ರಾಜ್ಯದಲ್ಲಿ ಮಹಾಮಾರಿ ಕೊರೋನಾ ಆತಂಕ ಹೆಚ್ಚುತ್ತಿದ್ದು, ಕಳೆದ ಒಂದು ವಾರದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳಲ್ಲಿ ಏರಿಕೆಯಾಗಿದೆ. ರಾಜ್ಯಾದ್ಯಂತ 35 ಜನರಲ್ಲಿ ಕೋವಿಡ್ ಪಾಸಿಟಿವ್ ಬಂದಿದ್ದು, ಬೆಂಗಳೂರಿನಲ್ಲಿಯೇ 32 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಕೋವಿಡ್ ಬಂದಿದೆ ಎಂದು ಜನ ಆತಂಕ ಪಡುವ ಅಗತ್ಯವಿಲ್ಲ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯಿಂದ ಅಗತ್ಯ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ ಎಂದರು. ನಿನ್ನೆ ಕೋವಿಡ್ ತಾಂತ್ರಿಕ ಸಮಿತಿ ಸಭೆ ನಡೆಸಿ ರಾಜ್ಯದಲ್ಲಿ ಪತ್ತೆಯಾಗಿರುವ ಕೋವಿಡ್ ಪ್ರಕರಣಗಳ ಕುರಿತಂತೆ ಚರ್ಚೆ ನಡೆಸಿದ್ದೇವೆ. ಕೇಂದ್ರ ಸರ್ಕಾರದ ಜೊತೆ ಕೂಡ ಸಂಪರ್ಕದಲ್ಲಿದ್ದೇವೆ. ದೇಶದಲ್ಲಿ ಒಟ್ಟು 257 ಪ್ರಕರಣ ದಾಖಲಾಗಿವೆ. ಉಸಿರಾಟದ ತೊಂದರೆ ಇರುವವರಿಗೆ, SARI ಪ್ರಕರಣಗಳಲ್ಲಿ ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಮಾಡಲು ಸೂಚನೆ ನೀಡಲಾಗಿದೆ. ಒಂದು ತಿಂಗಳಿಗಾಗುವಷ್ಟು ಟೆಸ್ಟಿಂಗ್ ಕಿಟ್ ಗಳನ್ನ ತೆಗೆದಿಟ್ಟುಕೊಳ್ಳಲು ಸೂಚಿಸಲಾಗಿದೆ. ಅಗತ್ಯವಿದ್ದಾಗ ಮಾತ್ರ ಟೆಸ್ಟ್ ಮಾಡಲಾಗುವುದು ಎಂದರು.
ಕೇರಳಕ್ಕೆ ನೈಋತ್ಯ ಮುಂಗಾರು ಪ್ರವೇಶಿಸಿದ್ದು ಕೇರಳದಾದ್ಯಂತ ಭಾರೀ ಮಳೆಯಾಗುತ್ತಿದೆ. 16 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕೇರಳಕ್ಕೆ ಮುಂಗಾರು ಮಳೆ ಅವಧಿಗೂ ಮುನ್ನವೇ ಪ್ರವೇಶಿಸಿದೆ. ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡು ಭಾಗಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಭಾನುವಾರದವರೆಗೆ ರಾಜ್ಯದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದ್ದು ಇಂದು ಮತ್ತು ನಾಳೆ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಮಳೆ ಹೆಚ್ಚಾಗಲಿದೆ ಎಂದು ಐಎಂಡಿ ಮುನ್ನೆಚ್ಚರಿಕೆ ನೀಡಿದೆ. ಬೆಂಗಳೂರಿನಲ್ಲಿ ಮೋಡ ಮುಸುಕಿದ ವಾತಾವರಣವಿದ್ದು ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬೆಳಗಾವಿಯ ರಾಯಬಾಗ ತಾಲೂಕಿನ ಮೇಖಳಿಯ ರಾಮಮಂದಿರ ಲೋಕೇಶ್ವರ ಮಹಾರಾಜ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಾಗಲಕೋಟೆಯ ಲಾಡ್ಜ್‌ವೊಂದರಲ್ಲಿ 17 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದ ಬಗ್ಗೆ ಬಾಗಲಕೋಟೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಬಾಗಲಕೋಟೆ ಪೊಲೀಸರು ಮೂಡಲಗಿ ಠಾಣೆಗೆ ವರ್ಗಾಯಿಸಲಾಗಿತ್ತು. ಇಂದು ಮೂಡಲಗಿ ಪೊಲೀಸರು ಮೇಖಳಿಯ ರಾಮಮಂದಿರಕ್ಕೆ ಆಗಮಿಸಿ ಲೋಕೇಶ್ವರ ಮಹಾರಾಜ ಸ್ವಾಮೀಜಿ ಅವರನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಿ, ಜೈಲಿಗೆ ಕಳುಹಿಸಿದ್ದಾರೆ. 17 ವರ್ಷದ ಅಪ್ರಾಪ್ತ ಬಾಲಕಿಗೆ ಹುಷಾರಿಲ್ಲದೇ ಇದ್ದಾಗ ಪೋಷಕರು ಆಕೆಯನ್ನು ಮಠಕ್ಕೆ ತಂದು ಬಿಟ್ಟು ಹೋಗುತ್ತಿದ್ದರು. ಇದೇ ಅವಕಾಶವನ್ನು ಬಳಸಿಕೊಂಡು ಸ್ವಾಮೀಜಿ ಈ ಕುಕೃತ್ಯ ಎಸಗಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.
ಬೆಂಗಳೂರಿನ ಹೆಚ್ಚುತ್ತಿರುವ ಮೂಲಭೂತಸೌಕರ್ಯ ಮತ್ತು ಸಂಚಾರ ಸವಾಲುಗಳನ್ನು ನಿಭಾಯಿಸಲು ಸಂಸದ ತೇಜಸ್ವಿ ಸೂರ್ಯ ಅವರು, ನಗರದ ಆಡಳಿತ, ಸಂಚಾರ ನಿರ್ವಹಣೆ ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳನ್ನು ಆಧುನೀಕರಿಸಲು 15 ಅಂಶಗಳ ಸಮಗ್ರ ಕಾರ್ಯಸೂಚಿಯನ್ನು ಪ್ರಸ್ತಾಪಿಸಿದ್ದಾರೆ. ನಗರದ ಮೂಲಸೌಕರ್ಯಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳ ಕುರಿತು ಚರ್ಚಿಸಲು ಡಿಸಿಎಂ ಡಿಕೆ ಶಿವಕುಮಾರ್ ಬೆಂಗಳೂರಿನ ಸಂಸದರು ಮತ್ತು ಶಾಸಕರ ಸಭೆ ಕರೆದಿದ್ದು ನಗರದ ಮೂಲಸೌಕರ್ಯಕ್ಕೆ ಸಂಬಂಧಿಸಿದ ತುರ್ತು ಸಮಸ್ಯೆಗಳ ಕುರಿತು ಚರ್ಚಿಸಲು ಈ ಕ್ರಿಯಾ ಯೋಜನೆಯನ್ನು ತೇಜಸ್ವಿ ಸೂರ್ಯ ಅವರು ಪರಿಗಣನೆಗೆ ಕಳುಹಿಸಿದ್ದಾರೆ. ಬೆಂಗಳೂರು 2050 ವಿಷನ್ ಗ್ರೂಪ್ ರಚನೆ. ತಂತ್ರಜ್ಞಾನ ಆಧಾರಿತ ಸಂಚಾರ ನಿರ್ವಹಣಾ ಉಪಕ್ರಮಗಳು, ಸಾರ್ವಜನಿಕ ಸಾರಿಗೆ ಸೇವೆಗಳ ನವೀಕರಣ, ಬಿಎಂಎಲ್‌ಟಿಎ ಬಲವರ್ಧನೆ ಸೇರಿದಂತೆ 15 ಅಂಶಗಳ ಕಾರ್ಯಸೂಚಿಯನ್ನು ಕಳುಹಿಸಿದ್ದಾರೆ.
ಮುಜರಾಯಿ ಇಲಾಖೆ ವ್ಯಾಪ್ತಿಯ A ವರ್ಗದ ದೇವಾಲಯಗಳಲ್ಲಿ ಸಂಗ್ರಹವಾಗುವ ಸಾಮಾನ್ಯ ಸಂಗ್ರಹಣಾ ನಿಧಿಯ ಶೇ. 5ರಿಂದ ಶೇ.10ರಷ್ಟು ಆದಾಯವನ್ನು C ವರ್ಗದ ದೇವಸ್ಥಾನಗಳ ಅಭಿವೃದ್ಧಿಗೆ ಬಳಕೆ ಕಡ್ಡಾಯಗೊಳಿಸುವ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ಮಸೂದೆಯನ್ನು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ರಾಷ್ಟ್ರಪತಿಗಳ ಅನುಮೋದನೆಗಾಗಿ ಕಾಯ್ದಿರಿಸಿದ್ದಾರೆ. ಈ ಮಸೂದೆಯನ್ನು ಮಾರ್ಚ್ 6, 2024 ರಂದು ಅಂಗೀಕರಿಸಲಾಯಿತು ಮತ್ತು ಮೇ 16, 2025 ರಂದು ರಾಜ್ಯಪಾಲರಿಗೆ ಹೊಸದಾಗಿ ಸಲ್ಲಿಸಲಾಯಿತು. "ಪ್ರಸ್ತಾವಿತ ಮಸೂದೆಗೆ ಒಪ್ಪಿಗೆ ನೀಡುವ ಬದಲು, ಹೆಚ್ಚಿನ ಸಾಂವಿಧಾನಿಕ ತೊಡಕುಗಳನ್ನು ತಪ್ಪಿಸಲು ಈ ಮಸೂದೆಯನ್ನು ಗೌರವಾನ್ವಿತ ರಾಷ್ಟ್ರಪತಿಗಳ ಪರಿಗಣನೆಗೆ ಕಾಯ್ದಿರಿಸುವುದು ಸೂಕ್ತವೆಂದು ನಾನು ಭಾವಿಸುತ್ತೇನೆ" ಎಂದು ಗೆಹ್ಲೋಟ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
Advertisement