

ಬೆಂಗಳೂರು: ವಸತಿ ಪ್ರದೇಶಗಳಲ್ಲಿನ ಅಕ್ರಮ ವಾಣಿಜ್ಯ ಚಟುವಟಿಕೆಗಳ ವಿರುದ್ಧ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ಅವರು 20 ದಿನಗಳ ಅಭಿಯಾನವನ್ನು ಪ್ರಾರಂಭಿಸಿದ್ದಾರೆ.
ಕರ್ನಾಟಕ ಹೈಕೋರ್ಟ್ ರಿಟ್ ಅರ್ಜಿಗಳನ್ನು ಆಧರಿಸಿ (3676/2008 ಮತ್ತು 43472-43474/2011), 40 ಅಡಿಗಿಂತ ಕಡಿಮೆ ಅಗಲವಿರುವ ಎಲ್ಲಾ ರಸ್ತೆಗಳಲ್ಲಿನ ವಸತಿ/ಅರೆ ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಿರ್ಬಂಧಿಸುವ ಮಾರ್ಗಸೂಚಿಗಳನ್ನು ಹೊರಡಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ವಸತಿ ಪ್ರದೇಶಗಳಲ್ಲಿನ ವಾಣಿಜ್ಯ ಚಟುವಟಿಕೆಗಳನ್ನು ತಡೆಯಲು ಅಧಿಕೃತ ಮತ್ತು ಅನಧಿಕೃತ ವಾಣಿಜ್ಯ ಉದ್ಯಮಗಳ ಪರವಾನಗಿಗಳ ಪರಿಶೀಲನೆ ಪ್ರಕ್ರಿಯೆಯು ನವೆಂಬರ್ 17 ರಿಂದ ಪ್ರಾರಂಭವಾಗಲಿದೆ. ನಿಗದಿತ ವಾರ್ಡ್‌ಗಳಲ್ಲಿ ವಿವರಗಳನ್ನು ಪ್ರತಿದಿನ ಸಂಗ್ರಹಿಸಿ, ನಿಗದಿತ ನಮೂನೆಗಳಲ್ಲಿ ಭರ್ತಿ ಮಾಡಿ, ಮಾಹಿತಿ ಒದಗಿಸಬೇಕೆಂದು ಕೆ.ಎನ್. ರಮೇಶ್ ಅವರು ಹೇಳಿದ್ದಾರೆ.
ಅಧಿಕಾರಿಗಳು ಸ್ಥಳದಲ್ಲಿ ಪರಿಶೀಲನೆ ನಡೆಸುವ ಸಂದರ್ಭದಲ್ಲಿ ಪರವಾನಗಿ ಪಡೆದ ವ್ಯವಹಾರಗಳು ನಿಯಮಗಳ ಪ್ರಕಾರ ನಡೆಯುತ್ತಿವೆಯೇ? ಆಸ್ತಿ ತೆರಿಗೆಯನ್ನು ಪಾವತಿಸುತ್ತಿದ್ದಾರೆಯೇ ಎಂಬ ಬಗ್ಗೆ ಉದ್ಯಮಿಗಳಿಂದ ಮಾಹಿತಿಯನ್ನು ಸಂಗ್ರಹಿಸುತ್ತಾರೆ. ಈ ಪರಿಶೀಲನಾ ಪ್ರಕ್ರಿಯೆಯು ಇಂದಿನಿಂದ (ಸೋಮವಾರ) ಪ್ರಾರಂಭವಾಗಿದ್ದು, ಮುಂದಿನ 20 ದಿನಗಳವರೆಗೆ ನಡೆಯಲಿದೆ. ನಿಗದಿತ ಮೊತ್ತಕ್ಕಿಂತ ಕಡಿಮೆ ತೆರಿಗೆ ಮೊತ್ತವನ್ನು ಪಾವತಿಸುವ ಉದ್ಯಮಿಗಳಿಂದ ನಿಯಮಗಳ ಪ್ರಕಾರ ಪರಿಷ್ಕೃತ ಮೊತ್ತವನ್ನು ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಅಕ್ರಮವಾಗಿ ನಡೆಯುತ್ತಿರುವ ವ್ಯವಹಾರಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
Advertisement