

ಬೆಳಗಾವಿ: ಪ್ರತಿ ಟನ್ ಕಬ್ಬಿಗೆ 3,500 ದರ ನಿಗದಿಗೆ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಂಡಿದ್ದು, ಸಚಿವ ಶಿವಾನಂದ್ ಪಾಟೀಲ್ ಸ್ಥಳಕ್ಕೆ ಭೇಟಿ, ಮಾತುಕತೆ ನಡೆಸಿದರೂ ರೈತರು ಪ್ರತಿಭಟನೆಯಿಂದ ಹಿಂದಕ್ಕೆ ಸರಿದಿಲ್ಲ.
ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಅವರು ಗುರುವಾರ ತಡರಾತ್ರಿ ಗುರ್ಲಾಪುರದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಉದ್ದೇಶಿತ ರಸ್ತೆ ತಡೆಯನ್ನು (ಶುಕ್ರವಾರ) ಹಿಂತೆಗೆದುಕೊಳ್ಳುವಂತೆ ರೈತರಿಗೆ ಮನವಿ ಮಾಡಿದರು.
ಶುಕ್ರವಾರ ಸಂಜೆಯೊಳಗೆ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲಾಗುವುದು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭರವಸೆಯನ್ನು ಸಚಿವರು ರೈತರಿಗೆ ತಿಳಿಸಿದರು. ಆದರೂ ರೈತರು ಪ್ರತಿಭಟನೆಯಿಂದ ಹಿಂದಕ್ಕೆ ಸರಿಯಲು ಒಪ್ಪಿಗೆ ನೀಡಿಲ್ಲ.
ನಾಳೆ ರಸ್ತೆಗಳನ್ನು ತಡೆಯಬೇಡಿ ಎಂದು ನಾನು ನಿಮ್ಮನ್ನು ವಿನಂತಿಸುತ್ತೇನೆ. ಶಾಶ್ವತ ಪರಿಹಾರವನ್ನು ತರಲು ಸಿಎಂ ಕೇವಲ ಒಂದು ದಿನದ ಸಮಯವನ್ನು ಕೇಳಿದ್ದಾರೆ" ಎಂದು ಪಾಟೀಲ್ ಅವರು ಪ್ರತಿಭಟನಾಕಾರರನ್ನು ಒತ್ತಾಯಿಸಿದರು.
ಆದರೆ, ಸಚಿವರ ಮನವಿಗೆ ರೈತರು ಕಿವಿಗೊಡದ ರೈತರು, ಪ್ರತಿ ಟನ್ ಕಬ್ಬಿಗೆ 3,500 ದರ ನಿಗದಿ ಮಾಡದ ಹೊರತು ಪ್ರತಿಭಟನೆ ನಿಲ್ಲಲ್ಲ ಎಂದು ಪಟ್ಟ ಹಿಡಿದಿದ್ದಾರೆ.
ಶುಕ್ರವಾರ ಸಂಜೆಯೊಳಗೆ ಮುಖ್ಯಮಂತ್ರಿ 3,500 ರೂ. ದರವನ್ನು ಘೋಷಿಸದಿದ್ದರೆ ಪ್ರತಿಭಟನೆ ಮತ್ತಷ್ಟು ಉಲ್ಬಣಗೊಳ್ಳುತ್ತದೆ ಎಂದು ಚೋನಪ್ಪ ಪೂಜಾರಿ ನೇತೃತ್ವದ ರೈತರು ಘೋಷಿಸಿದ್ದಾರೆ. ಅಲ್ಲದೆ, ಒಂದು ದಿನದ ಮಟ್ಟಿಗೆ ರಸ್ತೆ ತಡೆ ನಿಲ್ಲಿಸಲು ಒಪ್ಪಿಗೆ ನೀಡಿದ್ದಾರೆ.
ನಮ್ಮ ಬೇಡಿಕೆಯನ್ನು ಮತ್ತೆ ನಿರ್ಲಕ್ಷಿಸಿದರೆ, ಕರ್ನಾಟಕದಾದ್ಯಂತ ಲಕ್ಷಾಂತರ ರೈತರು ಬೆಳಗಾವಿಗೆ ಮೆರವಣಿಗೆ ನಡೆಸಲಿದ್ದಾರೆ. ಸರ್ಕಾರ ಟನ್‌ಗೆ 3,500 ರೂ. ಘೋಷಿಸಿದ ಕ್ಷಣದಿಂದಲೇ ನಾವು ಪ್ರತಿಭಟನೆಯನ್ನು ಕೊನೆಗೊಳಿಸಲು ಸಿದ್ಧರಿದ್ದೇವೆ, ಆದರೆ ಅದಕ್ಕೂ ಮೊದಲು ಸಾಧ್ಯವೇ ಇಲ್ಲ ಎಂದು ಪೂಜಾರಿ ಹೇಳಿದ್ದಾರೆ.
8ನೇ ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ
ಏತನ್ಮಧ್ಯೆ ಗುರ್ಲಾಪುರದಲ್ಲಿ ನಡೆಯುತ್ತಿರು ರೈತರ ಪ್ರತಿಟನೆ ಎಂಟನೇ ದಿನಕ್ಕೆ ಕಾಲಿಟ್ಟಿದ್ದು, ಗುರುವಾರ ಮೂಡಲಗಿ ಪಟ್ಟಣ ಸಂಪೂರ್ಣ ಬಂದ್ ಆಚರಿಸಿತು.
ವ್ಯಾಪಾರಿಗಳು, ಮಾಲೀಕರು ಮತ್ತು ನಿವಾಸಿಗಳು ಬಂದ್‌ಗೆ ಸಂಪೂರ್ಣ ಬೆಂಬಲ ನೀಡಿದ್ದು, ಮೂಡಲಗಿ, ಗುರ್ಲಾಪುರ, ಜಂಬೋಟಿ ಮತ್ತು ಗೋಕಾಕ್‌ನಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿತ್ತು.
ಪ್ರತಿಭಟನಾಕಾರರು ಕಲ್ಮೇಶ್ವರ ವೃತ್ತದಿಂದ ಗುರ್ಲಾಪುರ ಕ್ರಾಸ್‌ಗೆ 3 ಕಿ.ಮೀ ಮೆರವಣಿಗೆ ನಡೆಸಿದರು. ಸಕ್ಕರೆ ಸಚಿವರ ಪ್ರತಿಕೃತಿಯನ್ನು ಹೊತ್ತುಕೊಂಡು, ಸರ್ಕಾರವು "ಗ್ರಾಮೀಣ ಆರ್ಥಿಕತೆಯಾಗಿರುವ ಕಬ್ಬು ಬೆಳೆಗಾರರಿಗೆ ದ್ರೋಹ ಮಾಡಿದೆ" ಎಂದು ಘೋಷಣೆಗಳನ್ನು ಕೂಗಿದರು. ರೈತರ ಪ್ರತಿಭಟನೆಗೆ ಕಾಲೇಜು ವಿದ್ಯಾರ್ಥಿಗಳು ಕೂಡ ಕೈಜೋಡಿಸಿದ್ದು ಕಂಡು ಬಂದಿತು.
ಇದಕ್ಕೂ ಮೊದಲು, ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪಾಟೀಲ್ ಅವರು, ಸಿಎಂ ಶುಕ್ರವಾರ ಬೆಂಗಳೂರಿನಲ್ಲಿ ಎಲ್ಲಾ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ನಿರ್ಣಾಯಕ ಸಭೆಯನ್ನು ಕರೆಯಲಿದ್ದಾರೆ ಎಂದು ಹೇಳಿದರು.
ರೈತರನ್ನು ಬೆಂಬಲಿಸಲು ಸರ್ಕಾರ ಬದ್ಧವಾಗಿದೆ. ಯಾವುದೇ ರಾಜಕೀಯ ಒತ್ತಡವಿಲ್ಲ; ನಮಗೆ ಶಾಂತಿಯುತ ಒಪ್ಪಂದವಾಗಬೇಕು. ಆದಾಗ್ಯೂ, ನ್ಯಾಯಯುತ ಮತ್ತು ಲಾಭದಾಯಕ ಬೆಲೆ (FRP) ನಿಗದಿಪಡಿಸುವುದು ಕೇಂದ್ರದ ಮೇಲಿದೆ ಎಂದು ಹೇಳಿದರು.
ಇದೇ ವೇಳೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಟೀಕಿಸಿದ ಅವರು, ಅವರು ಕೂಡ ಕರ್ನಾಟಕದವರೇ, ಆದರೆ ಈ ಜ್ವಲಂತ ವಿಷಯದ ಬಗ್ಗೆ ಯಾವುದೇ ಪ್ರಯತ್ನ ಅಥವಾ ಹೇಳಿಕೆ ನೀಡಿಲ್ಲ ಎಂದು ಕಿಡಿಕಾರಿದರು.
ಈ ನಡುವೆ ಕರ್ನಾಟಕ ರಕ್ಷಣಾ ವೇದಿಕೆ (ಕೆಆರ್‌ವಿ) ರಾಜ್ಯವು ಕಬ್ಬಿಗೆ ಪ್ರತಿ ಟನ್‌ಗೆ 3,500 ರೂ.ಗಳನ್ನು ಘೋಷಿಸದಿದ್ದರೆ ಗುರುವಾರ ಬೆಳಗಾವಿ ಬಂದ್‌ಗೆ ಕರೆ ನೀಡುವುದಾಗಿ ಘೋಷಿಸಿದೆ.
Advertisement