ಕೋವಿಡ್ ಸಂಬಂಧಿಸಿದಂತೆ ಪರಿಸ್ಥಿತಿ ಅವಲೋಕಿಸಲು ಆರೋಗ್ಯ ಇಲಾಖೆ ಮತ್ತು ಆರೋಗ್ಯ ಶಿಕ್ಷಣ ಇಲಾಖೆ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾವೇರಿ ನಿವಾಸದಲ್ಲಿ ಸೋಮವಾರ ಸಭೆ ನಡೆಸಿದರು. ಸದ್ಯಕ್ಕೆ ಆತಂಕ ಪಡುವ ಅಗತ್ಯವಿಲ್ಲ. ಆದರೆ, ಮುಂಚಿತವಾಗಿಯೇ ಮುಂದೆ ಸಂಭವಿಸಬಹುದಾದ ಪರಿಸ್ಥಿತಿಯನ್ನು ಅವಲೋಕಿಸಿ ಅಗತ್ಯವಾದ ವೆಂಟಿಲೇಟರ್, ಆಕ್ಸಿಜನ್, ಔಷಧ ಸೇರಿ ಇತ್ಯಾದಿ ಅಗತ್ಯಗಳನ್ನು ಸಿದ್ದಪಡಿಸಿಟ್ಟುಕೊಳ್ಳಿ ಎಂದು ಆರೋಗ್ಯಾಧಿಕಾರಿಗಳಿಗೆ ಸಿಎಂ ಸೂಚಿಸಿದರು. ಇದೇ ವೇಳೆ ಶೀತ, ನೆಗಡಿ, ಜ್ವರ ಇರುವ ಮಕ್ಕಳಿಗೆ ರಜೆ ನೀಡುವಂತೆ ಶಿಕ್ಷಣ ಇಲಾಖೆಗೆ ಸೂಚಿಸಿದ್ದಾರೆ. ದಿನನಿತ್ಯ 150ರಿಂದ 200 ಕೊರೋನಾ ಪರೀಕ್ಷೆಗಳನ್ನು ನಡೆಸುವಂತೆ ತಾಂತ್ರಿಕ ಸಲಹಾ ಸಮಿತಿ ಸೂಚಿಸಿದೆ. ನಿನ್ನೆ 47 ಇದ್ದ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ ಇಂದು 74ಕ್ಕೆ ಏರಿಕೆಯಾಗಿದೆ.
ಮಂಡ್ಯದಲ್ಲಿ ಸೋಮವಾರ ಸಂಚಾರ ಪೊಲೀಸರ ತಪಾಸಣೆಯ ಸಮಯದಲ್ಲಿ ನಾಲ್ಕು ವರ್ಷದ ಬಾಲಕಿಯೊಬ್ಬಳು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ದುರಂತಕ್ಕೆ ಸಂಚಾರ ಪೊಲೀಸರೇ ಕಾರಣ ಎಂದು ಆರೋಪಿಸಿ ಭಾರೀ ಸಂಖ್ಯೆಯಲ್ಲಿ ಜನರು ಮಗುವಿನ ಶವದೊಂದಿಗೆ ಪ್ರತಿಭಟನೆ ನಡೆಸಿದರು, ನಂತರ ಮೂವರು ಎಎಸ್‌ಐಗಳನ್ನು ಅಮಾನತುಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮದ್ದೂರು ತಾಲ್ಲೂಕಿನ ತನ್ನ ಗ್ರಾಮದಲ್ಲಿ ನಾಯಿ ಕಚ್ಚಿದ ನಂತರ ಹೃತಿಕ್ಷಾಳ ಪೋಷಕರು ತಕ್ಷಣ ಚಿಕಿತ್ಸೆ ನೀಡಲು ಮಂಡ್ಯ ನಗರದ ಆಸ್ಪತ್ರೆಗೆ ದ್ವಿಚಕ್ರ ವಾಹನದಲ್ಲಿ ಕರೆದೊಯ್ಯುತ್ತಿದ್ದ ವೇಳೆ ಹೆಲ್ಮೆಟ್ ಧರಿಸದ ಕಾರಣ ಸಂಚಾರ ಪೊಲೀಸರು ತಡೆದಿದ್ದಾರೆ. ನಾಯಿ ಕಡಿತಕ್ಕೆ ಚಿಕಿತ್ಸೆ ನೀಡಲು ತೆರಳುತ್ತಿರುವುದಾಗಿ ತಿಳಿಸಿದ್ದರಿಂದ ಸಂಚಾರ ಪೊಲೀಸರು ಅವರನ್ನು ಬಿಟ್ಟು ಕಳಿಸಿದ್ದಾರೆ. ಆ ಕ್ಷಣದಲ್ಲೇ ಮತ್ತೊಂದು ವಾಹನವು ದ್ವಿಚಕ್ರ ವಾಹನದ ಹಿಂದೆ ಢಿಕ್ಕಿ ಹೊಡೆದ ಪರಿಣಾಮ ಮಗು ಮೋಟಾರ್‌ಸೈಕಲ್‌ನಿಂದ ಬಿದ್ದಿತು. ಈ ಮಧ್ಯೆ, ಹಿಂದಿನಿಂದ ಬಂದ ಟ್ರಕ್ ಹೃತಿಕ್ಷಾ ಅವರ ಮೇಲೆ ಡಿಕ್ಕಿ ಹೊಡೆದಿದೆ. ಆಕೆಯ ತಲೆಗೆ ತೀವ್ರ ಪೆಟ್ಟು ಬಿದ್ದು, ಅತಿಯಾದ ರಕ್ತಸ್ರಾವದಿಂದಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜ್ಯದ ಕರಾವಳಿ ಪ್ರದೇಶದಲ್ಲಿ ಸತತ ಮೂರನೇ ದಿನವೂ ಭಾರಿ ಮಳೆಯಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಅಧಿಕಾರಿಗಳು ರೆಡ್ ಅಲರ್ಟ್ ಘೋಷಿಸಿದ್ದಾರೆ. ಪರಿಸ್ಥಿತಿಯನ್ನು ನಿಭಾಯಿಸಲು ವಿಪತ್ತು ನಿರ್ವಹಣಾ ತಂಡಗಳನ್ನು ನಿಯೋಜಿಸಲಾಗಿದೆ. ಮುಂದಿನ 48 ಗಂಟೆಗಳಲ್ಲಿ ಕರಾವಳಿ ಪ್ರದೇಶದಾದ್ಯಂತ ಭಾರಿ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಮುಂದಿನ ಐದು ದಿನಗಳವರೆಗೆ ರೆಡ್ ಅಲರ್ಟ್ ಜಾರಿಯಲ್ಲಿರುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಇನ್ನು ಮಂಗಳೂರಿನ ಮೂಡಬಿದಿರೆ ಬಳಿಯ ಎರುಗುಂಡಿ ಫಾಲ್ಸ್‌ಗೆ ಯುವಕರ ತಂಡ ತೆರಳಿತ್ತು. ಈ ವೇಳೆ ಏಕಾಏಕಿ ನೀರು ನುಗ್ಗಿದ್ದು ಐವರು ಬಂಡೆಗಳ ನಡುವೆ ಸಿಲುಕಿದ್ದರು. ನೀರಿನಲ್ಲಿ ಕೊಚ್ಚಿಕೊಂಡು ಹೋಗಲಿದ್ದ ಐವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಮತ್ತೊಂದೆಡೆ ಬೆಳಗಾವಿಯಲ್ಲೂ ಮಳೆಯಾಗುತ್ತಿದ್ದು ಗೋಡೆ ಕುಸಿದು 3 ವರ್ಷದ ಬಾಲಕಿ ಸಾವನ್ನಪ್ಪಿದೆ. ಮೃತಳನ್ನು ಕೃತಿಕಾ ಎಂದು ಗುರುತಿಸಲಾಗಿದ್ದು ಆಕೆಯ ತಾಯಿ ಮತ್ತು ತಂಗಿ ಗಾಯಗೊಂಡಿದ್ದಾರೆ.
ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು HALನ ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್‌ಕ್ರಾಫ್ಟ್ ಮತ್ತು ಲೈಟ್ ಕಾಂಬ್ಯಾಟ್ ಏರ್‌ಕ್ರಾಫ್ಟ್ ಉತ್ಪಾದನೆಯನ್ನು ಕರ್ನಾಟಕದಿಂದ ತಮ್ಮ ರಾಜ್ಯಕ್ಕೆ ಸ್ಥಳಾಂತರಿಸಲು ಒತ್ತಾಯಿಸುತ್ತಿದ್ದಾರೆ ಎಂಬ ಮಾಧ್ಯಮ ವರದಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್, ಈ ವರದಿ ಅನುಚಿತ ಮತ್ತು ಕಳವಳಕಾರಿ ಎಂದು ಕರೆದಿದ್ದಾರೆ. ಇನ್ನು ಭಾರತದ ಬಾಹ್ಯಾಕಾಶ ಮತ್ತು ರಕ್ಷಣಾ ವಲಯಕ್ಕೆ ರಾಜ್ಯದ ಕೊಡುಗೆ ಹೆಚ್ಚಿದ್ದು ಕರ್ನಾಟಕಕ್ಕೆ ರಕ್ಷಣಾ ಕೈಗಾರಿಕಾ ಕಾರಿಡಾರ್ ನೀಡುವಂತೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಒತ್ತಾಯಿಸುತ್ತೇನೆ ಎಂದ ಸಚಿವ ಎಂಬಿ ಪಾಟೀಲ್ ತಿಳಿಸಿದರು.
Advertisement