

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿ ನೂತವಾಗಿ ರಚಿಸಲಾದ ಐದು ನಗರ ಪಾಲಿಕೆಗಳ ವಾರ್ಡ್‌ವಿಂಗಡಣೆಯ ಅಂತಿಮ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಪ್ರಕಟಿಸಿದ್ದು, ಈ ಸಂಬಂಧ ನಗರಾಭಿವೃದ್ಧಿ ಇಲಾಖೆ ಅಧಿಸೂಚನೆ ಹೊರಡಿಸಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಸ್ತಿತ್ವಕ್ಕೆ ಬಂದ ನಂತರ ಸೆ.2ರಂದು ಜಿಬಿಎ ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ವಾರ್ಡ್ ವಿಂಗಡಣಾ ಆಯೋಗ ರಚನೆ ಮಾಡಲಾಗಿತ್ತು.
ಆಯೋಗದ ವರದಿ ಆಧಾರಿಸಿ ನಗರಾಭಿವೃದ್ಧಿ ಇಲಾಖೆಯು ಸೆ.30 ರಂದು ಐದು ನಗರ ಪಾಲಿಕೆಯ ವಾರ್ಡ್ ವಿಂಗಡಣೆಯ ಕರಡು ಅಧಿಸೂಚನೆ ಹೊರಡಿಸಿ ಆಕ್ಷೇಪಣೆ ಸಲ್ಲಿಕೆಗೆ 15 ದಿನ ಕಾಲಾವಕಾಶ ನೀಡಲಾಗಿತ್ತು.
ಈ ಸಂಬಂಧ 4 ಸಾವಿರಕ್ಕೂ ಅಧಿಕ ಆಕ್ಷೇಪಣೆ ಸಲ್ಲಿಕೆಯಾಗಿದ್ದವು. ಆ ಆಕ್ಷೇಪಣೆಗಳನ್ನು ಪರಿಶೀಲನೆ ಮಾಡಿ ಇದೀಗ ಅಂತಿಮ ಅಧಿಸೂಚನೆ ಮೂಲಕ ವಾರ್ಡ್ ಸಂಖ್ಯೆಯನ್ನು ಅಂತಿಮಗೊಳಿಸಿದೆ.
ಬೆಂಗಳೂರು ಪಶ್ಚಿಮ ನಗರ ಪಾಲಿಕೆಯಲ್ಲಿ ಕರಡು ಅಧಿಸೂಚನೆಯಲ್ಲಿ 111 ವಾರ್ಡ್‌ಗಳಿದ್ದವು. ಅಂತಿಮ ಅಧಿಸೂಚನೆಯಲ್ಲಿ ಈ ಸಂಖ್ಯೆ 112ಕ್ಕೇರಿದೆ. ಇನ್ನುಳಿದ ನಾಲ್ಕು ನಗರ ಪಾಲಿಕೆಗಳ ವಾರ್ಡ್ ಸಂಖ್ಯೆಯಲ್ಲಿ ಬದಲಾವಣೆಯಾಗಿಲ್ಲ. ಐದು ನಗರ ಪಾಲಿಕೆಗಳಲ್ಲಿ ಒಟ್ಟಾರೆ 369 ವಾರ್ಡ್‌ಗಳಿವೆ.
ಈ ಮೂಲಕ ಸೆಪ್ಟೆಂಬರ್ 10, 2020 ರಿಂದ ಬಾಕಿ ಉಳಿದಿದ್ದ ಪಾಲಿಕೆ ಚುನಾವಣೆಗಳ ನಡೆಸಲು ಸರ್ಕಾರವು ಒಂದು ಪ್ರಮುಖ ಅಡಚಣೆಯನ್ನು ತೆರವುಗೊಳಿಸಿದೆ.
ಸೆಪ್ಟೆಂಬರ್ 29 ರಂದು ಹೊರಡಿಸಲಾದ ಕರಡು ಅಧಿಸೂಚನೆಯು ಬೆಂಗಳೂರು ಕೇಂದ್ರದಲ್ಲಿ 63, ಬೆಂಗಳೂರು ಉತ್ತರದಲ್ಲಿ 72, ಬೆಂಗಳೂರು ಪೂರ್ವದಲ್ಲಿ 50, ಬೆಂಗಳೂರು ಪಶ್ಚಿಮದಲ್ಲಿ 111 ಮತ್ತು ಬೆಂಗಳೂರು ದಕ್ಷಿಣದಲ್ಲಿ 72 ವಾರ್ಡ್ ಗಳನ್ನು ಪ್ರಸ್ತಾಪಿಸಿತ್ತು. ಈ ಸಂಬಂಧ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಆಹ್ವಾನಿಸಲಾಗಿತ್ತು.
ಬೆಂಗಳೂರಿನ ಜನಸಂಖ್ಯೆಯು 2011 ರಲ್ಲಿ 84 ಲಕ್ಷದಿಂದ 2025 ರಲ್ಲಿ ಅಂದಾಜು 144 ಲಕ್ಷಕ್ಕೆ ವೇಗವಾಗಿ ವಿಸ್ತರಿಸುತ್ತಿರುವುದರಿಂದ, ಪರಿಣಾಮಕಾರಿ ಆಡಳಿತಕ್ಕಾಗಿ ಉತ್ತಮ ನಿರ್ವಹಣೆ ಅತ್ಯಗತ್ಯವಾಗಿದೆ. ಅಂತಿಮ ಅಧಿಸೂಚನೆಯ ನಂತರ, ಸರ್ಕಾರವು ನವೆಂಬರ್ 30 ರ ಹೊತ್ತಿಗೆ ವಾರ್ಡ್‌ವಾರು ಮೀಸಲಾತಿ ಪಟ್ಟಿಯನ್ನೂ ಸಹ ಪೂರ್ಣಗೊಳಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿನ ಸ್ಥಳೀಯ ಸಂಸ್ಥೆಯ ಚುನಾವಣೆ ನಡೆದು ಬರೋಬ್ಬರಿ 10 ವರ್ಷ ಕಳೆದಿದ್ದು, 2015ರಲ್ಲಿ ಬಿಬಿಎಂಪಿಯ 198 ವಾರ್ಡ್‌ಗೆ ಚುನಾವಣೆ ನಡೆದಿತ್ತು.
ಆಯ್ಕೆಯಾದ ಜನಪ್ರತಿನಿಧಿಗಳು ಐದು ವರ್ಷ ಆಡಳಿತ ನಡೆಸಿ 2020ರ ಸೆಪ್ಟೆಂಬರ್‌ಗೆ ಅಧಿಕಾರ ಪೂರ್ಣಗೊಳಿಸಿದ್ದರು. ಆ ಬಳಿಕ 2 ಬಾರಿ ವಾರ್ಡ್ ವಿಂಗಡಣೆ ನಡೆಸಲಾಗಿತ್ತು. ಆದರೆ, ಚುನಾವಣೆ ನಡೆದಿರಲಿಲ್ಲ. ಇದೀಗ ಬಿಬಿಎಂಪಿ ವಿಸರ್ಜನೆ ಮಾಡಿ ಗ್ರೇಟರ್ ಬೆಂಗ ಳೂರು ಪ್ರಾಧಿಕಾರ ರಚನೆ ಮಾಡಿ, ಅದರಡಿ ಐದು ನಗರ ಪಾಲಿಕೆ ಸೃಷ್ಟಿ ಮಾಡಲಾಗಿದೆ.
ಐದೂ ನಗರ ಪಾಲಿಕೆಗೆ ವಾರ್ಡ್ ವಿಂಗಡಣೆ ಅಂತಿಮಗೊಳಿಸಲಾಗಿದ್ದು, ವಾರ್ಡ್‌ಗೆ ಮೀಸಲಾತಿ ನಿಗದಿಪಡಿಸಿ ಚುನಾವಣೆ ಅಧಿಸೂಚನೆ ಹೊರಡಿಸುವುದಷ್ಟೇ ಬಾಕಿ ಇದೆ.
Advertisement