
ಬೆಂಗಳೂರು: ಮೆಡಿಸಿನ್ ಮಾಫಿಯಾಗೆ ಮಣಿದು ಬಡವರ ಪಾಲಿನ ಸಂಜೀವಿನಿಯಾದ ಜನೌಷಧಿಗೆ ಕೇಂದ್ರಗಳ ಮುಚ್ಚಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಬಿಜೆಪಿ ಶುಕ್ರವಾರ ಕಿಡಿಕಾರಿದೆ.
ಜನೌಷಧಿ ಕೇಂದ್ರ ಮುಚ್ಚಲು ರಾಜ್ಯ ಸರ್ಕಾರ ನೋಟಿಸ್ ನೀಡಿರುವುದನ್ನು ಖಂಡಿಸಿ ಕೃಷ್ಣರಾಜ ಶಾಸಕ ಟಿ ಎಸ್ ಶ್ರೀವತ್ಸ ಮತ್ತು ಬಿಜೆಪಿ ನಗರಾಧ್ಯಕ್ಷ ಎಲ್ ನಾಗೇಂದ್ರ ನೇತೃತ್ವದಲ್ಲಿ ಕೆ.ಆರ್.ಆಸ್ಪತ್ರೆ ಆವರಣದಲ್ಲಿ ನಗರ ಬಿಜೆಪಿ ಘಟಕದ ಮುಖಂಡರು ಹಾಗೂ ಕಾರ್ಯಕರ್ತರು ಶುಕ್ರವಾರ ಪ್ರತಿಭಟಿಸಿದರು. ಆಸ್ಪತ್ರೆಯ ಮುಂಭಾಗ ಆವರಿಸಿದ ಪ್ರತಿಭಟನಕಾರರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸರ್ಕಾರ ಆದೇಶವನ್ನು ಈ ಕೂಡಲೇ ಹಿಂಪಡೆಯಬೇಕೆಂದು ಒತ್ತಾಯಿಸಿದರು.
ಜನೌಷಧಿ ಕೇಂದ್ರ ಮುಚ್ಚುವ ಮೂಲಕ ಮಧ್ಯಮ ವರ್ಗಕ್ಕೆ ತೊಂದರೆ ನೀಡಲು ಸರ್ಕಾರ ಮುಂದಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಫೋಟೊ ಇರುವ ಕಾರಣಕ್ಕೆ ಜನೌಷಧಿ ಕೇಂದ್ರಗಳನ್ನು ಮುಚ್ಚುತ್ತಿದ್ದಾರೆ. ಹಾಗಿದ್ದರೆ ಇಂದಿರಾ ಕ್ಯಾಂಟೀನ್, ಬಸ್‌ಗಳಲ್ಲಿ ನಿಮ್ಮ ಪಕ್ಷದವರ ಫೋಟೋ ಯಾಕೆ ಹಾಕಿದ್ದೀರಿ, ಪ್ರಧಾನ ಮಂತ್ರಿ ಫೋಟೋ ಬಂದಿದ್ದಕ್ಕೆ ರಾಜಕಾರಣ ಮಾಡುವ ಹಾಗಿದ್ದರೆ ಯಾರೊಬ್ಬರ ಫೋಟೊವನ್ನೂ ಪ್ರದರ್ಶಿಸಬಾರದೆಂಬ ನಿರ್ಣಯ ಮಾಡಲಿ ಶಾಸಕ ಟಿ.ಎಸ್.ಶ್ರೀವತ್ಸ ಅವರು ಆಗ್ರಹಿಸಿದರು.
ಸರ್ಕಾರಿ ಆಸ್ಪತ್ರೆಗಳಿಂದ ಜನೌಷಧಿ ಕೇಂದ್ರಗಳನ್ನು ಮುಚ್ಚಲು ಯೋಜಿಸುತ್ತಿರುವ ರಾಜ್ಯ ಸರ್ಕಾರವು ರೋಗಿಗಳಿಗೆ ಉಚಿತ ಔಷಧಿಗಳನ್ನು ನೀಡುವಲ್ಲಿ ವಿಫಲವಾಗಿದೆ. ಸರ್ಕಾರ ಸೇಡಿನ ರಾಜಕೀಯವನ್ನು ತ್ಯಜಿಸಿ ಬಡವರ ಹಿತಾಸಕ್ತಿಗಾಗಿ ಕೆಲಸ ಮಾಡಬೇಕು. ಈ ಸರ್ಕಾರಿ ಆದೇಶದ ಹಿಂದೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರ ಕೈವಾಡವಿದೆ. ಅವರಿಗೆ ಬಡವರ ಬಗ್ಗೆ ಯಾವುದೇ ಕಾಳಜಿ ಇಲ್ಲ ಎಂದು ಕಿಡಿಕಾರಿದರು.
ನಗರ ಘಟಕದ ಅಧ್ಯಕ್ಷ ಎಲ್.ನಾಗೇಂದ್ರ ಮಾತನಾಡಿ, ‘ಕಾಂಗ್ರೆಸ್ ಸರ್ಕಾರವು ದಿನನಿತ್ಯ ಉಪಯೋಗಿಸುವ ವಸ್ತುಗಳಿಗೆ ಬೆಲೆಯೇರಿಕೆ ಮಾಡಿದೆ. ಈಗ ಖಾಸಗಿ ಮೆಡಿಕಲ್ ಮಾಫಿಯಾದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಜನೌಷಧಿ ಕೇಂದ್ರಗಳನ್ನು ಮುಚ್ಚಲು ಹೊರಟಿದೆ. ಜನೌಷಧಿ ಕೇಂದ್ರಗಳಲ್ಲಿ 800 ಕ್ಕೂ ಹೆಚ್ಚು ಔಷಧಿಗಳು ಲಭ್ಯವಿದೆ. ಬಡವರ ಹಿತದೃಷ್ಟಿಯಿಂದ ಸರ್ಕಾರ ತನ್ನ ನಿರ್ಧಾರವನ್ನು ಮರುಪರಿಶೀಲಿಸದಿದ್ದರೆ ಬಿಜೆಪಿ ಪ್ರತಿಭಟನೆಯನ್ನು ತೀವ್ರಗೊಳಿಸಲಿದೆ ಎಂದು ಎಚ್ಚರಿಸಿದರು.
Advertisement