

ತುಮಕೂರು: ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ನಾಯಕರ ಜೊತೆ ಸೆಲ್ಫಿ ತೆಗೆದುಕೊಂಡ ಪೊಲೀಸ್ ಇನ್ಸ್ಪೆಕ್ಟರ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಶನಿವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಿ ಸೆಲ್ಫಿ ತೆಗೆದುಕೊಂಡ ಮಾತ್ರಕ್ಕೆ ಅವರು ಕನ್ನಡ ವಿರೋಧಿ ಮನಸ್ಥಿತಿ ಹೊಂದಿದ್ದಾರೆಂದು ಭಾವಿಸಲಾಗುವುದಿಲ್ಲ. ಆದರೆ, ರಾಜ್ಯದ ಸಮಗ್ರತೆ ಮತ್ತು ತತ್ವಗಳಿಗೆ ವಿರುದ್ಧವಾಗಿ ವರ್ತಿಸುವ ಯಾವುದೇ ಅಧಿಕಾರಿ ಅಥವಾ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ರಾಜ್ಯದ ನೀರು, ಭೂಮಿ ಮತ್ತು ಭಾಷೆಯನ್ನು ರಕ್ಷಿಸುವಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದೂ ಇದೇ ವೇಳೆ ತಿಳಿಸಿದರು.
ಏತನ್ಮಧ್ಯೆ ಅಧಿಕಾರಿಯ ವರ್ತನೆ ವಿರುದ್ಧ ರಾಜ್ಯ ಬಿಜೆಪಿ ಕಿಡಿಕಾರಿದ್ದು, ಕರ್ನಾಟಕ ರಾಜ್ಯೋತ್ಸವದ ದಿನವೇ ಕನ್ನಡ ಹಾಗೂ ಕರ್ನಾಟಕಕ್ಕೆ ಅವಮಾನಿಸಿದೆ ನಾಡದ್ರೋಹಿ ಕಾಂಗ್ರೆಸ್ ಸರ್ಕಾರ. ಕರಾಳ ದಿನವನ್ನು ಆಚರಿಸುತ್ತಿದ್ದ ಬೆಳಗಾವಿಯ ನಾಡದ್ರೋಹಿ ಎಂಇಎಸ್ ಪುಂಡರೊಂದಿಗೆ ಕರ್ನಾಟಕದ ಪೊಲೀಸ್ ಸೆಲ್ಫಿ ತೆಗೆದುಕೊಂಡಿದ್ದಾರೆ. ಕರ್ನಾಟಕಕ್ಕೆ ಇದಕ್ಕಿಂತ ದೊಡ್ಡ ಅವಮಾನ ಇದೆಯೇ..?? ಗೊತ್ತಿಲ್ಲ ಅಲಿಯಾಸ್ “ಆಕಸ್ಮಿಕ” ಗೃಹ ಸಚಿವ ಪರಮೇಶ್ವರ್ ಅವರೆ, ಸೆಲ್ಫಿ ತೆಗೆದುಕೊಂಡ ನಾಡದ್ರೋಹಿ ಪೊಲೀಸ್ ವಿರುದ್ಧ ಕ್ರಮ ಯಾವಾಗ..?? ಎಂದು ಪ್ರಶ್ನಿಸಿದೆ.
Advertisement