BEd ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳೇ, ಎಚ್ಚರ! ಆಕರ್ಷಕ ಬೋರ್ಡ್‌ ನೋಡಿ ಮೋಸ ಹೋಗದಿರಿ...

ಚಾಮರಾಜಪೇಟೆಯಲ್ಲಿರುವ ಶ್ರೀ ವಿಷ್ಣು ವೊಕೇಶನಲ್ ಸ್ಟಡೀಸ್ (ಎಸ್‌ವಿವಿಎಸ್) ಎಂಬ ಸಂಸ್ಥೆ ಹಲವು ವಿದ್ಯಾರ್ಥಿಗಳಿಗೆ ವಂಚಿಸಿದ್ದು, ವಿದ್ಯಾರ್ಥಿಗಳು ಇದೀಗ ಸಂಸ್ಥೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಬಿ.ಇಡಿ. ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳೇ, ಎಚ್ಚರ...ಆಕರ್ಷಕ ಬೋರ್ಡ್‌ಗಳನ್ನು ನೋಡಿ ಮೋಸ ಹೋಗದಿರಿ. ನಗರದಲ್ಲಿ ನಕಲಿ ಸಂಸ್ಥೆಗಳು ನಾಯಿಕೊಡೆಗಳಂತೆ ತಲೆ ಎತ್ತಿದ್ದು, 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಕಲಿ ಕಾಲೇಜುಗಳ ವಂಚನೆ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಚಾಮರಾಜಪೇಟೆಯಲ್ಲಿರುವ ಶ್ರೀ ವಿಷ್ಣು ವೊಕೇಶನಲ್ ಸ್ಟಡೀಸ್ (ಎಸ್‌ವಿವಿಎಸ್) ಎಂಬ ಸಂಸ್ಥೆ ಹಲವು ವಿದ್ಯಾರ್ಥಿಗಳಿಗೆ ವಂಚಿಸಿದ್ದು, ವಿದ್ಯಾರ್ಥಿಗಳು ಇದೀಗ ಸಂಸ್ಥೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.

ಸಂಸ್ಥೆಯ ಮಾಲೀಕ ರವಿ ಬಟ್ಲಹಳ್ಳಿ, ಎಸ್‌ವಿವಿಎಸ್ ಬೆಂಗಳೂರು ವಿಶ್ವವಿದ್ಯಾಲಯದೊಂದಿಗೆ ಸಂಯೋಜನೆಗೊಂಡಿದೆ ಎಂದು ಹೇಳಿದ್ದರು. ಇದರಂತೆ ನಮ್ಮಿಂದ ನಮ್ಮ ಮೂಲ ದಾಖಲೆಗಳಾದ ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಪ್ರಮಾಣಪತ್ರಗಳನ್ನು ಮತ್ತು ರೂ. 80,000 ವರೆಗಿನ ಶುಲ್ಕವನ್ನು ಸಂಗ್ರಹಿಸಿದರು. ವಿಶ್ವವಿದ್ಯಾಲಯ ಪರೀಕ್ಷೆಗಳಿಗೆ ಹಾಜರಾಗಬಹುದು ಎಂದು ಭರವಸೆ ನೀಡಿದ್ದರು. ಆದರೆ, ನಿಗದಿತ ಬಿಇಡಿ ಪರೀಕ್ಷೆಗಳಿಗೆ ಕೇವಲ ಒಂದು ವಾರದ ಮೊದಲು ಎಸ್‌ವಿವಿಎಸ್ ಬೆಂಗಳೂರು ವಿಶ್ವವಿದ್ಯಾಲಯದೊಂದಿಗೆ ಸಂಯೋಜಿತವಾಗಿಲ್ಲ ಎಂಬ ವಿಚಾರ ನಮಗೆ ತಿಳಿದುಬಂದೆ. ಈ ಸಂಸ್ಥೆ ಯಾವುದೇ ಮಾನ್ಯತೆ ಹೊಂದಿಲ್ಲ. ನಮಗೆ ನೀಡಿರುವ ಹಾಲ್ ಟಿಕೆಟ್ ಗಳು ಅಧಿಕೃತವಲ್ಲ. ನಾವು ಯಾವ ಕಾಲೇಜಿಗೆ ಸೇರಿದವರು ಎಂಬುದೂ ನಮಗೆ ತಿಳಿಯುತ್ತಿಲ್ಲ. ಯಾವ ಕೇಂದ್ರಕ್ಕೆ ಸೇರಿದವರು ಎಂಬುದು ತಿಳಿಯುತ್ತಿಲ್ಲ ಎಂದು ವಿದ್ಯಾರ್ಥಿಗಳು ಕಣ್ಣೀರಿಟ್ಟಿದ್ದಾರೆ.

ಎರಡು ಪರೀಕ್ಷೆಗಳು ಈಗಾಗಲೇ ನಡೆದಿವೆ, ಈ ಎರಡೂ ಪರೀಕ್ಷೆಗಳನ್ನೂ ನಾವು ಬರೆದಿಲ್ಲ. ಹಾಲ್ ಟಿಕೆಟ್ ನೀಡುತ್ತೇವೆಂದು ಹೇಳಿದ್ದರು. ಆದರೆ, ನಮಗೆ ಬಂದದ್ದು ಕಾಲೇಜು ಕೋಡ್ ಅಥವಾ ವಿಶ್ವವಿದ್ಯಾಲಯದ ಮುದ್ರೆ ಇಲ್ಲದ ಸಹಿ ಮಾಡದ ಮತ್ತು ಅನಧಿಕೃತ ಹಾಲ್ ಟಿಕೆಟ್‌ಗಳು. ಈ ಬಗ್ಗೆ ಪ್ರಶ್ನಿಸಿದ್ದರೆ ಪದೇ ಪದೇ ನಮ್ಮ ಹಾದಿ ತಪ್ಪಿಸುತ್ತಿದ್ದರು.

ಸಂಗ್ರಹ ಚಿತ್ರ
ISRO ನಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚನೆ: ಸಂತ್ರಸ್ತೆ ವಿರುದ್ಧವೇ FIR ದಾಖಲಿಸಲು ಹೈಕೋರ್ಟ್ ಸೂಚನೆ!

ನಾವು ಪರೀಕ್ಷೆಗಳ ಬಗ್ಗೆ ಕೇಳಿದಾಗಲೆಲ್ಲಾ ವಿಶ್ವವಿದ್ಯಾಲಯವನ್ನು ದೂಷಿಸುತ್ತಿದ್ದರು. ವಿಶ್ವವಿದ್ಯಾಲಯವನ್ನು ಸಂಪರ್ಕಿಸಿದಾಗ ಅವರಿಗೆ ಶ್ರೀ ವಿಷ್ಣು ವೊಕೇಶನಲ್ ಸ್ಟಡೀಸ್ ಬಗ್ಗೆ ಮಾಹಿತಿಯೇ ಇರಲಿಲ್ಲ. ಇದೀಗ ಸಂಸ್ಥೆ ನಮ್ಮ ಮೂಲ ದಾಖಲೆಗಳನ್ನು ಹಿಂತಿರುಗಿಸಲು ನಿರಾಕರಿಸುತ್ತಿದೆ. 110ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಂಚಿಸಿದ್ದಾರೆ ಎಂದು ವಿದ್ಯಾರ್ಥಿಯಾಗಿರುವ ಸಿತಾರಾ ಎಂಬುವವರು ಹೇಳಿದ್ದಾರೆ.

ನಮ್ಮಲ್ಲಿ ಕೆಲವರು ಕಳೆದ ವರ್ಷ ಸಂಸ್ಥೆಯಲ್ಲಿ ದಾಖಲಾತಿ ಪಡೆದಿದ್ದರು, ಆದರೆ, ತಾಂತ್ರಿಕ ಸಮಸ್ಯೆಗಳು ಮತ್ತು ನಮ್ಮ ದಾಖಲೆಗಳಲ್ಲಿನ ಸಮಸ್ಯೆಗಳನ್ನು ಉಲ್ಲೇಖಿಸಿ ನೆಪಗಳನ್ನು ನೀಡುತ್ತಲೇ ಇದ್ದರು. ನಮ್ಮನ್ನು ನಂಬಿಸಲು ಸಾಕಷ್ಟು ಪ್ರಯತ್ನ ನಡೆಸಿದರು. ಈಗಾಗೇ ಒಂದು ಶೈಕ್ಷಣಿಕ ವರ್ಷ ನಾಶವಾಗಿದೆ. ಇದೀಗ ಮತ್ತೊಂದು ವರ್ಷವೂ ಹಾಳಾಯಿತು ಎಂದು ಮತ್ತೊಬ್ಬ ಸಂತ್ರಸ್ತ ವಿದ್ಯಾರ್ಥಿನಿ ಪ್ರಿಯಾ ಅವರು ಹೇಳಿದ್ದಾರೆ.

ಇದೀಗ ವಂಚನೆಗೊಳಗಾದ ವಿದ್ಯಾರ್ಥಿಗಳು ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಕ್ರಮಕ್ಕೆ ಆಗ್ರಹಿಸಿದ್ದಾರೆ.

ಸಂಸ್ಥೆಯ ಮಾಲೀಕ ಪೊಲೀಸರ ಕರೆಗಳಿಗೂ ಪ್ರತಿಕ್ರಿಯಿಸಿಲ್ಲ. ಮುಂದಿನ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ನಮಗೆ ಭರವಸೆ ನೀಡಿದ್ದಾರೆ ವಿದ್ಯಾರ್ಥಿಗಲು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com