
ಬೆಂಗಳೂರು: ಈಜೀಪುರ ಮೇಲ್ಸೇತುವೆ ನಿರ್ಮಾಣಕ್ಕೆ ಅಡ್ಡಿಯಾಗಿರುವ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಶುಕ್ರವಾರ ಸೂಚನೆ ನೀಡಿದ್ದಾರೆ.
ಶುಕ್ರವಾರ ಡೈರಿ ವೃತ್ತದಿಂದ ಕಾಲ್ನಡಿಗೆ ಮೂಲಕ ತೆರಳಿ ಪರಿಶೀಲನೆ ನಡೆಸಿದ ಅವರು, ಈಜೀಪುರ ಮೇಲೇತುವೆ ಕಾಮಗಾರಿಗೆ ವೇಗ ನೀಡಿ ತ್ವರಿತವಾಗಿ ಪೂರ್ಣಗೊಳಿಸಿ ಸಾರ್ವಜನಿಕರ ಸೇವೆಗೆ ಅನುವು ಮಾಡಿಕೊಡಲು ಗುತ್ತಿಗೆದಾರರಿಗೆ ಸೂಚಿಸಿದರು.
ಸೆಂಟ್ ಜಾನ್ಸ್ ಬಳಿ ರಾಂಪ್ ನಿರ್ಮಾಣಕ್ಕೆ ಅಗತ್ಯವಿರುವ ಭೂಸ್ವಾಧೀನಕ್ಕೆ ಸಂಬಂಧಿಸಿದವರೊಂದಿಗೆ ಸಭೆ ನಡೆಸಿ ಕೂಡಲೇ ಕಾಮಗಾರಿ ಆರಂಭಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಇದೇ ವೇಳೆ ಕಾಮಗಾರಿ ಸ್ಥಳದ ರಸ್ತೆಯನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ರಸ್ತೆಯ ಎರಡೂ ಬದಿಯ ಪಾದಚಾರಿ ಮಾರ್ಗಗಳ ದುರಸ್ತಿ, ಮಳೆ ನೀರು ಚರಂಡಿಗಳಿಗೆ ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಲು ಗುತ್ತಿಗೆದಾರರಿಗೆ ಸೂಚಿಸಿದರು.
ಇದೇ ವೇಳೆ ಮಡಿವಾಳ ಬಸ್ ಪಿಕ್-ಅಪ್ ಪಾಯಿಂಟ್ ಬಳಿಯ ರಸ್ತೆಬದಿಯಲ್ಲಿ, ಹೆಚ್ಚಿನ ಪ್ರಮಾಣದಲ್ಲಿ ಕಸ ಸುರಿಯಲಾಗುತ್ತಿದ್ದು, ಈ ಪ್ರದೇಶದ ಪೌರಕಾರ್ಮಿಕರು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಸ್ವಚ್ಛಗೊಳಿಸಲು ಪ್ರಾರಂಭಿಸಬೇಕು ಎಂದು ಆದೇಶಿಸಿದರು.
ಇದು ಹೆಚ್ಚು ವಾಹನ ದಟ್ಟಣೆ ಇರುವ ಪ್ರದೇಶವಾಗಿರುವುದರಿಂದ, ಅನೇಕ ಬಸ್‌ಗಳು ನಿಲ್ಲುವುದರಿಂದ, ನಿರಂತರ ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದರು.
ಬಳಿಕ ಮಡಿವಾಳ ಅಂಡರ್‌ಪಾಸ್‌ನ ಮೇಲಿನ ಜಂಕ್ಷನ್‌ನಲ್ಲಿ, ಪಾದಚಾರಿ ಮಾರ್ಗಗಳು ಮತ್ತು ರಸ್ತೆ ಮೂಲಸೌಕರ್ಯಗಳನ್ನು ನವೀಕರಿಸುವುದು ಸೇರಿದಂತೆ ಸಮಗ್ರ ಅಭಿವೃದ್ಧಿಯನ್ನು ಕೈಗೊಳ್ಳಲು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಂಕ್ಷನ್‌ನಲ್ಲಿರುವ ಪೊಲೀಸ್ ಹೊರಠಾಣೆ ಪಾದಚಾರಿಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಎಂದು ವರದಿಯಾಗಿದೆ ಇದನ್ನು ತಕ್ಷಣವೇ ಸರಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಬಳಿಕ ಆಯುಕ್ತರು ಅಧಿಕಾರಿಗಳೊಂದಿಗೆ, ಡಬಲ್ ರಸ್ತೆಯ ಡೈರಿ ಸರ್ಕಲ್ ಬಳಿಯ ಕ್ರೈಸ್ಟ್ ಕಾಲೇಜಿನಿಂದ ಸೇಂಟ್ ಜಾನ್ಸ್ ಕಾಲೇಜು ಜಂಕ್ಷನ್, ಮಡಿವಾಳ ಅಂಡರ್‌ಪಾಸ್, ಕೋರಮಂಗಲ 100 ಅಡಿ ರಸ್ತೆ, ಕೇಂದ್ರೀಯ ಸದನ, ಈಜಿಪುರ ಫ್ಲೈಓವರ್ ರಸ್ತೆ ಮತ್ತು ಸೋನಿ ಜಂಕ್ಷನ್ ವರೆಗೆ ಪರಿಶೀಲನೆ ನಡೆಸಿದರು.
ರಸ್ತೆಗಳು ಮತ್ತು ಪಾದಚಾರಿ ಮಾರ್ಗಗಳ ಸ್ಥಿತಿಯನ್ನು ಪರಿಶೀಲಿಸಿದರು. ಬಳಿಕ ಸೂಕ್ತ ನಿರ್ವಹಣೆ ಮತ್ತು ಸುಧಾರಿತ ಮೂಲಸೌಕರ್ಯಗಳನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ವಲಯ ಆಯುಕ್ತರಾದ ದಿಗ್ವಿಜಯ್ ಬೋಡ್ಕೆ, ಮುಖ್ಯ ಎಂಜಿನಿಯರ್‌ಗಳಾದ ಡಾ. ರಾಘವೇಂದ್ರ ಪ್ರಸಾದ್, ರಾಜೇಶ್ ಮತ್ತು ಇತರ ಕಾರ್ಯನಿರ್ವಾಹಕ ಎಂಜಿನಿಯರ್‌ಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
Advertisement