

ಬೆಂಗಳೂರು: ನವೆಂಬರ್ 10 ರೊಳಗೆ ನಗರದಲ್ಲಿರುವ ಎಲ್ಲಾ ರಸ್ತೆಗಳ ಗುಂಡಿಗಳನ್ನು ಮುಚ್ಚಲಾಗುವುದು ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ ತಿಳಿಸಿದೆ. ನಗರದ ರಸ್ತೆಗಳ ಗುಂಡಿ ಮುಚ್ಚಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಕ್ಟೋಬರ್ 31 ರ ಗಡುವು ನೀಡಿದ್ದರು.
ನಗರದಲ್ಲಿ ಸುಮಾರು 18 ಸಾವಿರ ರಸ್ತೆ ಗುಂಡಿಗಳನ್ನು ಮುಚ್ಚಲಾಗಿದ್ದು, ಜಂಕ್ಷನ್‌ಗಳ ಅಭಿವೃದ್ಧಿಗೆ 100 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದರು.
1,700 ಕೋಟಿ ವೆಚ್ಚದಲ್ಲಿ 220.68 ಕಿಮೀ ಉದ್ದದ 140 ರಸ್ತೆಗಳಲ್ಲಿ ಕಾಮಗಾರಿ ನಡೆಯುತ್ತಿದ್ದು, 79.08 ಕಿ.ಮೀ (39 ರಸ್ತೆ) ವೈಟ್ ಟಾಪಿಂಗ್ ಕೆಲಸ ಪೂರ್ಣಗೊಂಡಿದೆ. ಉಳಿದ 101 ರಸ್ತೆಗಳ ಕಾಮಗಾರಿ ಪ್ರಗತಿಯಲ್ಲಿದೆ.
ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ ₹694 ಕೋಟಿ ವೆಚ್ಚದಲ್ಲಿ 386.5 ಕಿಮೀ ರಸ್ತೆಗಳ ಡಾಂಬರೀಕರಣ ನಡೆಯುತ್ತಿದ್ದು, ಶೇ 44ರಷ್ಟು ಕೆಲಸ ಪೂರ್ಣಗೊಂಡಿದೆ. ಉಳಿದ ಕೆಲಸವನ್ನು ಎರಡು ತಿಂಗಳಲ್ಲಿ ಪೂರ್ಣಗೊಳಿಸಲಾಗುತ್ತದೆ ಎಂದು ಸುದ್ದಿಗಾರರಿಗೆ ಮಾಹಿತಿ ನೀಡಿದರು.
100 ಕೋಟಿ ವೆಚ್ಚದಲ್ಲಿ ‘ಸುರಕ್ಷಾ 75’ ಜಂಕ್ಷನ್ ಸುಧಾರಣಾ ಯೋಜನೆಯ ಶೇ 40ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಈಜೀಪುರ ಮೇಲ್ಸೇತುವೆ ಕಾಮಗಾರಿ 2026ರ ಜುಲೈ ಅಂತ್ಯಕ್ಕೆ ಮುಗಿಯಲಿದೆ ಎಂದರು. ಐದು ನಗರ ಪಾಲಿಕೆಗಳ ಕರಡು ವಾರ್ಡ್ ಪುನರ್ ವಿಂಗಡಣೆ ಅಧಿಸೂಚನೆಯನ್ನು ಸೆ.30ರಂದು ಪ್ರಕಟಿಸಲಾಗಿದ್ದು, ಆಕ್ಷೇಪಣೆಗಳ ಅವಧಿ ಮುಗಿದಿದೆ. ಪರಿಶೀಲನೆಯ ನಂತರ ಅಂತಿಮ ಅಧಿಸೂಚನೆಯನ್ನು ಶೀಘ್ರದಲ್ಲೇ ಹೊರಡಿಸಲಾಗುವುದು ಎಂದು ಹೇಳಿದರು.
ಬೆಂಗಳೂರು ಮಧ್ಯ: 2,319
ಬೆಂಗಳೂರು ಉತ್ತರ: 3,375
ಬೆಂಗಳೂರು ಪೂರ್ವ: 3,325
ಬೆಂಗಳೂರು ಪಶ್ಚಿಮ: 5,530
ಬೆಂಗಳೂರು ದಕ್ಷಿಣ: 3,136
ಬಿ.ಸ್ಮೈಲ್: 239
ಒಟ್ಟು: 17,924 ಗುಂಡಿಗಳನ್ನು ಮುಚ್ಚಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
Advertisement