ತಂಬಾಕು ಖರೀದಿಗೆ ಕಾನೂನುಬದ್ಧ ವಯಸ್ಸಿನ ಮಿತಿ 18 ರಿಂದ 21ಕ್ಕೆ ಏರಿಕೆ; ಹುಕ್ಕಾ ಬಾರ್‌ಗಳಿಗೆ ನಿಷೇಧ, ದಂಡ ಹೆಚ್ಚಳ!

ಯಾವುದೇ ಶಿಕ್ಷಣ ಸಂಸ್ಥೆಯ 100 ಮೀಟರ್ ಸುತ್ತಳತೆಯೊಳಗಿನ ಪ್ರದೇಶದೊಳಗೆ, ಬಿಡಿಯಾಗಿ ಅಥವಾ ಒಂಟಿ ಕಡ್ಡಿಯಾಗಿ ಸಿಗರೇಟ್ ಮಾರಾಟವನ್ನು ನಿಷೇಧಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಹುಕ್ಕಾ ಬಾರ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸಿರುವ ರಾಜ್ಯ ಸರ್ಕಾರ ತಂಬಾಕು ಉತ್ಪನ್ನಗಳನ್ನು ಖರೀದಿಸುವ ಕಾನೂನುಬದ್ಧ ವಯಸ್ಸನ್ನು 18 ರಿಂದ 21 ವರ್ಷಕ್ಕೆ ಏರಿಕೆ ಮಾಡಿದೆ.

ಸಿಗರೇಟುಗಳ ಮತ್ತು ಇತರ ತಂಬಾಕು ಉತ್ಪನ್ನಗಳ (ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ ಉತ್ಪಾದನೆ, ಸರಬರಾಜು ಮತ್ತು ವಿತರಣೆಯ ವಿನಿಯಮ) (ಕರ್ನಾಟಕ ತಿದ್ದುಪಡಿ) ಅಧಿನಿಯಮ, 2024ಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ. ಈ ಮಸೂದೆ ಫೆಬ್ರವರಿ 2024ರಂದು ಉಭಯ ಸದನಗಳಲ್ಲಿ ಅಂಗೀಕಾರವಾಗಿತ್ತು. 2003ರ ಕೇಂದ್ರ ಕಾಯ್ದೆಯನ್ನು ಕರ್ನಾಟಕ ರಾಜ್ಯಕ್ಕೆ ಅನ್ವಯಿಸಿ ತಿದ್ದುಪಡಿ ಮಾಡಲಾಗಿದೆ. ಕೇಂದ್ರ ಅಧಿನಿಯಮಕ್ಕೆ ತಿದ್ದುಪಡಿ ತಂದಿರುವುದರಿಂದ ಈ ಮಸೂದೆಯನ್ನು ರಾಷ್ಟ್ರಪತಿಗಳ ಒಪ್ಪಿಗೆಗಾಗಿ ಕಳುಹಿಸಿ ಕೊಡಲಾಗಿತ್ತು.

ರಾಷ್ಟ್ರಪತಿಗಳ ಅಂಕಿತದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಇನ್ನು ಮುಂದೆ ರಾಜ್ಯದಲ್ಲಿ 21 ವಯೋಮಿತಿ ಒಳಗಿನ ವ್ಯಕ್ತಿಗಳಿಗೆ ಸಿಗರೇಟು, ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವಂತಿಲ್ಲ.‌ ಪ್ರಸ್ತುತ ತಂಬಾಕು ಉತ್ಪನ್ನಗಳನ್ನು ಖರೀದಿಸುವುದಕ್ಕೆ ಕನಿಷ್ಠ ವಯೋಮಾನ 18 ಇದೆ. ಇದೀಗ ಈ ವಯೋಮಾನವನ್ನು 21 ವರ್ಷಕ್ಕೆ ಏರಿಕೆ ಮಾಡಲಾಗಿದೆ.

ಯಾವುದೇ ಶಿಕ್ಷಣ ಸಂಸ್ಥೆಯ 100 ಮೀಟರ್ ಸುತ್ತಳತೆಯೊಳಗಿನ ಪ್ರದೇಶದೊಳಗೆ, ಬಿಡಿಯಾಗಿ ಅಥವಾ ಒಂಟಿ ಕಡ್ಡಿಯಾಗಿ ಸಿಗರೇಟ್ ಮಾರಾಟವನ್ನು ನಿಷೇಧಿಸಲಾಗಿದೆ.

ಸಾಂದರ್ಭಿಕ ಚಿತ್ರ
World No Tobacco Day 2025: ಪರವಾನಗಿ ಇಲ್ಲದೆ ತಂಬಾಕು ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ; ಪೊಲೀಸರ ಎಚ್ಚರಿಕೆ

ಸಿಗರೇಟು ಅಥವಾ ಯಾವುದೇ ಇತರ ತಂಬಾಕು ಉತ್ಪನ್ನದ ಮಾರಾಟ ಮಾಡುವಂತಿಲ್ಲ. ಅಥವಾ ಮಾರಾಟಕ್ಕೆ ಅನುಮತಿ ನೀಡುವಂತಿಲ್ಲ.‌ ಸಾರ್ವಜನಿಕ ಸ್ಥಳದಲ್ಲಿ ತಂಬಾಕು ಉತ್ಪನ್ನಗಳ ಬಳಕೆಯನ್ನು ನಿಷೇಧಿಸಲಾಗಿದೆ‌. ಯಾವುದೇ ವ್ಯಕ್ತಿಯು ಸಾರ್ವಜನಿಕ ಸ್ಥಳದಲ್ಲಿ ತಂಬಾಕು ಉತ್ಪನ್ನವನ್ನು ಬಳಸುವಂತಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ಮತ್ತು ತಂಬಾಕು ಉಗಿಯುವಂತಿಲ್ಲ.

ಮೂವತ್ತು ಕೊಠಡಿಗಳನ್ನು ಹೊಂದಿರುವ ಹೋಟೆಲ್ ಅಥವಾ ಮೂವತ್ತು ಅಥವಾ ಅದಕ್ಕೂ ಹೆಚ್ಚಿನ ವ್ಯಕ್ತಿಗಳಿಗೆ ಆಸನ ಸಾಮರ್ಥ್ಯ ಹೊಂದಿರುವ ರೆಸ್ಟೋರೆಂಟ್ ಮತ್ತು ವಿಮಾನ ನಿಲ್ದಾಣಗಳಲ್ಲಿ ಒಂದು ಪ್ರತ್ಯೇಕ ಧೂಮಪಾನ ಪ್ರದೇಶ ಅಥವಾ ಸ್ಥಳಕ್ಕೆ ಅವಕಾಶವನ್ನು ಕಲ್ಪಿಸಬಹುದಾಗಿದೆ.

ಈ ತಿದ್ದುಪಡಿ ಕಾಯ್ದೆ ಪ್ರಕಾರ ಹುಕ್ಕಾ ಬಾರ್ ತೆರೆಯುವುದು ಅಥವಾ ನಡೆಸುವುದಕ್ಕೆ ನಿಷೇಧಿಸಲಾಗಿದೆ. ಯಾರೇ ವ್ಯಕ್ತಿಯು ತಾನಾಗಿಯಾಗಲಿ ಅಥವಾ ಯಾರೇ ಇತರ ವ್ಯಕ್ತಿಯ ಪರವಾಗಿಯಾಗಲಿ ಉಪಹಾರ ಗೃಹ ಅಥವಾ ಪಬ್ ಅಥವಾ ಬಾರು ಅಥವಾ ರೆಸ್ಟೋರೆಂಟ್ ಒಳಗೊಂಡಂತೆ ಯಾವುದೇ ಸ್ಥಳದಲ್ಲಿ ಹುಕ್ಕಾ ಬಾರನ್ನು ತೆರೆಯುವಂತಿಲ್ಲ ಹಾಗೂ ನಡೆಸುವಂತಿಲ್ಲ. ಒಂದು ವೇಳೆ ನಿಯಮ‌ ಉಲ್ಲಂಘಿಸಿದರೆ ದಂಡವಾಗಿ 1,000 ರೂ ಕಟ್ಟಬೇಕು. ಈ ಹಿಂದೆ ಈ ದಂಡ ರೂ.200 ಇತ್ತು.

ಹುಕ್ಕಾ ಬಾರ್ ನಡೆಸಿ ನಿಯಮ ಉಲ್ಲಂಘಿಸುವವರಿಗೆ 1 ವರ್ಷದಿಂದ 3 ವರ್ಷಗಳಿಗೆ ವಿಸ್ತರಿಸಬಹುದಾದ ಅವಧಿಗೆ ಸೆರೆ ಮನೆವಾಸ ಮತ್ತು 50 ಸಾವಿರ ರೂಪಾಯಿಗಳಿಗಿಂತ ಕಡಿಮೆಯಲ್ಲದ, 1 ಲಕ್ಷ ರೂಪಾಯಿಗಳವರೆಗೆ ವಿಸ್ತರಿಸಬಹುದಾದ ದಂಡ ವಿಧಿಸಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com