
ಬೆಂಗಳೂರು: ಬೆಂಗಳೂರಿನ ಜನತೆಯ ಮೇಲೆ ಪದೇ ಪದೇ ಬೆಲೆ ಏರಿಕೆಯ ಭಾರ ಹೊರಿಸಿ, ಸಾಮಾನ್ಯ ಜನರ ಬದುಕನ್ನು ರಾಜ್ಯ ಕಾಂಗ್ರೆಸ್ ಸರ್ಕಾರದ ಸಂಕಷ್ಟಕ್ಕೆ ತಳ್ಳುತ್ತಿದೆ ಎಂದು ಬಿಜೆಪಿ ಕಿಡಿಕಾರಿದ್ದು, ಕೂಡಲೇ ಕಸದ ಸೆಸ್ ಜೊತೆಗೆ ಬಳಕೆದಾರರ ಶುಲ್ಕ ವಿಧಿಸಿರುವ ನಿರ್ಧಾರವನ್ನು ಹಿಂಪಡೆಯಬೇಕೆಂದು ಬುಧವಾರ ಆಗ್ರಹಿಸಿದೆ.
ಬುಧವಾರ ವಿಧಾನಮಂಡಲದ ಉಭಯ ಸದನಗಳ ಪ್ರತಿಪಕ್ಷದ ನಾಯಕರಾದ ಆರ್.ಅಶೋಕ್ ಮತ್ತು ಛಲವಾದಿ ನಾರಾಯಣಸ್ವಾಮಿ ನೇತೃತ್ವದ ನಿಯೋಗವು ಬಿಬಿಎಂಪಿ ಆಡಳಿತಾಧಿಕಾರಿ ತುಷಾರ್‌ಗಿರಿನಾಥ್ ಹಾಗೂ ಮುಖ್ಯ ಆಯುಕ್ತ ಎಂ.ಮಹೇಶ್ವರರಾವ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್ ಅವರು, ಬೆಂಗಳೂರಿನ ಜನರ ಮೇಲೆ ಕಾಂಗ್ರೆಸ್ ಸರ್ಕಾರ ಟನ್ನುಗಟ್ಟಲೆ ತೆರಿಗೆಯ ಭಾರವನ್ನು ಹೇರಿದೆ. ಈಗ ಕಸದಿಂದ ರಸ ತೆಗೆಯುವ ಸ್ಕೀಮ್ ಮಾಡಿದ್ದಾರೆ. ಇಡೀ ದೇಶದಲ್ಲಿ ಅತಿ ಹೆಚ್ಚು ಕಸದ ತೆರಿಗೆಯನ್ನು ಕಾಂಗ್ರೆಸ್ ವಿಧಿಸಿದೆ. ಕೆಂಪೇಗೌಡರು ನಾಡು ಕಟ್ಟಿದ ನಾಡಪ್ರಭು ಎಂಬ ಹೆಸರು ಪಡೆದಿದ್ದರೆ, ಕಾಂಗ್ರೆಸ್ ನಾಯಕರು ನಾಡನ್ನು ಹಾಳು ಮಾಡಿದವರು ಎಂಬ ಬಿರುದು ಪಡೆದಿದ್ದಾರೆ ಎಂದು ಟೀಕಿಸಿದರು.
ಈ ಮೊದಲು ನಗರದಲ್ಲಿ ಸೆಸ್ ಇತ್ತು. ಈಗ ಇದರ ಜೊತೆಗೆ ಬಳಕೆದಾರರ ಶುಲ್ಕ ವಿಧಿಸಿದ್ದಾರೆ. ಸೆಸ್‌ನಿಂದಲೇ ಸುಮಾರು 7250 ಕೋಟಿ ಸಂಗ್ರಹವಾಗುತ್ತಿದೆ. ಕಸದ ಟೆಂಡರ್‌ನ ಮೌಲ್ಯವೇ ರೂ.147 ಕೋಟಿ ಆಗಿದ್ದು, ಜನರಿಂದ ಅತ್ಯಧಿಕ ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಇನ್ನು ಬಳಕೆದಾರರ ಶುಲ್ಕವೂ ಸೇರಿದರೆ ರೂ.500ರಿಂದ 600 ಕೋಟಿ ಸಂಗ್ರಹವಾಗುತ್ತದೆ ಎಂದರು.
ಎರಡೂ ಶುಲ್ಕಗಳಿಂದ ಮನೆಗಳ ಬಾಡಿಗೆ ದರ ಹೆಚ್ಚಲಿದೆ. ವಾಣಿಜ್ಯ ಕಟ್ಟಡ, ಕಲ್ಯಾಣ ಮಂಟಪ, ಆಸ್ಪತ್ರೆ, ಶಾಲೆ, ಹೋಟೆಲ್‌ಗಳ ದರ ಹೆಚ್ಚಲಿದೆ. ಇದು ಕೇಂದ್ರ ಸರ್ಕಾರದ ಕಾಯ್ದೆ ಎಂದು ನೆಪ ಹೇಳುತ್ತಾರೆ. 2 ಬಗೆಯ ಶುಲ್ಕ ವಿಧಿಸಬೇಕೆಂದು ಕೇಂದ್ರ ಸರ್ಕಾರ ಎಲ್ಲೂ ಹೇಳಿಲ್ಲ ಎಂದರು.
ಸರ್ಕಾರ ಕೂಡಲೇ ಬೆಂಗಳೂರಿನ ಶಾಸಕರ ಸಭೆ ಕರೆದು ಈ ಬಗ್ಗೆ ಚರ್ಚಿಸಬೇಕು. ಹಿಂದೆ ಚದರ ಅಡಿಗೆ ತಕ್ಕಂತೆ ಕಸದ ಸೆಸ್ ವಿಧಿಸಲಾಗುತ್ತಿತ್ತು. ಅದೇ ಮಾದರಿ ಯನ್ನು ಈಗ ಮತ್ತೆ ತರಬೇಕು. ಬೇರೆ ನಗರಗಳಲ್ಲಿ ಇಷ್ಟು ಶುಲ್ಕವಿಲ್ಲ, ಕಾಂಗ್ರೆಸ್‌ನ 5 ಗ್ಯಾರಂಟಿಗಳಿಗಾಗಿ ನಗರದ ಜನರಿಂದ ಇಷ್ಟು ತೆರಿಗೆ ವಸೂಲಿ ಮಾಡಲಾಗುತ್ತಿದ್ದು, ಈ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಇದೇ ವೇಳೆ ಒತ್ತಾಯಿಸಿದರು.
ಬೆಂಗಳೂರನ್ನು ದುಬೈಗಿಂತ ಹೆಚ್ಚು ದುಬಾರಿಯನ್ನಾಗಿ ಮಾಡಲು ಸಿದ್ದರಾಮಯ್ಯ ಕಾರಣ. ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವಾಸ್ತವಿಕ ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆ. ಇವರಿಬ್ಬರ ಕೆಟ್ಟ ನಿರ್ವಹಣೆಯಿಂದಾಗಿ ನಾಗರಿಕರು ಜರ್ಜರಿತರಾಗಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು ರಚಿಸಿ ನಗರವನ್ನು ಆರು ಪುರಸಭೆಗಳಾಗಿ ವಿಂಗಡಿಸುವ ಮೂಲಕ, ಸರ್ಕಾರವು ಬೆಂಗಳೂರಿನ ಮೂಲ ನಾಗರಿಕರ ಹಕ್ಕುಗಳನ್ನು ಕಸಿದುಕೊಳ್ಳುವ ಹೆಜ್ಜೆ ಇಟ್ಟಿದೆ. ಕಳೆದ ಎರಡು ವರ್ಷಗಳಲ್ಲಿ, ಡಿಸಿಎಂ ನಗರದಲ್ಲಿ ಒಂದೇ ಒಂದು ಮೂಲಸೌಕರ್ಯ ಯೋಜನೆಯನ್ನು ಜಾರಿಗೆ ತಂದಿಲ್ಲ. ಇದೀಗ ನಗರ ವಾಸಿಗಳಿಗೆ ಬ್ರ್ಯಾಂಡ್ ಬೆಂಗಳೂರು ಹಗಲುಗನಸೆಂಬ ಭಾಸವಾಗುತ್ತಿದೆ ಎಂದು ಕಿಡಿಕಾರಿದರು.
Advertisement