
ಬೆಂಗಳೂರು: ಸಂಚಾರಿ ಕಾವೇರಿ ಯೋಜನೆಯಡಿ ನಿಗದಿತ ದರದಲ್ಲಿ ಟ್ಯಾಂಕರ್‌ನಲ್ಲಿ ನೀರು ಪೂರೈಕೆ ಮಾಡುತ್ತಿರುವ ಬೆಂಗಳೂರು ಜಲಮಂಡಳಿ, ಮುಂದುವರಿದು ಅಪಾರ್ಟ್‌ಮೆಂಟ್‌ಗಳಿಗೂ 'ಬಲ್ಕ್ ವಾಟರ್ ಬುಕ್ಕಿಂಗ್ ಸೇವೆ' ಆರಂಭಿಸಲು ನಿರ್ಧರಿಸಿದೆ.
ಬೆಂಗಳೂರು ಜಲಮಂಡಳಿಯ ಕೆಂದ್ರ ಕಚೇರಿಯಲ್ಲಿ ಮಂಡಳಿಯ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ನೇತೃತ್ವದಲ್ಲಿ ಮಂಗಳವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಬಲ್ಕ್ ವಾಟರ್ ಬುಕ್ಕಿಂಗ್ ಸೇವೆ ನೀಡಲು ನಿರ್ಧರಿಸಲಾಗಿದೆ.
ಬೆಂಗಳೂರು ನಗರದ ಹೊರವಲಯದಲ್ಲಿರುವ ಬಹುತೇಕ ಅಪಾರ್ಟ್‌ಮೆಂಟ್‌ಗಳು ಅಂತರ್ಜಲದ ಮೇಲೆಯೇ ಹೆಚ್ಚು ಅವಲಂಬಿತವಾಗಿವೆ. ಈ ಅಪಾರ್ಟ್‌ಮೆಂಟ್‌ಗಳು ಬೇಸಿಗೆಯಲ್ಲಿ ಬೋರ್‌ವೆಲ್ ಬತ್ತಿದಾಗ ಖಾಸಗಿ ಟ್ಯಾಂಕರ್‌ಗಳಿಂದ ನೀರು ಖರೀದಿಸುತ್ತವೆ. ಹಾಗಾಗಿ, ಅಂತರ್ಜಲದ ಮೇಲಿನ ಅವಲಂಬನೆ ಕಡಿಮೆ ಮಾಡುವುದು ಮತ್ತು ಅವರಿಗೂ ಶುದ್ಧ ನೀರು ಪೂರೈಕೆ ಮಾಡುವುದು ನಮ್ಮ ಉದ್ದೇಶವಾಗಿದೆ. ಹೀಗಾಗಿ ಅವರಿಗೂ ಬಿಐಎಸ್ ಪ್ರಮಾಣೀಕೃತ ಶುದ್ಧ ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ 'ಬಲ್ಕ್ ವಾಟರ್ ಬುಕ್ಕಿಂಗ್ ವ್ಯವಸ್ಥೆ ಸೇವೆ' ಆರಂಭಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಡಾ. ರಾಮ್ ಪ್ರಸಾತ್ ಮನೋಹರ್ ಅವರು ಹೇಳಿದ್ದಾರೆ.
ಮೊದಲು ಬಂದವರಿಗೆ ಮೊದಲು ಅವಕಾಶ ಆಧಾರಿತ ಬುಕ್ಕಿಂಗ್, ಕನಿಷ್ಠ ಒಂದು ತಿಂಗಳ ಮುಂಗಡ ಪಾವತಿ ಅವಶ್ಯಕವಾಗಿದೆ. ಬಲ್ಕ್ ಬುಕ್ಕಿಂಗ್ ಮೂಲಕ ನಿರಂತರ ಸರಬರಾಜು ಖಚಿತಪಡಿಸಿಕೊಳ್ಳಬಹುದು. ಒಂದು ವರ್ಷದ ಅವಧಿಗೆ ಬುಕ್ಕಿಂಗ್ ಮಾಡುವ ವ್ಯವಸ್ಥೆಯೂ ಲಭ್ಯವಿದೆ. ಸಂಚಾರಿ ಕಾವೇರಿ ಯೋಜನೆಯು ಭಾರತದ ಮೊದಲ ತಾಂತ್ರಿಕ ವ್ಯವಸ್ಥೆಯ ಟ್ಯಾಂಕರ್ ಯೋಜನೆಯಾಗಿದ್ದು, ಜಿಪಿಎಸ್ ನಿಯಂತ್ರಣ, ಪೂರೈಕೆ ಶ್ರೇಣೀಕರಣ ಮತ್ತು ಪೂರೈಕೆ ನಿಯಂತ್ರಣ ಕೇಂದ್ರಗಳ ಮೂಲಕ ಬೆಂಗಳೂರು ನಗರದಲ್ಲಿ ಅವಶ್ಯಕ ನೀರು ಲಭ್ಯವಾಗುವಂತೆ ಮಾಡಲಾಗುತ್ತಿದೆ. ಬುಕ್ಕಿಂಗ್ ಮಾಡುವ ಮೂಲಕ ಟ್ಯಾಂಕರ್ ನೀರು ಪಡೆಯುವ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಂಚಾರಿ ಕಾವೇರಿ ಮೊಬೈಲ್ ಆ್ಯಪ್ ಹಾಗೂ ವೆಬ್‌ಸೈಟ್ ಮುಖಾಂತರ ನೀರಿನ ಬುಕ್ಕಿಂಗ್ ಮಾಡಬಹುದಾಗಿದೆ.
ಬಿಡಬ್ಲ್ಯೂಎಸ್‌ಎಸ್‌ಬಿ ಜನರ ಜಲ ಮಂಡಳಿಯಾಗಿ ರೂಪಾಂತರಗೊಳ್ಳುತ್ತಿದೆ. ಮುಂದಿನ ಪೀಳಿಗೆಗೆ ಸುರಕ್ಷಿತ ನೀರಿನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ನಾವು ಹೊಂದಿದ್ದೇವೆ. ಅಂತರ್ಜಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಈ ಯೋಜನೆಯನ್ನು ಅಪಾರ್ಟ್‌ಮೆಂಟ್‌ಗಳಿಗೂ ವಿಸ್ತರಿಸಲಾಗಿದೆ ಎಂದು ತಿಳಿಸಿದ್ದಾರೆ.
Advertisement