳ ಆಟಾಟೋಪ ಮಿತಿಮೀರುತ್ತಿದೆ. ಜಿಲ್ಲೆಗಳನ್ನು ತಮ್ಮ ಪಿತ್ರಾರ್ಜಿತ ಜಾಗೀರು ಮಾಡಿಕೊಂಡಿರುವ ಮಂತ್ರಿಗಳ ಚೇಲಾಗಳು ಜನಪ್ರತಿನಿಧಿಗಳನ್ನು ತಮ್ಮ ಕೆಲಸ ಮಾಡದಂತೆ ತಡೆಹಿಡಿಯುವ ಪ್ರಯತ್ನ ಮಾಡೋದು, ದೈಹಿಕ ಹಲ್ಲೆ ಮಾಡುವುದು ಸಾಮಾನ್ಯವಾಗಿದೆ.
ಮಂತ್ರಿಗಳ "ರಿಪಬ್ಲಿಕ್ ಆಫ್ ಬೆಳಗಾವಿ"ಯಲ್ಲಿ ನಡೆದ ಘಟನೆ ಹಸಿರಾಗಿರುವಂತೆ ಇಂದು "ರಿಪಬ್ಲಿಕ್ ಆಫ್ ಕಲಬುರಗಿ"ಯಲ್ಲಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣ ಸ್ವಾಮಿಯವರ ಮೇಲೆ ಹಲ್ಲೆಮಾಡುವ ಯತ್ನ ದುರದೃಷ್ಟಕರ ಹಾಗು ಖಂಡನೀಯ. ಗ್ರಹಮಂತ್ರಿಗಳೇ, ರಾಜ್ಯದ ಕಾನೂನು ವ್ಯವಸ್ಥೆಗೂಂಡಾಗಳ ಕೈಗೆ ನೀಡಿದ್ದಿರೇ? ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಿಗೆ ರಕ್ಷಣೆ ಕೊಡಲು ಅಸಮರ್ಥರಾದ ನೀವು ರಾಜ್ಯದ ಜನತೆಗೆ ಹೇಗೆ ರಕ್ಷಣೆ ನೀಡುತ್ತಿರಿ? ಎಂದು ಪ್ರಶ್ನಿಸಿದ್ದಾರೆ.
Advertisement