

ಬೆಂಗಳೂರು: ಸಾಲದ ಹೊರೆ ತಾಳಲಾರದೆ ವಿಡಿಯೋ ಮಾಡಿಟ್ಟು ಬಿಜೆಪಿ ಕಾರ್ಯಕರ್ತರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನಯೊಂದು ನೆ ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಲ್ಲೇಶ್ವರದ ಬಿಜೆಪಿ ಮಂಡಲದ ಕಾರ್ಯಕರ್ತನಾಗಿದ್ದ ಎಂ.ವೆಂಕಟೇಶ್ (50) ಆತ್ಮಹತ್ಯೆಗೆ ಶರಣಾದ ವ್ಯಕ್ತಿಯಾಗಿದ್ದಾರೆ. ಮಾಜಿ ಡಿಸಿಎಂ ಅಶ್ವತ್ಥ್ ನಾರಾಯಣ್ ಹಾಗೂ ಸಂಸದ ಪಿ.ಸಿ.ಮೋಹನ್ ಅವರಿಗೂ ಆಪ್ತನಾಗಿದ್ದ ಇವರು, ಹಲವು ವರ್ಷಗಳಿಂದ ಬಿಜೆಪಿ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು.
ವೈಯಾಲಿಕಾವಲ್‌ನ ವಿನಾಯಕ ವೃತ್ತದ ಬಳಿ ವೆಂಕಿ ಟೂರ್ಸ್ ಅಂಡ್ ಟ್ರಾವೆಲ್ಸ್ ನಡೆಸುತ್ತಿದ್ದ ಇವರು, ನಿನ್ನೆ ಸಂಜೆ ಟ್ರಾವೆಲ್ಸ್ ಕಚೇರಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಮೃತದೇಹವನ್ನ ಬೌರಿಂಗ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ.
ವೆಂಕಟೇಶ್ ಆಗಾಗ್ಗೆ ಸ್ನೇಹಿತರೊಂದಿಗೆ ಹೊರಗೆ ಹೋಗುತ್ತಿದ್ದರಿಂದ, ಅವರ ಕುಟುಂಬವು ಅವರನ್ನು ಹುಡುಕಿರಲಿಲ್ಲ. ಬುಧವಾರ ಸಂಜೆ, ಕಚೇರಿಯಿಂದ ದುರ್ವಾಸನೆ ಬರುತ್ತಿದ್ದುದನ್ನು ಗಮನಿಸಿದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹಣಕಾಸು ನಷ್ಟದಿಂದಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆಪ್ತ ಮೂಲಗಳಿಂದ ತಿಳಿದುಬಂದಿದೆ.
ವೆಂಕಟೇಶ್ ಅವರು ಚೀಟಿ ವ್ಯವಹಾರ ನಡೆಸುತ್ತಿದ್ದು, ಅವರಿಗೆ 7 ಜನ ಚೀಟಿ ಹಣ ಕಟ್ಟದೇ ಮೋಸ ಮಾಡಿದ್ದರು. ಇದೇ ಸಮಯದಲ್ಲಿ ಚೀಟಿ ಕಟ್ಟಿದ್ದ ಇನ್ನುಳಿದ ನಾಲ್ವರು ಹಣಕ್ಕಾಗಿ ಕಿರುಕುಳ ನೀಡುತ್ತಿದ್ದರು. ಇದರಿಂದ ಮಾನಸಿಕ ಹಿಂಸೆ ಅನುಭವಿಸುತ್ತಿದ್ದ ವೆಂಕಟೇಶ್, ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಹೇಳಲಾಗುತ್ತಿದೆ.
ಸಾಯುವ ಮುನ್ನ ವಿಡಿಯೋ ಮಾಡಿಟ್ಟಿರುವ ವೆಂಕಟೇಶ್ ಅವರು ಹಣಕಾಸು ನಷ್ಟದ ಬಗ್ಗೆ ಹೇಳಿಕೊಂಡಿದ್ದಾರೆ. ಜೊತೆಗೆ ಜೀವನದಲ್ಲಿ ಏನಾದರೂ ಆಗಿ ಚೀಟಿ ಏಜೆಂಟ್ ಆಗಬೇಡಿ ಎಂದು ಕಣ್ಣೀರಿಟ್ಟು ಹೇಳಿರುವುದು ಕಂಡು ಬಂದಿದೆ. ಇದೇ ವೇಳೆ ಪ್ರಮುಖ ಮುಖಂಡರು ಪರಿಚಸ್ಥರಾಗಿದ್ದರೂ ಯಾರೂ ನೆರವಿಗೆ ಬರಲಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ.
ವೆಂಕಟೇಶ್ ಅವರ ಇಬ್ಬರು ತಂಗಿಯರು ಬಿಜೆಪಿ ಮಹಿಳಾ ಮೋರ್ಚಾದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ,ವೈಯಾಲಿಕಾವಲ್ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
Advertisement