

ಬೆಂಗಳೂರು: ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಬುಧವಾರ ಬಿಡುಗಡೆ ಮಾಡಿದ ಬೆಂಗಳೂರು ನಾವೀನ್ಯತೆ ವರದಿಯಲ್ಲಿ, ಬೆಂಗಳೂರು 2035 ರವರೆಗೆ ವಾರ್ಷಿಕ ಶೇ. 8.5 ರಷ್ಟು ಬೆಳೆವಣಿಗೆ ಸಾಧಿಸುತ್ತಿದೆ ಎಂದು ಹೇಳಲಾಗಿದ್ದು, ಸಿಲಿಕಾನ್ ಸಿಟಿ ಮುಂಬೈ(6.6%) ಮತ್ತು ದೆಹಲಿ(6.5%)ಗಿಂತ ಬಹಳ ಮುಂದಿದೆ.
ಭಾರತದ ಜಾಗತಿಕ ಸಾಮರ್ಥ್ಯ ಕೇಂದ್ರಗಳಲ್ಲಿ(ಜಿಸಿಸಿ) ಶೇ. 40 ರಷ್ಟು ಬೆಂಗಳೂರಿನಲ್ಲಿ ನೆಲೆಗೊಂಡಿದ್ದು, ಇದು ದೇಶದಲ್ಲಿಯೇ ಅತಿ ಹೆಚ್ಚು, ಮತ್ತು ಇದು 2029ರ ವೇಳೆಗೆ ದ್ವಿಗುಣಗೊಳ್ಳುವ ನಿರೀಕ್ಷೆಯಿದೆ.
ಜಾಗತಿಕ ತಂತ್ರಜ್ಞಾನ ದೈತ್ಯರು ಭಾರತದ ಎಐ-ಕ್ವಾಂಟಮ್ ಕಂಪ್ಯೂಟಿಂಗ್ ಹಾಟ್‌ಸ್ಪಾಟ್ ಆಗಲು ಬೆಂಗಳೂರನ್ನು ಏಕೆ ಆಯ್ಕೆ ಮಾಡುತ್ತಿದ್ದಾರೆ ಎಂಬುದನ್ನು ಈ ವರದಿ ಎತ್ತಿ ತೋರಿಸುತ್ತಿದೆ.
ವರದಿಯ ಪ್ರಕಾರ, ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ವೃತ್ತಿಪರರ ಸರಾಸರಿ ವಾರ್ಷಿಕ ವೇತನ 12,000 ಡಾಲರ್ ಆಗಿರುವುದರಿಂದ ಕಾರ್ಪೊರೇಟ್ ವೆಚ್ಚ ಕಡಿಮೆ ಇದೆ. ಇದು ಇತರ ಅಂತರರಾಷ್ಟ್ರೀಯ ನಗರಗಳಿಗಿಂತ ಗಣನೀಯವಾಗಿ ಕಡಿಮೆಯಾಗಿದೆ. ಹೀಗಾಗಿ ಜಾಗತಿಕ ತಂತ್ರಜ್ಞಾನ ದೈತ್ಯರು ಬೆಂಗಳೂರನ್ನು ಆಯ್ಕೆ ಮಾಡುತ್ತಿದ್ದಾರೆ.
ಬೆಂಗಳೂರಿನಲ್ಲಿ ಕಚೇರಿ ಸ್ಥಳ ಬಾಡಿಗೆಯ ವೆಚ್ಚವು ಬೀಜಿಂಗ್‌ನಲ್ಲಿನ ಮೂರನೇ ಒಂದು ಭಾಗದಷ್ಟಿದೆ. ಹೆಚ್ಚುವರಿಯಾಗಿ, ಬೆಂಗಳೂರಿನಲ್ಲಿರುವ ಜಿಸಿಸಿ ಪ್ರತಿಭಾನ್ವಿತ ಗುಂಪಿನಲ್ಲಿ ಶೇ, 48 ರಷ್ಟು ಜನ ಎಂಜಿನಿಯರಿಂಗ್, ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಉನ್ನತ ಮಟ್ಟದ ಪಾತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ, ಈ ನಗರವು ಅತ್ಯಂತ ಕೈಗೆಟುಕುವ ವಸತಿ ಸೌಲಭ್ಯವನ್ನು ಹೊಂದಿದೆ ಮತ್ತು ಜೀವನ ವೆಚ್ಚದ ದೃಷ್ಟಿಯಿಂದ ಪ್ರಮುಖ ಜಾಗತಿಕ ನವೋದ್ಯಮ ಪರಿಸರ ವ್ಯವಸ್ಥೆಗಳಲ್ಲಿ ಅತ್ಯಂತ ಅಗ್ಗವಾಗಿದೆ.
ಬೆಂಗಳೂರು ಭಾರತದ ತಂತ್ರಜ್ಞಾನ ಪ್ರತಿಭೆಗಳ ಎಂಜಿನ್ ಆಗಿದ್ದು, ಇದು ದೇಶದ ತಂತ್ರಜ್ಞಾನ ಮತ್ತು ಮಾನವ ಬಂಡವಾಳ ಕೇಂದ್ರವಾಗಿದೆ ಎಂದು ವರದಿ ಹೇಳುತ್ತದೆ.
ಬೆಂಗಳೂರಿನಲ್ಲಿ ಮಹಿಳೆಯರು ನೇತೃತ್ವದ ನವೋದ್ಯಮಗಳು ಅಭಿವೃದ್ಧಿ ಹೊಂದಿವೆ. ಬೆಂಗಳೂರಿನಲ್ಲಿ ಮಹಿಳಾ ಉದ್ಯಮಿಗಳು ಸಂಗ್ರಹಿಸಿದ ಒಟ್ಟು ಬಂಡವಾಳ 13.4 ಬಿಲಿಯನ್ ಡಾಲರ್ ಆಗಿದ್ದು, ಇದು ಭಾರತದ ಇತರ ನಗರಗಳಲ್ಲಿಯೇ ಅತ್ಯಧಿಕ ಎಂದು ವರದಿ ಹೇಳುತ್ತದೆ.
ಬೆಂಗಳೂರು ವಿಶ್ವದ 5ನೇ ಅತಿದೊಡ್ಡ ಯುನಿಕಾರ್ನ್ ಕೇಂದ್ರ
ಬೆಂಗಳೂರು ಈಗ ವಿಶ್ವದ ಐದನೇ ಅತಿದೊಡ್ಡ ಯುನಿಕಾರ್ನ್ ಕೇಂದ್ರವಾಗಿದೆ. ಭಾರತದ ಒಟ್ಟು 353 ಬಿಲಿಯನ್ ಡಾಲರ್ ಮೌಲ್ಯದ 122 ಯುನಿಕಾರ್ನ್‌ಗಳಲ್ಲಿ, ಒಟ್ಟು 53 ಯುನಿಕಾರ್ನ್‌ಗಳು(1 ಬಿಲಿಯನ್ ಡಾಲರ್ ಮೌಲ್ಯದ ಸ್ಟಾರ್ಟ್‌ಅಪ್‌ಗಳು) ನಗರದಲ್ಲಿವೆ. ಅವುಗಳ ಒಟ್ಟು ಮೌಲ್ಯಮಾಪನವು 1.70 ಲಕ್ಷ ಕೋಟಿ ರೂ.(192 ಬಿಲಿಯನ್ ಡಾಲರ್) ಎಂದು ಅಂದಾಜಿಸಲಾಗಿದೆ. ಬೆಂಗಳೂರು ಮೂಲದ ಯುನಿಕಾರ್ನ್‌ಗಳು ಭಾರತದ ಒಟ್ಟು ಯುನಿಕಾರ್ನ್ ಮೌಲ್ಯಮಾಪನದ ಶೇ. 42 ರಷ್ಟು ಕೊಡುಗೆ ನೀಡುತ್ತಿವೆ.
'ಸೂನಿಕಾರ್ನ್'ಗಳನ್ನು ಸಹ ಆಕರ್ಷಿಸುತ್ತಿದೆ ಬೆಂಗಳೂರು
ಬೆಂಗಳೂರು 'ಸೂನಿಕಾರ್ನ್'ಗಳನ್ನು(ಯುನಿಕಾರ್ನ್‌ಗಳಾಗುವ ಹಾದಿಯಲ್ಲಿರುವ ಸ್ಟಾರ್ಟ್‌ಅಪ್‌ಗಳು) ಸಹ ಒಂದು ಆಯಸ್ಕಾಂತದಂತೆ ಆಕರ್ಷಿಸುತ್ತಿದ್ದು, ನಗರವು 39 ಸೂನಿಕಾರ್ನ್‌ಗಳಿಗೆ ನೆಲೆಯಾಗಿದೆ. ದೆಹಲಿ-ಎನ್‌ಸಿಆರ್ (30) ಮತ್ತು ಮುಂಬೈ (21) ಗಿಂತ ಬೆಂಗಳೂರು ಮುಂದಿದೆ. ಇದು ವಿಶ್ವ ದರ್ಜೆಯ ತಂತ್ರಜ್ಞಾನ ಪ್ರತಿಭೆಗಳನ್ನು ಪೋಷಿಸುವಲ್ಲಿ ಬೆಂಗಳೂರಿನ ಪ್ರಾಬಲ್ಯವನ್ನು ಪ್ರತಿಬಿಂಬಿಸುತ್ತದೆ.
Advertisement