

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅಡಿಯಲ್ಲಿ ಬರುವ 369 ವಾರ್ಡ್‌ಗಳ ವಾರ್ಡ್ ಮೀಸಲಾತಿ ಪಟ್ಟಿ ಸಿದ್ಧವಾಗಿದ್ದು, ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ಬುಧವಾರ ಹೇಳಿದರು.
ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರ ಜನ್ಮ ದಿನಾಚರಣೆಯಂದು ಬುಧವಾರ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಜಿಬಿಎ ಮೂಲಕ 369 ವಾರ್ಡ್‌ಗಳನ್ನು ಮಾಡಲಾಗಿದ್ದು, ಸದ್ಯದಲ್ಲೇ ಚುನಾವಣೆ ನಡೆಯಲಿದೆ. ಜೊತೆಗೆ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಯಲಿದೆ. ಪಾಲಿಕೆ ಚುನಾವಣೆಯ ವಾರ್ಡ್ ಮೀಸಲಾತಿ ಪಟ್ಟಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಹೇಳಿದರು.
ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವವರಿಗೆ ಅರ್ಜಿ ಕರೆಯಲಾಗುವುದು. ಈಗ ಹೊಸ ಮತದಾರರ ಪಟ್ಟಿ ರಚನೆಯಾಗಲಿದೆ. ಕೂಡಲೇ ಮನೆ ಮನೆಗೆ ಹೋಗಿ ಖಾತಾ ಯೋಜನೆ, ಆಸ್ತಿ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಿಳಿಸಿ ಪ್ರಚಾರ ಮಾಡಬೇಕು ಎಂದು ಕರೆ ನೀಡಿದರು.
ಇಂದಿರಾ ಗಾಂಧಿ ದೇಶಕ್ಕಾಗಿ ಶ್ರಮಿಸಿದ್ದರು. ಅವರು ಮಹಿಳಾ ಸಬಲೀಕರಣವನ್ನು ಪ್ರತಿನಿಧಿಸುತ್ತಾರೆ. ಅದಕ್ಕಾಗಿಯೇ ನಾವು ಉದಯೋನ್ಮುಖ ನಾಯಕರಿಗೆ ಹೆಚ್ಚಿನ ಶಕ್ತಿಯನ್ನು ನೀಡಬೇಕಾಗಿದೆ ಎಂದು ಹೇಳಿದರು.
Advertisement