
ಬೆಂಗಳೂರು: ರಸ್ತೆಬದಿಯ ಪಾರ್ಕಿಂಗ್‌ನಿಂದ ನಗರದಲ್ಲಿ ಉಂಟಾಗುವ ಸಂಚಾರ ದಟ್ಟಣೆಯ ಸಮಸ್ಯೆಯನ್ನು ಪರಿಹರಿಸಲು ಟೋಯಿಂಗ್ ವ್ಯವಸ್ಥೆಯನ್ನು ಮತ್ತೆ ಆರಂಭಿಸಲು ಸರ್ಕಾರ ಮುಂದಾಗಿದೆ.
ಮಂಗಳವಾರ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್ ಅವರು, ರಸ್ತೆಬದಿಯಲ್ಲಿ ನಿಲ್ಲಿಸಲಾದ ವಾಹನಗಳು, ವಿಶೇಷವಾಗಿ ದ್ವಿಚಕ್ರ ವಾಹನಗಳು ಸಂಚಾರ ಸುಗಮ ಸಂಚಾರಕ್ಕೆ ಅಡ್ಡಿಯಾಗುವುದರಿಂದ ನಗರದಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಮಳೆಗಾಲದಲ್ಲಿ ಸಮಸ್ಯೆ ಉಲ್ಬಣಗೊಳ್ಳುತ್ತದೆ. ನಗರದ 19 ಸ್ಥಳಗಳಲ್ಲಿ ಭಾರೀ ದಟ್ಟಣೆ ಉಂಟಾಗುತ್ತದೆ, ಸಿಲ್ಕ್ ಬೋರ್ಡ್ ಮತ್ತು ಹೆಬ್ಬಾಳ ಜಂಕ್ಷನ್ ಸೇರಿದಂತೆ ಎಂಟು ಸ್ಥಳಗಳಲ್ಲಿ ಪರಿಸ್ಥಿತಿ ಕೆಟ್ಟದಾಗಿರುತ್ತದೆ. ಈ ಹಿಂದೆ, ರಸ್ತೆಬದಿಯ ಪಾರ್ಕಿಂಗ್ ಅನ್ನು ತಪ್ಪಿಸಲು, ಟೋಯಿಂಗ್ ವ್ಯವಸ್ಥೆ ಜಾರಿಯಲ್ಲಿತ್ತು. ಇದೀಗ ಮತ್ತೆ ಆ ವ್ಯವಸ್ಥೆ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಹಿಂದೆ, ಟೋಯಿಂಗ್ ಅನ್ನು ಖಾಸಗಿ ನಿರ್ವಾಹಕರ ಮೂಲಕ ನಡೆಸಲಾಗುತ್ತಿತ್ತು, ಆದರೆ, ಈ ಬಾರಿ ಅದನ್ನು ಪೊಲೀಸ್ ಇಲಾಖೆ ನಿರ್ವಹಿಸುತ್ತದೆ. ನಗರದಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಅಧಿಕಾರಿಗಳೊಂದಿಗೆ ವಿವಿಧ ಕ್ರಮಗಳ ಕುರಿತು ಚರ್ಚಿಸಿದ್ದೇನೆ ಎಂದು ತಿಳಿಸಿದರು.
ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು "ನಾವು ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕು. ಪೊಲೀಸ್ ಇಲಾಖೆ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಒಟ್ಟಾಗಿ ಕೆಲಸ ಮಾಡಿದರೆ, ಸಮಸ್ಯೆಯನ್ನು ಪರಿಹರಿಸಬಹುದು. ಸಂಚಾರ ಸಮಸ್ಯೆಗಳ ಕುರಿತು ವಿವರವಾದ ವರದಿಯನ್ನು ಒಂದು ವಾರದೊಳಗೆ ಸರ್ಕಾರಕ್ಕೆ ಸಲ್ಲಿಸುವಂತೆ ಅವರು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಲಾಗಿದೆ. "ಪೊಲೀಸರು ಈಗಾಗಲೇ ಜನದಟ್ಟಣೆ ಇರುವ ಸ್ಥಳಗಳ ಅಧ್ಯಯನ ನಡೆಸಿದ್ದಾರೆ. ಅದಕ್ಕೆ ಅನುಗುಣವಾಗಿ ಪರ್ಯಾಯ ಮಾರ್ಗಗಳು ಮತ್ತು ಮಾರ್ಗ ಬದಲಾವಣೆಗಳನ್ನು ಯೋಜಿಸಲಾಗುವುದು ಎಂದರು.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರೊಂದಿಗೆ ಸಭೆ ನಡೆಸಲಾಗುವುದು ಎಂದೂ ಹೇಳಿದರು.
ನಗರದಲ್ಲಿ ನೆಲೆಸಿರುವ ವಿದೇಶಿಗರ ಕುರಿತು ಮಾಹಿತಿ ಸಂಗ್ರಹಿಸುವಂತೆ ಸೂಚಿಸಿದ್ದೇನೆ. ಅಕ್ರಮ ವಲಸಿಗರ ಮಾಹಿತಿಯೂ ಗೊತ್ತಾಗುತ್ತದೆ. ಡ್ರಗ್ಸ್ ದಂಧೆಯನ್ನು ಹತೋಟಿಗೆ ತಂದಿದ್ದೇವೆ. ನಗರದಲ್ಲಿ ಡ್ರಗ್ಸ್ ಸಿಗುತ್ತಿದೆ ಎಂಬ ಮಾತುಗಳು ಸಾರ್ವಜನಿಕರಿಂದ ಬರುತ್ತಿವೆ. ಡ್ರಗ್ಸ್ ಚಟುವಟಿಕೆಗಳನ್ನು ಮಟ್ಟ ಹಾಕಲು ಮತ್ತಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಇದನ್ನು ನಿರ್ಲಕ್ಷ್ಯಿಸುವ ಪೊಲೀಸ್ ಅಧಿಕಾರಿಗಳನ್ನೆ ಹೊಣೆಯನ್ನಾಗಿ ಮಾಡಲಾಗುವುದು.
ಮಹಿಳೆಯರು ಮತ್ತು ಮಕ್ಕಳಾ ಸುರಕ್ಷತೆಗೆ ಸೂಕ್ತ ಕ್ರಮ ತೆಗದುಕೊಂಡಿದ್ದೇವೆ. ನಿರ್ಭಯಾ ಯೋಜನೆಯಡಿ 9 ಸಾವಿರ ಕ್ಯಾಮೆರಾಗಳನ್ನು ಅಳವಡಿಸಿದ್ದೇವೆ. ಸೇಫ್ಟಿ ಐಲ್ಯಾಂಡ್ಸ್ ಸ್ಥಾಪಿಸಲಾಗಿದೆ. ಬೆಂಗಳೂರು ಸೇಫ್ ಸಿಟಿ ಎಂದು ಸೇಫ್ ಸಿಟಿ ವರದಿ ಬಂದಿದೆ. ಬೆಂಗಳೂರು ನಗರ ಪೊಲೀಸ್ ಇಷ್ಟಕ್ಕೆ ಸಮಾದಾನ ಪಟ್ಟುಕೊಳ್ಳದೇ, ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ ಎಂದು ಹೇಳಿದರು.
ರಿಯಲ್ ಎಸ್ಟೇಟ್ ದಂಧೆಯ ಏಜೆಂಟ್‌ಗಳೊಂದಿಗೆ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಶಾಮಿಲಾಗುವುದನ್ನು ಸಹಿಸಲಾಗುವುದಿಲ್ಲ. ಅವರೊಂದಿಗೆ ತೊಡಗಿರುವುದು ಕಂಡುಬಂದರೆ, ಯಾವುದೇ ರೀತಿಯ ಮುಲಾಜಿಲ್ಲದೇ ಕೂಡಲೇ ಕ್ರಮ ಜರುಗಿಸುವಂತೆ ನಗರ ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದೇನೆ ಎಂದರು.
ರಾಜ್ಯದಾದ್ಯಂತ ಮನೆಮನೆಗೆ ಪೊಲೀಸ್ ನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಸಾರ್ವಜನಿಕರಿಗೆ ತೊಂದರೆ ಇದ್ದರೆ, ಪೊಲೀಸರ ಸಹಾಯ ಬೇಕಿದ್ದರೆ ಆಲಿಸಲಿದ್ದಾರೆ ಪೊಲೀಸರು ಶಾಲಾ-ಕಾಲೇಜುಗಳಿಗೆ ಭೇಟಿ ನೀಡಬೇಕು. ಪಾಲಕರ ಸಭೆಗಳಲ್ಲಿ ಪೊಲೀಸರು ಭಾಗವಹಿಸಬೇಕು. ಮಾದಕ ದ್ರವ್ಯಗಳಿಂದಾಗುವ ದುಷ್ಪರಿಣಾಮ, ಟ್ರಾಫಿಕ್ ನಿಯಮಗಳು ಸೇರಿದಂತೆ ಕಾನೂನಿನ ಅರಿವು ಮೂಡಿಸುವ ಕೆಲಸವಾಗಬೇಕು. ಪೊಲೀಸ್ ಬೀಟ್ ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಡೆಯಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ ಎಂದು ಹೇಳಿದರು.
Advertisement