

ಬೆಂಗಳೂರು: ಪ್ರಯಾಣಿಕರೊಬ್ಬರು ಆಟೋದಲ್ಲೇ ಬಿಟ್ಟು ಹೋಗಿದ್ದ ಹಣವಿದ್ದ ಬ್ಯಾಗ್ ಅನ್ನು ಚಾಲಕರೊಬ್ಬರು ಹಿಂದುರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಹೌದು.. ಬೆಂಗಳೂರು ಆಟೋ ಚಾಲಕರು ಸದಾಕಾಲ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ರಸ್ತೆ ಜಗಳ, ದುಬಾರಿ ಹಣ ಕೇಳುವುದು.. ಪ್ರಯಾಣಿಕರೊಂದಿಗೆ ವಾಗ್ವಾದ ಕಾರಣಗಳಿಂದಾಗಿ ಸುದ್ದಿಗೆ ಗ್ರಾಸವಾಗುತ್ತಿದ್ದ ಆಟೋ ಚಾಲಕರ ಮಧ್ಯೆ ಇಲ್ಲೋರ್ವ ಚಾಲಕ ಪ್ರಾಮಾಣಿಕತೆ ಮೆರೆದು ಸುದ್ದಿಗೆ ಗ್ರಾಸವಾಗಿದ್ದಾರೆ.
ಕಲಬುರಗಿ ಮೂಲದ ಆಟೋ ಚಾಲಕ ರಾಜು ಎಂಬುವವರು ತಮ್ಮ ಆಟೋದಲ್ಲಿ ಪ್ರಯಾಣಿಕರೊಬ್ಬರು ಬಿಟ್ಟು ಹೋಗಿದ್ದ ಹಣದ ಬ್ಯಾಗ್ ಅನ್ನು ವ್ಯಕ್ತಿಗೆ ಹಿಂದುರುಗಿಸಿದ್ದಾರೆ.
ಮಗಳ ಮದುವೆಗೆ ತಂದಿದ್ದ ಹಣ
ಪ್ರಯಾಣಿಕರು ಸ್ಪಷ್ಟಪಡಿಸಿರುವಂತೆ ಇದೇ ಶನಿವಾರ ಮತ್ತು ಭಾನುವಾರ ಮಗಳ ಮದುವೆ ಇತ್ತು. ಹೀಗಾಗಿ ಮದುವೆ ಛತ್ರಕ್ಕೆ ಹಣ ಕಟ್ಟಲು ಬ್ಯಾಗ್ ನಲ್ಲಿ ಹಣ ತರಲಾಗಿತ್ತು. ಆದರೆ ಆಟೋ ಇಳಿಯುವಾಗ ಆತುರದಲ್ಲಿ ಹಣ ಬಿಟ್ಟು ಹೋಗಿದ್ದರು. ಆದರೆ ಬಳಿಕ ಆಟೋ ಚಾಲಕ ರಾಜು ಇದನ್ನು ಗಮನಿಸಿದ್ದಾರೆ.
ಬಳಿಕ ಸ್ನೇಹಿತರೊಂದಿಗೆ ಸೇರಿ ಬ್ಯಾಗ್ ನಲ್ಲಿದ್ದ ದಾಖಲೆಗಳಲ್ಲಿದ್ದ ಮೊಬೈಲ್ ನಂಬರ್ ಮೂಲಕ ಪ್ರಯಾಣಿಕರನ್ನು ಸಂಪರ್ಕಿಸಿದ್ದಾರೆ. ಈ ವೇಳೆ ಸ್ಥಳಕ್ಕಾಗಮಿಸಿದ ಪ್ರಯಾಣಿಕರು ಚಾಲಕರಿಂದ ಹಣ ಪಡೆದು ನಡೆದ ವಿಚಾರ ತಿಳಿಸಿದ್ದಾರೆ.
ಇದೇ ಶನಿವಾರ ಭಾನುವಾರ ಮದುವೆ ಇತ್ತು. ಹೀಗಾಗಿ ಮದುವೆ ಖರ್ಚಿಗಾಗಿ ಬ್ಯಾಂಕ್ ನಿಂದ ಹಣ ಡ್ರಾ ಮಾಡಿ ಬ್ಯಾಗ್ ನಲ್ಲಿ ತಂದಿದ್ದೆ. ಛತ್ರಕ್ಕೆ ಹಣ ಕಟ್ಟಲು ಹೋಗಿದ್ದಾಗ ಆಟೋದಲ್ಲೇ ಹಣದ ಬ್ಯಾಗ್ ಮರೆತು ಹೋಗಿದ್ದೆ ಎಂದು ಹೇಳಿದ್ದಾರೆ.
ಬಳಿಕ ಆಟೋ ಚಾಲಕನ ಪ್ರಮಾಣಿಕತೆಯನ್ನು ತುಂಬು ಹೃದಯದಿಂದ ಶ್ಲಾಘಿಸಿ ಅವರ ಕೈಗೆ ಬಲವಂತವಾಗಿ ಕೊಂಚ ಹಣ ಕೊಟ್ಟು ಧನ್ಯವಾದ ಹೇಳಿದ್ದಾರೆ. ಈ ಕುರಿತ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
Advertisement