

ಹಂಪಿ: ರಾಜ್ಯದಿಂದ ಮಾನ್ಯತೆ ಪಡೆದ 400 ಕ್ಕೂ ಹೆಚ್ಚು ಪ್ರವಾಸಿ ಮಾರ್ಗದರ್ಶಕರ ಮಾಸಿಕ ವೇತನವನ್ನು ರಾಜ್ಯ ಸರ್ಕಾರ ಕೊನೆಗೂ ಬಿಡುಗಡೆ ಮಾಡಿದೆ.
ಪ್ರವಾಸಿ ಮಾರ್ಗದರ್ಶಕರಿಗೆ ಕಳೆದ 7 ತಿಂಗಳಿನಿಂದ ವೇತನ ನೀಡಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಈ ಹಿಂದೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿತ್ತು.
ಹಂಪಿ, ಮೈಸೂರು, ಬಾದಾಮಿ ಮತ್ತು ಹಳೇಬೀಡು ಮುಂತಾದ ಪ್ರಮುಖ ಪಾರಂಪರಿಕ ತಾಣಗಳಲ್ಲಿ ನಿಯೋಜಿಸಲಾದ 400 ಕ್ಕೂ ಹೆಚ್ಚು ಮಾರ್ಗದರ್ಶಕರು ಗೌರವಧನ ವಿತರಣೆಯಲ್ಲಿನ ದೀರ್ಘಕಾಲದ ವಿಳಂಬದಿಂದಾಗಿ ಜೀವನ ನಿರ್ವಹಿಸಲು ಸಂಕಷ್ಟ ಎದುರಿಸುತ್ತಿದ್ದಾರೆಂದು ತಿಳಿಸಿತ್ತು.
ವರದಿಗೆ ರಾಜ್ಯ ಪ್ರವಾಸೋದ್ಯಮ ಇಲಾಖೆ ಪ್ರತಿಕ್ರಿಯಿಸಿದ್ದು, ಪ್ರವಾಸಿ ಮಾರ್ಗದರ್ಶಕರಿಗೆ ಮೂರು ತಿಂಗಳ ಬಾಕಿ ಪಾವತಿಗಳನ್ನು ಬಿಡುಗಡೆ ಮಾಡಿದೆ.
ಪ್ರವಾಸೋದ್ಯಮ ಸಚಿವ ಎಚ್ ಕೆ ಪಾಟೀಲ್ ಅವರು ತಿಂಗಳಿಗೆ 5,000 ರೂ.ಗಳ ಬಾಕಿ ಹಣವನ್ನು ಬಿಡುಗಡೆ ಮಾಡುವಂತೆ ಸೂಚನೆ ನೀಡಿದ್ದಾರೆ.
ಪ್ರವಾಸಿ ಮಾರ್ಗದರ್ಶಿಗಳ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷಿ ವಿ ಹಂಪಿ ಅವರು ಪ್ರತಿಕ್ರಿಯಿಸಿ, ಮಾಧ್ಯಮದ ವರದಿ ಹಿರಿಯ ಅಧಿಕಾರಿಗಳ ಗಮನ ಸೆಳೆದಿದೆ. "TNIE ವರದಿಯ ನಂತರ ಅಧಿಕಾರಿಗಳು ತ್ವರಿತ ಪ್ರತಿಕ್ರಿಯೆ ನೀಡಿದ್ದಾರೆ. ಧನ್ಯವಾದಗಳು. ಸಚಿವ ಪಾಟೀಲ್, ಆಯುಕ್ತ ಅಕ್ರಮ್ ಪಾಷಾ ಮತ್ತು ಇತರ ನಾಯಕರಿಗೆ ನಾವು ಕೃತಜ್ಞರಾಗಿರುತ್ತೇವೆಂದು ಹೇಳಿದ್ದಾರೆ.
Advertisement