
ಬೆಂಗಳೂರು: ಜನಸಾಮಾನ್ಯರಿಗೂ ನಾಡಿನ ಶಕ್ತಿಸೌಧ ವೀಕ್ಷಣೆ ಅವಕಾಶ ಸಿಗಲೆಂದು ರಾಜ್ಯ ಸರ್ಕಾರ ಜಾರಿಗೊಳಿಸಿರುವ 'ವಿಧಾನಸೌಧ ಮಾರ್ಗದರ್ಶಿ ಪ್ರವಾಸ' ಕ್ಕೆ ಭಾನುವಾರ ಅಧಿಕೃತವಾಗಿ ಚಾಲನೆ ಸಿಕ್ಕಿದ್ದು, ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮೊದಲ ದಿನವೇ 102 ಪ್ರವಾಸಿಗರು ಕಾಲ್ನಡಿಗೆ ಮೂಲಕ ವಿಧಾನಸೌಧ ವೀಕ್ಷಿಸಿದ್ದಾರೆ.ಭಾನುವಾರ ನಾಲ್ಕು ತಂಡಗಳಲ್ಲಿ ಪ್ರವಾಸಿಗರನ್ನು ಕರೆದೊಯ್ಯಲಾಗಿತ್ತು. ಪ್ರತಿ ತಂಡದಲ್ಲಿ ತಲಾ 30 ಜನರು ಟಿಕೆಟ್ ಕಾಯ್ದಿರಿಸಿದ್ದರು. ಒಟ್ಟು 120 ಮಂದಿ ಟಿಕೆಟ್ ಕಾಯ್ದಿರಿಸಿದ್ದು, 102 ಮಂದಿ ಬಂದಿದ್ದರು ಎಂದು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಮಾಹಿತಿ ನೀಡಿದೆ.
ಜೂ.1ರಿಂದ ವಿಧಾನಸೌಧ ಗೈಡೆಡ್ ಟೂರ್ ಆರಂಭವಾಗಿದ್ದು, ಮೊದಲ ದಿನ 67 ಮಂದಿ ಪುರುಷರು ಮತ್ತು 53 ಮಂದಿ ಮಹಿಳೆಯರು ಸೇರಿ ಒಟ್ಟು 120 ಮಂದಿ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವೆಬ್‌ಸೈಟ್ ಮೂಲಕ ನೋಂದಣಿ ಮಾಡಿಸಿದರು. 102 ಮಂದಿ ಹಾಜರಾಗಿ ವಿಧಾನಸೌಧ ವೀಕ್ಷಿಸಿದರು ಎಂದು ಕೆಎಸ್‌ಟಿಡಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿಧಾನಸೌಧ ಪ್ರವಾಸಕ್ಕೆ ನೋಂದಾಯಿಸಿಕೊಂಡಿದ್ದವರಿಗೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ತಲಾ 25ರಿಂದ 30 ಮಂದಿಯ ನಾಲ್ಕು ಬ್ಯಾಚ್ ಮಾಡಿ ಬೆಳಗ್ಗೆಯಿಂದಲೇ ವೀಕ್ಷ ಣೆಗೆ ಅವಕಾಶ ನೀಡಿತು.
ಪ್ರತಿ ಬ್ಯಾಚ್‌ಗೂ ಒಬ್ಬ ಗೈಡ್ ಅನ್ನು ನಿಯೋಜಿಸಲಾಗಿತ್ತು. ಸಭಾಧ್ಯಕ್ಷರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜ್ಞಾನಶೇಖರ್ ಸೇರಿ ವಿಧಾನಸೌಧವನ್ನು ಚೆನ್ನಾಗಿ ಬಲ್ಲ ಸಿಬ್ಬಂದಿ ಯನ್ನೇಗೈಡ್‌ಗಳಾಗಿ ನಿಯೋಜಿಸಲಾಗಿದೆ.
ನಾಲ್ವರು ಗೈಡ್‌ಗಳು ಸಾರ್ವಜನಿಕರಿಗೆ ವಿಧಾನಸೌಧದ ಇತಿಹಾಸ, ಪರಂಪರೆಯ ಮಾಹಿತಿ ನೀಡಲು ಹಾಗೂ ಶಕ್ತಿಸೌಧದ ಆವರಣದಲ್ಲಿರುವ ಹಲವು ಮಹನೀಯರ ಪುತ್ಥಳಿಗಳಿಂದ ಹಿಡಿದು ವಿಧಾನಸಭೆ, ವಿಧಾನ ಪರಿಷತ್ ಸಭಾಂಗಣದವರೆಗೆ ಎಲ್ಲಾ ಪ್ರಮುಖ ಸ್ಥಳಗಳನ್ನೂ ತೋರಿಸಿ ಮಾಹಿತಿ ಒದಗಿಸಿದರು. ಸರ್ಕಾರದ ಈ ಕ್ರಮಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
Advertisement