
ಬೆಂಗಳೂರು: ರಾಮನಗರ ಜಿಲ್ಲೆಯನ್ನು ‘ಬೆಂಗಳೂರು ದಕ್ಷಿಣ ಜಿಲ್ಲೆ’ ಎಂದು ಮರುನಾಮಕರಣ ಮಾಡುವ ಸಂಬಂಧ ಗುರುವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
2024ರ ಜುಲೈ ತಿಂಗಳಿನಲ್ಲಿ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಲು ಸಚಿವ ಸಂಪುಟ ಅನುಮೋದನೆ ನೀಡಿತ್ತು. ನಂತರ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಅನುಮೋದನೆಗಾಗಿ ಮನವಿ ಸಲ್ಲಿಸಿತ್ತು.
ಪ್ರಸಕ್ತ ಸಾಲಿನ ಮಾರ್ಚ್‌ನಲ್ಲಿ, ಸಂಪುಟ ನಿರ್ಧಾರದ ನಂತರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಿದ್ದರೂ, ಪ್ರತಿಕ್ರಿಯೆ ಸಕಾರಾತ್ಮಕವಾಗಿಲ್ಲ ಎಂದು ಕಂದಾಯ ಸಚಿವ ಕೃಷ ಬೈರೇಗೌಡ ಅವರು ಹೇಳಿದ್ದರು.
ಇದೀಗ ರಾಜ್ಯ ಸರ್ಕಾರವು ಗುರುವಾರದ ಸಂಪುಟ ಸಭೆಯ ಕಾರ್ಯಸೂಚಿಯಲ್ಲಿ ಈ ವಿಷಯವನ್ನು ಸೇರ್ಪಡೆಗೊಳಿಸಿದ್ದು, ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
1953 ರಲ್ಲಿ ಗೃಹ ಸಚಿವಾಲಯ ಹೊರಡಿಸಿದ ಅಧಿಸೂಚನೆಯಲ್ಲಿ ಗ್ರಾಮಗಳು, ಪಟ್ಟಣಗಳು ಅಥವಾ ನಗರಗಳು ಮತ್ತು ರೈಲ್ವೆ ನಿಲ್ದಾಣಗಳ ಹೆಸರುಗಳನ್ನು ಬದಲಾಯಿಸಲು, ರಾಜ್ಯ ಸರ್ಕಾರವು ಗೃಹ ಸಚಿವಾಲಯಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಬೇಕಿದೆ. ಬಳಿಕ ಕೇಂದ್ರ ಸರ್ಕಾರ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಲು ರಾಜ್ಯ ಸರ್ಕಾರಕ್ಕೆ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ನೀಡಬಹುದು ಎಂದು ತಿಳಿಸಿದೆ.
ಆದಾಗ್ಯೂ, ನಗರಗಳು, ಗ್ರಾಮಗಳು ಮತ್ತು ಜಿಲ್ಲೆಗಳ ಹೆಸರುಗಳನ್ನು ಬದಲಾಯಿಸುವುದು ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುತ್ತದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
2018 ರಲ್ಲಿ ಉತ್ತರ ಪ್ರದೇಶ ಸರ್ಕಾರವು ಅಲಹಾಬಾದ್ ಅನ್ನು ಪ್ರಯಾಗ್‌ರಾಜ್ ಎಂದು ಮರುನಾಮಕರಣ ಮಾಡಿತು. ನಂತರ ನ್ಯಾಯಾಲಯ ಕೂಡ ಸರ್ಕಾರವನ್ನು ಬೆಂಬಲಿಸಿತ್ತು. ಈ ವೇಳೆ ಇದು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ವಿಷಯ ಎಂದು ಉಲ್ಲೇಖಿಸಿತ್ತು. ಇದೀಗ ನಾವು ಕಾನೂನುಬದ್ಧವಾಗಿ ಸಜ್ಜಾಗಿದ್ದೇವೆ. ಸಚಿವ ಸಂಪುಟವು ಅನುಮೋದನೆ ನೀಡಿದ ನಂತರ, ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಲು ಅಧಿಸೂಚನೆಯನ್ನು ಹೊರಡಿಸಲಾಗುವುದು, ರಾಮನಗರ ತಾಲ್ಲೂಕನ್ನು ಜಿಲ್ಲಾ ಕೇಂದ್ರವಾಗಿ ಮರುನಾಮಕರಣ ಮಾಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
2014 ರಲ್ಲಿ, ಅಂದಿನ ರಾಜ್ಯ ಸರ್ಕಾರವು 11 ಜಿಲ್ಲೆಗಳ ಹೆಸರುಗಳನ್ನು Bangaloreನ್ನು Bengaluru, Mysoreನ್ನು Mysuru, Belgaumನ್ನು Belagavi ಎಂದು ಮರುನಾಮಕರಣ ಮಾಡಿತ್ತು. ಇದಕ್ಕಾಗಿ ವಿಶೇಷ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿತ್ತು. ರಾಮನಗರ ಜಿಲ್ಲೆಯನ್ನು ಮರುನಾಮಕರಣ ಮಾಡಲು ಡಿಸಿಎಂ ಡಿಕೆ ಶಿವಕುಮಾರ್ ಉತ್ಸುಕರಾಗಿದ್ದಾರೆ.
ರಾಮನಗರ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಭಾಗವಾಗಿದ್ದು, ಶಿವಕುಮಾರ್ ಅವರ ಸಹೋದರ ಡಿ.ಕೆ. ಸುರೇಶ್ ಅವರು ಕುಮಾರಸ್ವಾಮಿ ಅವರ ಭಾವ ಬಿ.ಜೆ.ಪಿ.ಯ ಡಾ. ಸಿ.ಎನ್. ಮಂಜುನಾಥ್ ವಿರುದ್ಧ ಸ್ಪರ್ಧಿಸಿ ಸೋಲು ಕಂಡಿದ್ದರು.
Advertisement