
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ಪುಡಿ ರೌಡಿಗಳ ಅಟ್ಟಹಾಸ ವರದಿಯಾಗಿದ್ದು, ಟೀ ಅಂಗಡಿಯೊಂದರ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿ ಪೊಲೀಸರ ವಿರುದ್ಧವೇ ಅವಾಚ್ಯ ಪದ ಬಳಕೆ ಮಾಡಿರುವ ವಿಡಿಯೋ ವೈರಲ್ ಆಗುತ್ತಿದೆ.
ಬೆಂಗಳೂರಿನ ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಸ್ ಜಿ ಪಾಳ್ಯದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ಟೀ ಮಾರುವ ಅಂಗಡಿ ಮತ್ತು ಬೇಕರಿ ಮೇಲೆ ದಾಳಿ ಮಾಡಿರುವ ದುಷ್ಕರ್ಮಿಗಳು ಅಂಗಡಿಯವರ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಪೊಲೀಸರಿಗೆ ಹೇಳುತ್ತೇನೆ ಎಂದಾಗ ಪೊಲೀಸರಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾತ್ರವಲ್ಲದೇ ಅಂಗಡಿಯಲ್ಲಿ ಚೌಚೌ ಬಾಟಲಿ ತೆಗೆದುಕೊಂಡು ರಸ್ತೆಯಲ್ಲಿ ಹೊಡೆದು ಹಾಕಿದ್ದಾರೆ. ಅಲ್ಲದೆ ಬಾಡಲ್ ಚೂರು ತೆಗೆದುಕೊಂಡು ಪೊಲೀಸರು ಇದನ್ನು ಕೆಳಗೆ ಇಟ್ಟುಕೊಳ್ಳಲಿ ಎಂದು ಅವಾಚ್ಯವಾಗಿ ನಿಂದಿಸಿದ್ದಾರೆ.
ಈ ಹಿಂದೆಯೂ ಕೂಡ ಬೆಂಗಳೂರಿನಲ್ಲಿ ಇಂತಹುದೇ ಹಲವು ಘಟನೆಗಳು ನಡೆದಿದ್ದವು. ಆಗ ಪೊಲೀಸರು ಕ್ಷಿಪ್ರ ಕ್ರಮ ಕೈಗೊಂಡು ದುಷ್ಕರ್ಮಿಗಳ ಹೆಡೆಮುರಿಕಟ್ಟಿದ್ದರು.
ಜೆಡಿಎಸ್ ಕಿಡಿ
ಇನ್ನು ಇದೇ ಘಟನೆ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಕೂಡ ಕಿಡಿಕಾರಿದ್ದು, ಈ ಕುರಿತು ಎಕ್ಸ್ ನಲ್ಲಿ ವಿಡಿಯೋ ಸಮೇತ ಪೋಸ್ಟ್ ಮಾಡಿ ಸಿದ್ದರಾಮಯ್ಯ ಸರ್ಕಾರವನ್ನು ಟೀಕಿಸಿದೆ. 'ಎತ್ತ ಸಾಗಿದೆ ರಾಜ್ಯದ ಕಾನೂನು ಸುವ್ಯವಸ್ಥ?... ಸರ್ವಜನಾಂಗದ ಶಾಂತಿಯ ತೋಟವಾಗಿದ್ದ ಕರ್ನಾಟಕದಲ್ಲಿ ಈಗ ಕೊತ್ವಾಲ್ ಶಿಷ್ಯಂದಿರು ವಿಜೃಂಭಿಸುತ್ತಿದ್ದಾರೆ.
ಬೆಂಗಳೂರಿನ ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪುಡಿರೌಡಿಗಳ ಅಟ್ಟಹಾಸ ಮಿತಿಮೀರಿದೆ. ಪುಂಡರಿಗೆ ಪೊಲೀಸರು, ಕಾನೂನಿನ ಭಯವೇ ಇಲ್ಲವಾಗಿದೆ. ರಾಜಧಾನಿ ಸೇರಿದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಪಾತಳಕ್ಕೆ ಕುಸಿದಿದೆ. ಕಾಂಗ್ರೆಸ್ ಸರ್ಕಾರದ ಅರಾಜಕತೆಯಲ್ಲಿ ದಿನೇ ದಿನೇ ಸಾರ್ವಜನಿಕರಿಗೆ ರಕ್ಷಣೆ ಎಂಬುದು ಮರೀಚಿಕೆಯಾಗಿದ್ದು, ಜನರು ಆತಂಕದಲ್ಲಿ ಬದುಕುವಂತಾಗಿದೆ ಎಂದು ಟ್ವೀಟ್ ಮಾಡಿದೆ.
Advertisement