
ಬೆಂಗಳೂರು: ಪಶ್ಚಿಮ ಬಂಗಾಳದಲ್ಲಿ 2024ರ ಆಗಸ್ಟ್ 28ರಂದು ನಡೆದಿದ್ದ ಗುಂಪು ಘರ್ಷಣೆ ವೇಳೆ, ಅಲ್ಲಿನ ಬಿಜೆಪಿ ಮುಖಂಡ ಪ್ರಿಯಾಂಗು ಪಾಂಡೆ ಅವರ ಮೇಲೆ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಮೋಹಿತ್ ಮಹಾತೋ ಅಲಿಯಾಸ್ ಸಾಹಿಲ್ ಎಂಬಾತನನ್ನು ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು, ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಯಿತು. ಆರೋಪಿಯಿಂದ ಮೊಬೈಲ್ ಸೇರಿ ವಿವಿಧ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ತನಿಖೆ ಮುಂದುವರಿದಿದೆ ಎಂದು ಎನ್‌ಐಎ ತಿಳಿಸಿದೆ. ಮಾಜಿ ಸಂಸದ ಅರ್ಜುನ್ ಸಿಂಗ್ ಅವರ ನಿವಾಸಕ್ಕೆ ಪ್ರಿಯಾಂಗು ಪಾಂಡೆ ಮತ್ತು ಅವರ ಬೆಂಬಲಿಗರು ತೆರಳುತ್ತಿದ್ದ ವೇಳೆ ಗುಂಪೊಂದು ದಾಳಿ ನಡೆಸಿ ಹಲ್ಲೆ ಮಾಡಿತ್ತು. ಈ ಪ್ರಕರಣದಲ್ಲಿ ಇದುವರೆಗೂ 17 ಆರೋಪಿಗಳನ್ನು ಬಂಧಿಸಲಾಗಿದೆ.
ಆರಂಭದಲ್ಲಿ ಪ್ರಕರಣದ ತನಿಖೆಯನ್ನು ಪಶ್ಚಿಮ ಬಂಗಾಳದ ಸ್ಥಳೀಯ ಪೊಲೀಸರೇ ನಡೆಸಿ 12 ಮಂದಿಯನ್ನು ಬಂಧಿಸಿದ್ದರು. ನಂತರ ಪ್ರಕರಣವನ್ನು ಎನ್‌ಐಎಗೆ ವರ್ಗಾವಣೆ ಮಾಡಲಾಗಿತ್ತು. ಎನ್‌ಐಎ ಅಧಿಕಾರಿಗಳು ಐವರನ್ನು ಬಂಧಿಸಿದ್ದರು.
ಕಳೆದ ನವೆಂಬರ್‌ನಲ್ಲಿ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವರ್ಗಾವಣೆ ಮಾಡಲಾಗಿತ್ತು. ಪ್ರಕರಣದಲ್ಲಿ ಪಶ್ಚಿಮ ಬಂಗಾಳದ ನಿವಾಸಿಯಾದ ಸಾಹಿಲ್‌ನ ಪಿತೂರಿ ಇರುವುದು ತನಿಖೆಯಿಂದ ಗೊತ್ತಾಗಿತ್ತು. ಆತನನ್ನು ಬುಧವಾರ ಬೆಳಿಗ್ಗೆ ಬೆಂಗಳೂರಿನ ಸ್ಥಳವೊಂದರಲ್ಲಿ ವಶಕ್ಕೆ ಪಡೆದು ಬಂಧಿಸಲಾಯಿತು. ಪ್ರಕರಣದಲ್ಲಿ ಇದುವರೆಗೂ 14 ಆರೋಪಿಗಳ ವಿರುದ್ಧ ಎನ್‌ಐಎ ನ್ಯಾಯಾಲಯಕ್ಕೆ ಮೂರು ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ’ ಎಂದು ಎನ್‌ಐಎ ತಿಳಿಸಿದೆ.
Advertisement