
ಬೆಂಗಳೂರು: ಬೆಂಗಳೂರು ಮೆಟ್ರೋ ರೈಲಿನಲ್ಲಿ ಮಹಿಳಾ ಪ್ರಯಾಣಿಕರ ವಿಡಿಯೋ ಮಾಡುತ್ತಿದ್ದ ವಿಕೃತ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ನಮ್ಮ ಮೆಟ್ರೋದಲ್ಲಿ ಮಹಿಳಾ ಪ್ರಯಾಣಿಕರ ಅಸಭ್ಯ ಫೋಟೋ ಹಾಗೂ ವಿಡಿಯೋಗಳನ್ನು ರಹಸ್ಯವಾಗಿ ಸೆರೆ ಹಿಡಿದು ಸೋಶಿಯಲ್ ಮೀಡಿಯಾ ಪೇಜ್‌ಗಳಲ್ಲಿ ಪೋಸ್ಟ್ ಮಾಡುತ್ತಿದ್ದ ವಿಕೃತ ಕಾಮಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಶುಕ್ರವಾರ ಮಧ್ಯಾಹ್ನ ಆರೋಪಿಯನ್ನು ಆತನ ಮನೆಯಿಂದ ಬಂಧಿಸಲಾಗಿದೆ ಎಂದು ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತ ಲೋಕೇಶ್ ಬಿ ಜಗಲಾಸರ್ ತಿಳಿಸಿದ್ದಾರೆ.
ಬಂಧಿತನನ್ನು 27 ವರ್ಷದ ದಿಗಂತ ಎಂದು ಗುರುತಿಸಲಾಗಿದೆ. ಆರೋಪಿ ದಿಗಂತ್ ಉತ್ತರ ಬೆಂಗಳೂರಿನ ತಿಗಳರಪಾಳ್ಯದ ನಿವಾಸಿಯಾಗಿದ್ದು, ವಾಣಿಜ್ಯ ಪದವೀಧರನಾಗಿರುವ ಈತ ಮುರುಗೇಶಪಾಳ್ಯದ ಖಾಸಗಿ ಕಂಪನಿಯಲ್ಲಿ ಖಾತೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗಿದೆ.
ಮೂಲತಃ ಹಾಸನ ಜಿಲ್ಲೆಯ ಹೊಳೆನರಸಿಪುರದ ದಿಗಂತ್ ತಿಗಳರ ಪಾಳ್ಯದಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿದ್ದ. ಆರೋಪಿ ಪ್ರತಿದಿನ ಪೀಣ್ಯದಿಂದ ಇಂದಿರಾನಗರಕ್ಕೆ ತನ್ನ ಕೆಲಸಕ್ಕಾಗಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದನು. ಪ್ರಯಾಣ ಮಾಡುವಾಗ ಮೆಟ್ರೋ ರೈಲಿನಲ್ಲಿರುತ್ತಿದ್ದ ಮಹಿಳಾ ಪ್ರಯಾಣಿಕರ ಅವರಿಗೆ ತಿಳಿಯದಂತೆ ವಿಡಿಯೋ ಚಿತ್ರೀಕರಿಸುತ್ತಿದ್ದ ಎಂದು ಹೇಳಲಾಗಿದೆ.
Metro Chicks ಖಾತೆಯಲ್ಲಿ ವಿಡಿಯೋ ಅಪ್ಲೋಡ್
ಇನ್ನು ಆರೋಪಿ ದಿಗಂತ್ ತಾನು ರಹಸ್ಯವಾಗಿ ರೆಕಾರ್ಡ್ ಮಾಡುತ್ತಿದ್ದ ವಿಡಿಯೋಗಳನ್ನು Metro Chicks ಎಂಬ ತನ್ನ ಇನ್‌ಸ್ಟಾಗ್ರಾಮ್ ಮತ್ತು ಟೆಲಿಗ್ರಾಮ್ ಖಾತೆಯಲ್ಲಿ ಅಪ್‌ಲೋಡ್ ಮಾಡುತ್ತಿದ್ದ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದೀಗ ಹೆಚ್ಚಿನ ಮಾಹಿತಿಗಾಗಿ ಪೊಲೀಸರು ಅರೋಪಿಯ ಡಿಜಿಟಲ್ ಸಾಧನಗಳನ್ನು ಸ್ಕ್ಯಾನ್ ಮಾಡುತ್ತಿದ್ದು, ಈ ವರ್ಷದ ಮಾರ್ಚ್‌ನಿಂದ ಆತ ವೀಡಿಯೊಗಳನ್ನು ಅಪ್‌ಲೋಡ್ ಮಾಡುತ್ತಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ತನಿಖಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ಬೆಂಗಳೂರು ಮೆಟ್ರೋ ಕ್ಲಿಕ್ಸ್ʼ ಹಾಗೂ 'ಮೆಟ್ರೋ ಚಿಕ್ಸ್' ಎಂದು ಇನ್‌ಸ್ಟಾಗ್ರಾಂ ಮತ್ತು ಟೆಲಿಗ್ರಾಂನಲ್ಲಿ ಪೇಜ್ ತೆರೆದು ಅದರಲ್ಲಿ 13ಕ್ಕೂ ಹೆಚ್ಚು ಅಸಭ್ಯವಾದ ಫೋಟೋ, ವಿಡಿಯೋಗಳನ್ನು ಪೋಸ್ಟ್ ಮಾಡಿದ್ದ. ಸುಮಾರು 5,300ಕ್ಕೂ ಹೆಚ್ಚು ಮಂದಿ ಈ ಪೇಜ್ ಗಳನ್ನು ಫಾಲೋ ಆಗಿದ್ದರು.
ಇದರಲ್ಲಿ ಯುವತಿಯರು ಹಾಗೂ ಮಹಿಳೆಯರು ಮೆಟ್ರೋದಲ್ಲಿ ಪ್ರಯಾಣಿಸುವಾಗ ಅವರಿಗೆ ಗೊತ್ತಿಲ್ಲದಂತೆ ರಹಸ್ಯವಾಗಿ ಖಾಸಗಿ ಅಂಗಗಳು, ಅಶ್ಲೀಲವಾಗಿ ಫೋಟೋ ಹಾಗೂ ವಿಡಿಯೋಗಳನ್ನು ರೆಕಾರ್ಡ್ ಮಾಡಿಕೊಂಡು ಪೋಸ್ಟ್ ಮಾಡಿರುವುದು ಬೆಳಕಿಗೆ ಬಂದಿತ್ತು.
ಕ್ರಮಕ್ಕೆ ಆಗ್ರಹಿಸಿದ್ದ ಸಾರ್ವಜನಿಕರು
ಈ ವಿಡಿಯೋಗಳು ವೈರಲ್ ಆಗುತ್ತಲೇ ಕೂಡಲೇ ಈ ನೀಚ ಕೃತ್ಯ ಎಸಗಿದ ವ್ಯಕ್ತಿಯನ್ನು ಬಂಧಿಸುವಂತೆ ಮೆಟ್ರೋ ಪ್ರಯಾಣಿಕರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದರು.
ಆ ಪೇಜ್‌ನ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡು ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿದ್ದರು. ಎಫ್‌ಐಆರ್ ದಾಖಲಾಗುತ್ತಿದ್ದಂತೆ ಆ ಪೇಜ್ ರಿಪೋರ್ಟ್ ಕೂಡ ಮಾಡಿದ್ದರು.
ಪ್ರಕರಣ ಬಯಲಾಗುತ್ತಲೇ ವಿಡಿಯೋ ಡಿಲೀಟ್
ಮೆಟ್ರೋ ಚಿಕ್ಸ್ ಎಂಬ ಖಾತೆಯಿಂದ ಸುಮಾರು 13ಕ್ಕೂ ಹೆಚ್ಚು ವಿಡಿಯೋ ಅಪ್‌ಲೋಡ್ ಮಾಡಿರುವ ವಿಚಾರ ಬೆಳಕಿಗೆ ಬಂದಿತ್ತು. ಈ ಸಂಬಂಧ ಬನಶಂಕರಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು. ತಕ್ಷಣವೇ ಆ ಪೇಜ್‌ನಲ್ಲಿದ್ದ ವಿಡಿಯೋಗಳನ್ನು ಆತ ಡಿಲೀಟ್ ಮಾಡಿದ್ದ.
ವಿಕೃತ ಕಾಮಿಯನ್ನು ಬೆನ್ನತ್ತಿದ್ದ ಪೊಲೀಸರಿಗೆ ಆತ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ಆ ಮೂಲಕ ಮಹಿಳಾ ಮೆಟ್ರೋ ಪ್ರಯಾಣಿಕರು ನಿಟ್ಟುಸಿರುಬಿಟ್ಟಿದ್ದಾರೆ.
Advertisement