ಇನ್ನು ಸಿಎಂ, ಸಚಿವರ ಭೇಟಿಯಾಗುವುದು ಸುಲಭ...! ಹೇಗಂತೀರಾ ಇಲ್ಲಿದೆ ಮಾಹಿತಿ...
ಬೆಂಗಳೂರು: ಸಾಮಾನ್ಯ ಜನರು ಮುಖ್ಯಮಂತ್ರಿಗಳು, ಸಚಿವರು ಹಾಗೂ ವಿಧಾನಸೌಧ ಮತ್ತು ವಿಕಾಸಸೌಧದಲ್ಲಿ ಕೆಲಸ ಮಾಡುವ ಇತರೆ ಅಧಿಕಾರಿಗಳನ್ನು ಭೇಟಿ ಮಾಡಬೇಕೆಂದರೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪ್ರತೀ ನಿತ್ಯ ಕ್ಯೂನಲ್ಲಿ ನಿಂತರೂ, ಕಚೇರಿಗಳಿಗೆ ಭೇಟಿ ನೀಡಿದರೂ ಭೇಟಿ ಕಷ್ಟಸಾಧ್ಯವಾಗುತ್ತದೆ.
ಈ ನಿಟ್ಟಿನಲ್ಲಿ ಜನರ ಸಂಕಷ್ಟವನ್ನು ಅರಿತ ಸರ್ಕಾರ ಸಿಎಂ, ಸಚಿವರು ಹಾಗೂ ಅಧಿಕಾರಿಗಳ ಲಭ್ಯತೆ ಪರಿಶೀಲಿಸಲು, ಅಪಾಯಿಂಟ್ಮೆಂಟ್ ಪಡೆಯಲು ಮೊಬೈಲ್ ಅಪ್ಲಿಕೇಶನ್ ವೊಂದನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ.
ವಿಧಾನಸೌಧ ಹಾಗೂ ವಿಕಾಸ ಸೌಧತದಲ್ಲಿ ಅನೇಕ ಸರ್ಕಾರಿ ಇಲಾಖೆಗಳು ಹಾಗೂ ಸರ್ಕಾರಿ ಕಚೇರಿಗಳಿದ್ದು, 600 ಕೊಠಡಿಗಳನ್ನು ಹೊಂದಿವೆ. ಸಂದರ್ಶಕರಿಗೆ ಸಹಾಯ ಮಾಡಲು ಎರಡೂ ಸೌಧಗಳ ಕಚೇರಿಗಳ ವಿವರಗಳನ್ನು ಹೊಂದಿರುವ ಮೀಸಲಾದ ಮೊಬೈಲ್ ಅಪ್ಲಿಕೇಶನ್'ನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ವಿಧಾನಸಭೆ ಸ್ಪೀಕರ್ ಯುಟಿ.ಖಾದರ್ ಅವರು ಹೇಳಿದ್ದಾರೆ.
ಜನರು ತಾವು ಭೇಟಿ ಮಾಡಲು ಬಯಸುವ ಯಾವುದೇ ಸಚಿವರು ಅಥವಾ ಅಧಿಕಾರಿಗಳ ಕೊಠಡಿ ಸಂಖ್ಯೆಗಳು ಅಥವಾ ಮಹಡಿಗಳನ್ನು ಆ್ಯಪ್ ಮೂಲಕ ಪರಿಶೀಲಿಸಬಹುದು. ಸೌಧಗಳು ವಿಶಾಲವಾಗಿದ್ದು, ಅವು ಗೊಂದಲಮಯವಾಗಿರಬಹುದು. ಅಪ್ಲಿಕೇಶನ್ ನ್ಯಾವಿಗೇಟರ್‌ನಂತೆ ಕಾರ್ಯನಿರ್ವಹಿಸಲಿದ್ದು, ಆ್ಯಪ್'ನ್ನು ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.
ಅಪಾಯಿಂಟ್ಮೆಂಟ್ ಬುಕ್ ಮಾಡುವ ರೀತಿಯಲ್ಲಿ ಆ್ಯಪ್ ಅನ್ನು ವಿನ್ಯಾಸಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಮುಖ್ಯಮಂತ್ರಿ ಮತ್ತು ಸಚಿವರ ಕಚೇರಿಗಳು ಸೇರಿದಂತೆ ಪ್ರಮುಖ ಕಚೇರಿಗಳನ್ನು ಹೊಂದಿರುವ ಸರ್ಕಾರಿ ಕಟ್ಟಡದ ಕುರಿತು ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸುತ್ತಿರುವುದು ದೇಶದಲ್ಲೇ ಮೊದಲನೆಯದಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಒಂದು ನಿರ್ದಿಷ್ಟ ದಿನದಂದು ಸಚಿವರು ಅಥವಾ ಅಧಿಕಾರಿಯ ಲಭ್ಯತೆಯ ಮಾಹಿತಿಗಳನ್ನು ಆ್ಯಪ್ ನಲ್ಲಿ ನೀಡಲಾಗುತ್ತದೆ. ಸಚಿವರು ಅಥವಾ ಅಧಿಕಾರಿಗಳು ಪ್ರಯಾಣಿಸುತ್ತಿದ್ದರೆ, ಆ ವಿವರಗಳನ್ನು ಅಪ್‌ಲೋಡ್ ಮಾಡಬಹುದು. ವಿವಿಧ ಸ್ಥಳಗಳಿಂದ ಬರುವ ಜನರು ತಮ್ಮ ಭೇಟಿಯನ್ನು ಅದಕ್ಕೆ ಅನುಗುಣವಾಗಿ ಯೋಜಿಸಬಹುದು. ಮುಂದಿನ ದಿನಗಳಲ್ಲಿ ಮತ್ತಷ್ಟು ವೈಶಿಷ್ಟ್ಯಗಳನ್ನು ಆ್ಯಪ್'ನಲ್ಲಿ ಸೇರಿಸಲಾಗುವುದು ಎಂದು ಹೇಳಿದರು.
ಇದನ್ನು ಹೊರತುಪಡಿಸಿ, ವಿಧಾನಸಭೆ ಮತ್ತು ಪರಿಷತ್ತು ಶಾಸಕಾಂಗ ಅಧಿವೇಶನಗಳನ್ನು ಕಾಗದರಹಿತವಾಗಿಸಲು ಪ್ರಯತ್ನಿಸಲಾಗುತ್ತಿದೆ. ಈಗ, ಬಜೆಟ್, ಮಸೂದೆಗಳು, ಸಮಿತಿ ವರದಿಗಳು ಮತ್ತು ಇತರ ದಾಖಲೆಗಳನ್ನು ಮುದ್ರಿಸಿ ಶಾಸಕರಿಗೆ ನೀಡಲಾಗುತ್ತದೆ. ಸಂಪೂರ್ಣ ಡಿಜಿಟಲೀಕರಣವನ್ನು ಅಂಗೀಕರಿಸಿದರೆ, ಅಧಿವೇಶನಗಳನ್ನು ಕಾಗದರಹಿತವಾಗಿಸಬಹುದು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ಎರಡು ಪ್ರಸ್ತಾವನೆಗಳನ್ನು ಸಲ್ಲಿಸಲಾಗುತ್ತಿದೆ.
ಮೊದಲನೆಯ ಪ್ರಸ್ತಾವನೆ ನಮ್ಮದೇ ಸಾಫ್ಟ್‌ವೇರ್ ತಯಾರಿಸುವುದು ಮತ್ತು ಅದನ್ನು ನಿರ್ವಹಿಸುವುದು. ಮತ್ತೊಂದು ಆಯ್ಕೆಯೆಂದರೆ ವಿಧಾನಸಭೆಗಳ ಡಿಜಿಟಲೀಕರಣಕ್ಕಾಗಿ ಕೇಂದ್ರ ಸರ್ಕಾರವು ವಿನ್ಯಾಸಗೊಳಿಸಿರುವ ಇ-ವಿಧಾನ್ ಅಪ್ಲಿಕೇಶನ್ ಅನ್ನು ಅಳವಡಿಸಿಕೊಳ್ಳುವುದು. ವಿಧಾನಸಭೆ ಮತ್ತು ಪರಿಷತ್ತು ಎರಡನ್ನೂ ಹೊಂದಿರುವ ಕೆಲವೇ ರಾಜ್ಯಗಳಲ್ಲಿ ಕರ್ನಾಟಕ ಒಂದಾಗಿರುವುದರಿಂದ ಎರಡೂ ಆಯ್ಕೆಗಳು ಸೂಕ್ತವಾಗುತ್ತದೆಯೇ ಎಂಬುದನ್ನು ನಾವು ನೋಡಬೇಕಿದೆ ಸರ್ಕಾರವು ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.


