ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಭೂಕುಸಿತ ಸಂಭವಿಸಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುರುವಾರ ರಾತ್ರಿ, ಮಂಗಳೂರು ಸಮೀಪದ ಮಾಂಟೆಪದವು ಕೋಡಿಯಲ್ಲಿ ಭಾರೀ ಮಳೆಗೆ ಎರಡು ಮನೆಗಳ ಮೇಲೆ ಗುಡ್ಡ ಕುಸಿದಿದ್ದು ವೃದ್ಧೆ ಪ್ರೇಮಾ ಪೂಜಾರಿ, ಮೊಮ್ಮಕ್ಕಳಾದ ಆರ್ಯನ್ ಮತ್ತು ಆರುಷ್ ಮೃತಪಟ್ಟಿದ್ದಾರೆ. ಒಬ್ಬ ಮಹಿಳೆ ಮತ್ತು ಆಕೆಯ ಮಗುವನ್ನು ಅವಶೇಷಗಳಿಂದ ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳೂರಿನ ದೇರಳಕಟ್ಟೆಯಲ್ಲಿ ಮನೆಯ ಮೇಲೆ ಕಾಂಪೌಂಡ್ ಗೋಡೆ ಕುಸಿದು ಆರು ವರ್ಷದ ಬಾಲಕಿ ಫಾತಿಮಾ ಸಾವನ್ನಪ್ಪಿದ್ದಾಳೆ. ಈಮಧ್ಯೆ, ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದ್ದು ಮೀನುಗಾರಿಕೆಗೆ ನಿರ್ಬಂಧ ಹೇರಲಾಗಿದೆ. ಹೀಗಿದ್ದರು ಸಮುದ್ರಕ್ಕೆ ಇಳಿದಿದ್ದ ತೋಟಬೆಂಗ್ರೆ ನಿವಾಸಿಗಳಾದ ಯಶವಂತ್, ಕಮಲಾಕ್ಷ ಸಮುದ್ರಪಾಲಾಗಿದ್ದಾರೆ.
ಕಳೆದ 125 ವರ್ಷಗಳಲ್ಲಿ ಮೊದಲ ಬಾರಿಗೆ ಮೇ ತಿಂಗಳಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, 28 ಜಿಲ್ಲೆಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಹೇಳಿದ್ದಾರೆ. ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಎಲ್ಲಾ ಜಿಲ್ಲಾ ಪಂಚಾಯತ್‌ಗಳ ಸಿಇಒಗಳೊಂದಿಗೆ ನಡೆದ ಪರಿಶೀಲನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ತಕ್ಷಣ ಭೇಟಿ ನೀಡಿ, ಸಂತ್ರಸ್ತರಿಗೆ ಅಗತ್ಯ ಪರಿಹಾರವನ್ನು ನೀಡುವಂತೆ ಕೇಳಿಕೊಂಡರು. "ಮಳೆ ಹಾನಿಗೆ ಪರಿಹಾರ ನೀಡಲು ಯಾವುದೇ ಹಣದ ಕೊರತೆಯಿಲ್ಲ. ಜಿಲ್ಲೆಗಳಲ್ಲಿ ಎಸ್‌ಡಿಆರ್‌ಎಫ್ ಅಡಿಯಲ್ಲಿ 1,000 ಕೋಟಿ ರೂ.ಗಳಿಗೂ ಹೆಚ್ಚು ಲಭ್ಯವಿದೆ" ಎಂದು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ತಿಳಿಸಿದರು. ಭಾರೀ ಮಳೆಯಿಂದ ಮನೆಗಳಿಗೆ ಹಾನಿಯಾದರೆ ಪರಿಹಾರ ನೀಡಲು ಈಗಾಗಲೇ ಮಾರ್ಗಸೂಚಿಗಳನ್ನು ನೀಡಲಾಗಿದೆ. ತಕ್ಷಣ ಪರಿಹಾರ ನೀಡಬೇಕು ಎಂದು ಸಿಎಂ ಸೂಚನೆ ನೀಡಿದ್ದಾರೆ. ಇದೇ ವೇಳೆ, ಕರ್ನಾಟಕದಾದ್ಯಂತ ಪ್ರಮುಖ ಅಭಿವೃದ್ಧಿ ಕಾರ್ಯಗಳ ಮೇಲ್ವಿಚಾರಣೆಗಾಗಿ ರಿಯಲ್-ಟೈಮ್, ಸಂಯೋಜಿತ ಒಳನೋಟ ಒದಗಿಸುವ ವೇದಿಕೆಯಾದ 'ಸಿಎಂ ಡ್ಯಾಶ್‌ಬೋರ್ಡ್'ಗೆ ಸಿದ್ದರಾಮಯ್ಯ ಚಾಲನೆ ನೀಡಿದರು.
ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡದ ಖ್ಯಾತ ಸಾಹಿತಿ ಡಾ. ಎಚ್ ಎಸ್ ವೆಂಕಟೇಶ ಮೂರ್ತಿ ಬೆಂಗಳೂರಿನ ಕೆಂಗೇರಿಯ ಖಾಸಗಿ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಕನ್ನಡ ಸಾಹಿತ್ಯ ಲೋಕದಲ್ಲಿ ಎಚ್ಎಸ್ ವಿ ಎಂದೇ ಖ್ಯಾತರಾಗಿದ್ದ 80 ವರ್ಷದ ವೆಂಕಟೇಶಮೂರ್ತಿ ಅವರು, ಕವಿ, ನಾಟಕಕಾರ, ವಿಮರ್ಶಕ ಮತ್ತು ಪ್ರಾಧ್ಯಾಪಕರಾಗಿ ದುಡಿದಿದ್ದಾರೆ. ವೆಂಕಟೇಶ ಮೂರ್ತಿ ಅವರು ನವೋದಯ ಕಾಲದ ಬರಹಗಾರರು ಮತ್ತು ಭಾವಗೀತೆ ಕವಿಯಾಗಿದ್ದವರು. 2020ರ ಹೊತ್ತಿಗೆ ಕನ್ನಡದಲ್ಲಿ 100ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅವರ "ಹೂವಿ" ನಾಟಕವನ್ನು ಭಾರತದಲ್ಲಿ ICSE ಶೈಕ್ಷಣಿಕ ಮಂಡಳಿಯು 9 ನೇ ತರಗತಿಯ ವಿದ್ಯಾರ್ಥಿಗಳಿಗೆ ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕವಾಗಿ ಗುರುತಿಸಿದೆ.
ತಮಿಳಿನಿಂದ ಕನ್ನಡ ಹುಟ್ಟಿತು ಎಂಬ ನಟ ಕಮಲ್ ಹಾಸನ್ ಹೇಳಿಕೆ ವಿವಾದ ಸ್ವರೂಪ ಪಡೆದುಕೊಂಡಿದ್ದು, ಕ್ಷಮೆಯಾಚನೆಗೆ ಕನ್ನಡಿಗರು ಪಟ್ಟು ಹಿಡಿದಿದ್ದಾರೆ. ಆದರೆ ತಪ್ಪಿಲ್ಲದಿದ್ದಾಗ ಕ್ಷಮೆಯಾಚಿಸುವುದಿಲ್ಲ ಎಂದು ಕಮಲ್ ಹಾಸನ್ ಪುನರುಚ್ಛರಿಸಿದ್ದಾರೆ. ಚೆನ್ನೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕರ್ನಾಟಕ, ಆಂಧ್ರ ಪ್ರದೇಶ ಮತ್ತು ಕೇರಳದ ಮೇಲಿನ ನನ್ನ ಪ್ರೀತಿ ನಿಜ. ಕುತಂತ್ರ ಹೊಂದಿರುವವರನ್ನು ಹೊರತುಪಡಿಸಿ ಯಾರೂ ಈ ಪ್ರೀತಿಯನ್ನು ಅನುಮಾನಿಸುವುದಿಲ್ಲ. ನನ್ನಿಂದ ತಪ್ಪಾಗಿದ್ದರೆ, ನಾನು ಕ್ಷಮೆಯಾಚಿಸುತ್ತೇನೆ, ತಪ್ಪಿಲ್ಲ ಎಂದಾಗ ಕ್ಷಮೆಯಾಚಿಸಲ್ಲ ಎಂದು ಹೇಳಿದ್ದಾರೆ. ಮತ್ತೊಂದೆಡೆ, ವಿವಾದಕ್ಕೆ ಸಂಬಂಧಿಸಿದಂತೆ ಬಸವೇಶ್ವರನಗರದ ಪವಿತ್ರ ಪ್ಯಾರಡೈಸ್ ವೃತ್ತದ ಬಳಿ ಕಮಲ್ ಹಾಸನ್ ಪ್ರತಿಕೃತಿ ದಹಿಸಿದ ಆರೋಪದ ಮೇಲೆ ನಮ್ಮ ಕರುನಾಡ ಯುವ ಸೇನೆಯ ಅಧ್ಯಕ್ಷ ರವಿಕುಮಾರ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಅಪ್ರಾಪ್ತ ಬಾಲಕಿಯ ಅಪಹರಣ ಮತ್ತು ಅತ್ಯಾಚಾರ ಆರೋಪದ ಮೇಲೆ ಸ್ವಯಂ ಘೋಷಿತ ಮಠಾಧೀಶ ಲೋಕೇಶ್ವರ ಸ್ವಾಮಿಯನ್ನು ಬಂಧಿಸಲಾಗಿದ್ದು ಇದೀಗ ರಾಯ್‌ಬಾಗ್ ತಾಲ್ಲೂಕು ಆಡಳಿತದ ಅಧಿಕಾರಿಗಳು ರಾತ್ರೋರಾತ್ರಿ ಕಾರ್ಯಾಚರಣೆ ನಡೆಸಿ ಮಠಾಧೀಶರ ಅಕ್ರಮ ಆಶ್ರಮವನ್ನು ಕೆಡವಿದ್ದಾರೆ. ಮೇಖಳಿ ಗ್ರಾಮದ ಸರ್ವೇ ನಂ. 225ರಲ್ಲಿ ಸರ್ಕಾರದ 8 ಎಕರೆ ಗೋಮಾಳ ಜಾಗವನ್ನ ಅತಿಕ್ರಮಣ ಮಾಡಿಕೊಂಡು 8 ವರ್ಷಗಳ ಹಿಂದೆ ಲೋಕೇಶ್ವರ ಸ್ವಾಮೀಜಿ ಅಕ್ರಮವಾಗಿ ಮಠ ನಿರ್ಮಿಸಿಕೊಂಡಿದ್ದರ ಕುರಿತು ದೂರು ಕೇಳಿ ಬಂದಿತ್ತು. ಇದರ ಕುರಿತು ಪರಿಶೀಲನೆ ನಡೆಸಿದ ರಾಯಬಾಗ ತಹಶಿಲ್ದಾರರ ಮಠ ತೆರವುಗೊಳಿಸುವಂತೆ ಕಳೆದ ವಾರ ನೋಟಿಸ್ ನೀಡಿದ್ದರು.
Advertisement